ನಿಜ ಭಕ್ತ ‘ಇವೆಂಟ್ ಮ್ಯಾನೇಜ್‌ಮೆಂಟ್’ ಮಾಡುವುದಿಲ್ಲ

ಇಂದು ಧರ್ಮ -ದೇವರ ಶೋಷಣೆ ಹೆಚ್ಚಾಗಿದೆ: ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ

ಮೌಖಿಕ ಭಾಷೆಯಲ್ಲಿ ಶುದ್ಧತೆ ಹುಡುಕುವುದೇ ಅಶುದ್ಧತೆ

ಬರಹಕ್ಕೆ  ಶುದ್ಧತೆ ಇರಬೇಕೇ ಹೊರತು, ಮೌಖಿಕ ಭಾಷೆಗೆ ಶುದ್ಧತೆ ಬೇಕಿಲ್ಲ. ಮೌಖಿಕ ಭಾಷೆಯಲ್ಲಿ ಶುದ್ಧತೆ ಹುಡುಕು ವುದೇ ಅಶುದ್ಧತೆ ಹಾಗೂ ಅಪ್ರಸ್ತುತ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ. ಮರಾಠಿ, ಇಂಗ್ಲಿಷ್, ಪಾರ್ಸಿ ಸೇರಿದಂತೆ ಹಲವಾರು ಭಾಷೆಗಳ ಪದ ಗಳನ್ನು ಜನರು ಮೌಖಿಕವಾಗಿ ಕನ್ನಡಕ್ಕೆ ತಂದಿದ್ದಾರೆ. ಶಬ್ದಕೋಶಗಳಲ್ಲಿ ಸಿಗದ ಹೊಸ ಹೊಸ ಪದಗಳನ್ನು ಜನರೇ ಹುಟ್ಟು ಹಾಕಿದ್ದಾರೆ. ಹೀಗಾಗಿ ಮೌಖಿಕ ಭಾಷೆ ಯಲ್ಲಿ ಜನ ಬಳಕೆಯೇ ಮಾನದಂಡ, ಇಲ್ಲಿ ಸಂವಹ ನವೇ ಮುಖ್ಯವಾಗಿರುತ್ತದೆ ಎಂದರು.

ದಾವಣಗೆರೆ, ಡಿ. 25 – ಧರ್ಮ ಮತ್ತು ದೇವರು ಇಂದು ಅತಿ ಹೆಚ್ಚು ಶೋಷಣೆಗೆ ಹಾಗೂ ದುರುಪಯೋಗಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿರುವ ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ, ನಿಜವಾದ ಭಕ್ತ §ಇವೆಂಟ್ ಮ್ಯಾನೇಜ್‌ಮೆಂಟ್¬ (ಪ್ರದರ್ಶನ ಕಾರ್ಯಕ್ರಮ) ಮಾಡುವುದಿಲ್ಲ ಎಂದಿದ್ದಾರೆ.

ಜಾನಪದ ವಿದ್ವಾಂಸ ಡಾ. ಎಂ.ಜಿ. ಈಶ್ವರಪ್ಪ ಅವರ §ನಿಜದಿಂ ಕುರಿತೋದದೆಯುಂ¬ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ನಗರದ ಕುವೆಂಪು ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಪ್ರತಿಮಾ ಸಭಾ ವತಿಯಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಭಕ್ತಿ ಎಂಬುದು ತೋರಿಕೆಯಲ್ಲ ಎಂದು ವಚನಕಾರರು, ದಾರ್ಶನಿಕರು, ದಾಸರು ಹೇಳುತ್ತಾ ಬಂದಿದ್ದಾರೆ. ಭಕ್ತಿ ತೋರಿಕೆಯದ್ದಲ್ಲ ಎಂಬುದು ನಮ್ಮ ಪರಂಪರೆಯಲ್ಲೇ ಇದೆ. ಇಷ್ಟಾದರೂ, ಇಂದು ಧರ್ಮದ ಅಪವ್ಯಾಖ್ಯಾನ ಮಾಡಲಾಗುತ್ತಿದೆ ಎಂದವರು ವಿಷಾದಿಸಿದರು.

ಶರಣ ಸತಿ – ಲಿಂಗ ಪತಿ ಎಂಬ ಪರಿಕಲ್ಪನೆಯನ್ನು ಉಲ್ಲೇಖಿಸಿದ ಅವರು, ದೈವದ ಜೊತೆ ವ್ಯವಹರಿಸುವುದು ಖಾಸಗಿ ಅನುಸಂಧಾನ. ಹೀಗಾಗಿ ಭಕ್ತಿ ಏಕಾಂತ – ಅಂತರಂಗ ಸ್ವರೂಪದ್ದು ಎಂದವರು ಹೇಳಿದರು.

ಧಾರ್ಮಿಕತೆಗೆ ಮಂತ್ರ ಬೇಕಿಲ್ಲ. ಕೆಲವೊಮ್ಮೆ ಮಂತ್ರಕ್ಕಿಂತ ಉಗುಳೇ ಹೆಚ್ಚಿರುತ್ತದೆ. ಧರ್ಮಕ್ಕೆ ಭಕ್ತಿ ಬೇಕಿದೆ. ಬೇಡರ ಕಣ್ಣಪ್ಪ ಹಾಗೂ ಶಬರಿ ತೋರಿದ ಭಕ್ತಿ  ಬೇಕಿದೆ. ಇಂತಹ ಭಕ್ತಿಗೆ ಯಾವುದೇ ಬೈಲಾ ಇಲ್ಲ ಎಂದವರು ತಿಳಿಸಿದರು.

ಗ್ರಾಮಗಳಲ್ಲಿ ದೇವರನ್ನು ಹೊರಡಿಸುವಾಗ ಕೇವಲ ಆರಾಧನೆ ಇರುವುದಿಲ್ಲ. ಮಳೆ ಬಾರದಿದ್ದಾಗ ದೇವರನ್ನು ಅದಕ್ಕಾಗಿ ಬೈಯ್ಯುವ ಪದ್ಧತಿಗಳೂ ಇವೆ. ಜನ ಸಾಮಾನ್ಯರು ದೇವರನ್ನು ನಮ್ಮ ಜೊತೆಯಲ್ಲಿರುವವನು ಎಂದು ಭಾವಿಸಿದ್ದಾರೆ ಎಂದು ರಾಮಚಂದ್ರಪ್ಪ ಹೇಳಿದರು. 

ಭಾರತ ಏಕ ಸಂಸ್ಕೃತಿಯ ದೇಶವಲ್ಲ. ಕೇವಲ ಗ್ರಾಮಗಳಷ್ಟೇ ಅಲ್ಲ ನಗರಗಳಲ್ಲೂ ಏಕ ಸಂಸ್ಕೃತಿ ಇಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಹಲವಾರು ಹಳ್ಳಿಗಳಿವೆ. ಅಲ್ಲಿ ಕರಗ, ಕಡ್ಲೆಕಾಯಿ ಪರಿಷೆ, ಅಣ್ಣಮ್ಮ ದೇವಿ – ಮಾರಮ್ಮನ ಗುಡಿಗಳಿವೆ. ಹಳ್ಳಿಗಳ ಮನೋಧರ್ಮವೇ ನಗರಗಳಲ್ಲೂ ಇದೆ ಎಂದವರು ವ್ಯಾಖ್ಯಾನಿಸಿದರು.

ಮತ್ತೊಂದೆಡೆ ಗ್ರಾಮಗಳು ಈಗ ಅರೆ ಪಟ್ಟಣಗಳಾಗಿವೆ. ಪಟ್ಟಣಗಳು ಅರೆ ನಗರಗಳಾಗಿವೆ. ನಗರಗಳಲ್ಲಿ ಮಿಶ್ರ ಸಂಸ್ಕೃತಿ ಇದೆ ಎಂದು ರಾಮಚಂದ್ರಪ್ಪ ಹೇಳಿದರು.

ಕೃತಿಕಾರ ಎಂ.ಜಿ. ಈಶ್ವರಪ್ಪ ಮಾತನಾಡಿ, ಹಳ್ಳಿಗಳ ಶಬ್ದ, ಗಾದೆ, ಒಗಟು, ಬೆಡಗು ಇತ್ತೀಚಿನ ಯುವ ಪೀಳಿಗೆಗೆ ಅರ್ಥವಾಗುತ್ತಿಲ್ಲ. ಗ್ರಾಮೀಣ ಆಚಾರ – ವಿಚಾರಗಳ, ನಂಬಿಕೆಗಳ ವಿಶ್ಲೇಷಣೆ ಆಗುತ್ತಿಲ್ಲ. ಹೀಗಾಗಿ 20 ಆಯ್ದ ನಾಟಕಗಳಲ್ಲಿ ಬರುವ ಗ್ರಾಮೀಣ ಭಾಗದ ಮಾತು, ಒಗಟು, ಗಾದೆ ಇತ್ಯಾದಿಗಳನ್ನು ತಮ್ಮ ಕೃತಿಯಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ ಎಂದರು.

ಪುಸ್ತಕದ ಕುರಿತು ಕನ್ನಡ ಪ್ರಾಧ್ಯಾಪಕ ಡಾ. ದಾದಾಪೀರ್ ನವಿಲೇಹಾಳ್ ಹಾಗೂ ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿದರು. ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು.

ಕ.ಸಾ.ಪ. ನಿಕಟಪೂರ್ವ ಜಿಲ್ಲಾಧ್ಯಕ್ಷ ಮಂಜುನಾಥ ಕುರ್ಕಿ ಸ್ವಾಗತಿಸಿದರು. ಪ್ರಹ್ಲಾದ್ ಭಟ್ ಪ್ರಾರ್ಥಿಸಿದರೆ ಸಂಧ್ಯಾ ಸುರೇಶ್ ನಿರೂಪಿಸಿದರು.

error: Content is protected !!