ದಾವಣಗೆರೆ, ಫೆ. 9- ರಾಜ್ಯದಲ್ಲಿರುವ ಅತಿ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಶಕ್ತಿಗಳನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ ಅತಿ ಹಿಂದುಳಿದ ಮಠಾಧೀಶರ ಮಹಾಸಭಾ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಪ್ರಣವಾನಂದ ಸ್ವಾಮೀಜಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಪಕ್ಷದ ಏಳಿಗಾಗಿ ನಿಷ್ಠೆಯಿಂದ ದುಡಿದ ನಮ್ಮ ಸಮಾ ಜದ ನಾಯಕರನ್ನು ಇಂದಿನ ನಾಯಕರು ಸ್ವಾರ್ಥಕ್ಕಾಗಿ ದೂರವಿಟ್ಟಿದ್ದಾರೆ. ಕೆ.ಸಿ.ಕೊಂಡಯ್ಯ, ಶಿವಮೂರ್ತಿ ನಾಯ್ಕ, ಜನಾರ್ದನಾ ಪೂಜಾರಿ ಮತ್ತಿತರೆ ನಾಯಕರನ್ನು ಮೂಲೆಗುಂಪು ಮಾಡಿರುವುದರಿಂದ ನಮ್ಮ ಸಮಾಜಗಳು ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿಯಲು ಕಾರಣವಾಗಿದೆ ಎಂದರು. ಸರ್ಕಾರ ಕಾಂತರಾಜ್ ವರದಿಯನ್ನು ಕೂಡಲೇ ಜಾರಿಗೆ ತರಬೇಕು. ಅತಿ ಹಿಂದುಳಿದ ವರ್ಗಗಳ ಪ್ರತಿ ನಿಗಮಕ್ಕೆ 500 ಕೋಟಿ ರೂ. ಬಿಡುಗಡೆ ಮಾಡಬೇಕು. ಕೋಲಾರ ಕೌನ್ಸಿಲರ್ ಶ್ರೀನಿವಾಸ ಅವರ ಬರ್ಬರ ಹತ್ಯೆಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಕಲಿಕೆ, ಸೌಖ್ಯ ರಕ್ಷಣೆ ಹಿನ್ನೆಲೆಯಲ್ಲಿ ಚಾಲ್ತಿಯಲ್ಲಿರುವ ಕುಲಕಸುಬುಗಳನ್ನು ವ್ಯವಸ್ಥಿತವಾಗಿ ಮಾಡಬೇಕು. ನಿಷೇಧ ಮಾಡಿರುವ ಕುಲಕಸಬುಗಳನ್ನು ಮರಳಿ ನೀಡುವುದು ಅಥವಾ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.
ಜಾತಿ ಮೀಸಲಾತಿ, ಒಳ ಮೀಸಲಾತಿಗಾಗಿ ಹೋರಾಟ ಮಾಡುವ ಅತಿ ಹಿಂದುಳಿದ ವರ್ಗದವರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಶ್ರೀ ಬಸವ ನಾಗೀದೇವ ಸ್ವಾಮೀಜಿ ಮಾತನಾಡಿ, ನಾವು ನಮ್ಮ ಸಮಾಜಕ್ಕಾಗಿ ಸಂವಿಧಾನ ಬದ್ಧ ಹಕ್ಕಿಗಾಗಿ ಒಂದಾಗಿ ಹೋರಾಡಬೇಕಿದೆ ಎಂದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಳ ಮೀಸಲಾತಿ ಜಾರಿಗೆ ತರುವುದಾಗಿ ಹೇಳಿ ಅವಧಿ ಮುಗಿದರೂ ಜಾರಿಗೆ ಬರಲಿಲ್ಲ. ಇದೀಗ ಕಾಂಗ್ರೆಸ್ ಕೂಡ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಬಗ್ಗೆ ಪ್ರಸ್ತಾಪ ಮಾಡಿದೆ. ಇದುವರೆಗೂ ಸಹ ಕಾರ್ಯರೂಪಕ್ಕೆ ತಂದಿಲ್ಲ. ಹಾಗಾಗಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ಪದಾಧಿಕಾರಿ ಗಳಾದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ,
ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ಶ್ರೀ ಮರುಳ ಶಂಕರ ಸ್ವಾಮೀಜಿ ಉಪಸ್ಥಿತರಿದ್ದರು.