ದಾವಣಗೆರೆ, ಮಾ. 11- ಪ್ರವರ್ಗ-1 ರ ಜಾತಿಗಳಿಗೆ ಸೇರಿದ 96 ಜಾತಿಗಳ 46 ಅಲೆಮಾರಿ, ಅರೆ ಅಲೆಮಾರಿ ಜಾತಿಗಳು ಮತ್ತು 376 ಒಳಪಂಗಡಗಳ ಸಮಾಜದ ಜನರ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗುವಂತೆ ಕರ್ನಾಟಕ ರಾಜ್ಯ ಪ್ರವರ್ಗ-1 ರ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಗುತ್ತೂರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವರ್ಗ-1 ರ ಜಾತಿಗಳು ತೀರ ಹಿಂದುಳಿದ್ದು, ಕಡು ಬಡತನದ ಜನರೇ ಹೆಚ್ಚಾಗಿರುವ ಪ್ರವರ್ಗ-1 ರ ಜಾತಿಗಳ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು ದಾಖಲಾತಿ ಸಂದರ್ಭದಲ್ಲಿ ಸೂಕ್ತ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಶಿಕ್ಷಣ ಸಂಸ್ಥೆಗೆ ಸಲ್ಲಿಸಿದರೆ ಅವರಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡುವಂತೆ ಸಂಪೂರ್ಣ ಶೈಕ್ಷಣಿಕ ಶುಲ್ಕ ವಿನಾಯತಿ ನೀಡಬೇಕು. ಪ್ರವರ್ಗ-1 ರ ಜಾತಿಗಳ ವಿದ್ಯಾರ್ಥಿ ವೇತನ ಶುಲ್ಕ ಮರುಪಾವತಿ, ವಿದ್ಯಾಸಿರಿ ಹಾಗೂ ಇನ್ನಿತರೆ ಸೌಲಭ್ಯಗಳು ಶೀಘ್ರವೇ ತಲುಪುವಂತೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಈಗಾಗಲೇ ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡಿರುವ ಉಪ್ಪಾರ, ಜೋಗಿ, ಕಾಟಿಕ್ ಮತ್ತಿತರೆ ಜಾತಿಗಳ ವರದಿಯನ್ನು ಸರ್ಕಾರ ಒಪ್ಪಿಕೊಂಡು ಕೇಂದ್ರ ಸರ್ಕಾರಕ್ಕೆ ಶೀಘ್ರವಾಗಿ ಶಿಫಾರಸ್ಸು ಮಾಡಲು ಕ್ರಮ ಕೈಗೊಳ್ಳುವುದು. ಪ್ರವರ್ಗ-1 ರ ಜಾತಿಗಳಲ್ಲಿ ಕುಲಶಾಸ್ತ್ರೀಯ ಅಧ್ಯಯನ ಆಗದೇ ಇರುವ ಜಾತಿಗಳ ಅಧ್ಯಯನಕ್ಕಾಗಿ 10 ಕೋಟಿ ರೂ.ಗಳ ಅನುದಾನ ಬಿಡುಗಡೆಗೆ ಡಿ.ದೇವರಾಜ ಅರಸ್ ಸಂಶೋಧನಾ ಕೇಂದ್ರಕ್ಕೆ ಹಾಗೂ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಪ್ರವರ್ಗ-1 ರ ಜಾತಿಗಳ ಸಂಘ-ಸಂಸ್ಥೆಗಳಿಗೆ ತಮ್ಮದೇ ಆದ ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನ ನಿರ್ಮಿಸಿಕೊಳ್ಳಲು ಜಿಲ್ಲೆಗಳಲ್ಲಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಅರ್ಧ ಎಕರೆಗೂ ಹೆಚ್ಚು ಜಾಗ ನೀಡುವುದಲ್ಲದೇ, ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡುವುದು. ಈಗಾಗಲೇ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಹಣ ಬಿಡುಗಡೆ ಮಾಡಬೇಕೆಂದರು.
ರಾಜ್ಯದಲ್ಲಿ 90 ಲಕ್ಷಕ್ಕೂ ಅಧಿಕ ಜನರಿದ್ದು, ಸಂಖ್ಯೆಗೆ ಅನುಗುಣವಾಗಿ ಹಾಲಿ ಇರುವ ಶೇ. 4 ರ ಮೀಸಲಾತಿ ಮಿತಿಯನ್ನು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಶೇ.8 ಕ್ಕೆ ಏರಿಸಲು ಶಿಫಾರಸ್ಸು ಮಾಡಿಸಿ ಶೀಘ್ರವೇ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಟಿ. ಶ್ರೀನಿವಾಸ್, ಎಸ್.ಎಂ. ಸುರೇಶ್, ಕೆ.ಹೆಚ್. ಹನುಮಂತರಾಜ, ಎಂ.ಸಿ. ರಮೇಶ್, ಭೋಜರಾಜ್, ಡಿ.ಏಕಾಂತಪ್ಪ ಉಪಸ್ಥಿತರಿದ್ದರು.