ರಾಮರಾಜ್ಯ ಬರಬೇಕಿದೆ ಎಂದ ಸಿಎಂ

ರಾಮರಾಜ್ಯ ಬರಬೇಕಿದೆ ಎಂದ ಸಿಎಂ

ರಾಮ ಮಂದಿರ ಪಕ್ಕದಲ್ಲೇ ವಾಲ್ಮೀಕಿ ಮಂದಿರ ಎಂದ ಸಚಿವ ರಾಜಣ್ಣ

ಹರಿಹರ, ಫೆ. 9 – ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಆಯೋಜಿಸಲಾಗಿದ್ದ ಜನ ಜಾಗೃತಿ ಜಾತ್ರಾ ಮಹೋತ್ಸವದಲ್ಲಿ ಮಾತನಾ ಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ರಾಮ, ರಾಮರಾಜ್ಯ ಮತ್ತು ರಾಮಾಯಣ ಪಠಣದ ಪ್ರಸ್ತಾಪ ಮಾಡಿದರು.

ಶ್ರೀ ರಾಮಚಂದ್ರನ ಆಸ್ಥಾನ ಹಾಗೂ ರಾಜ್ಯ ಈಗಿನ ಪ್ರಜಾಪ್ರಭುತ್ವದ ರೀತಿ ಇತ್ತು. ರಾಮ ರಾಜ್ಯವು ವರ್ಗ – ಜಾತಿ ರಹಿತವಾಗಿತ್ತು. ಎಲ್ಲರಿಗೂ ಸಮಾನ ಅವಕಾಶಗಳಿರುವ ವ್ಯವಸ್ಥೆ ಅವತ್ತೇ ನೋಡಲು ಸಾಧ್ಯವಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ವರ್ಗ – ಜಾತಿ ರಹಿತ, ಸರ್ವರಿಗೂ ಸಮಾನ ಅವಕಾಶಗಳಿರುವ ಸಮಾಜವೇ ರಾಮ ರಾಜ್ಯ. ಹೀಗಾಗಿ ಇವತ್ತೂ ರಾಮ ರಾಜ್ಯ ಬರಬೇಕಿದೆ. ಜಾತಿ – ವರ್ಗ ರಹಿತ ಸಮಾಜ ನಿರ್ಮಾಣವಾಗಬೇಕಿದೆ ಎಂದು ಹೇಳಿದರು.

ಸಹಕಾರ ಸಚಿವರೂ ಆದ ಮಹರ್ಷಿ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್. ರಾಜಣ್ಣ ಮಾತನಾಡಿ, ರಾಮಾಯಣದ ಮೂಲಕ ರಾಮರಾಜ್ಯದ ಪರಿಕಲ್ಪನೆ ಕೊಟ್ಟಿದ್ದು ಮಹರ್ಷಿ ವಾಲ್ಮೀಕಿ. ಆ ರಾಮರಾಜ್ಯದ ಕನಸು ಸಾಕಾರ ಮಾಡುತ್ತಿರುವುದು ಸಿದ್ದರಾಮಯ್ಯ ಎಂದರು.

ಇಡೀ ಭೂಮಂಡಲಕ್ಕೆ ಶ್ರೀರಾಮನನ್ನು ಪರಿಚಯಿಸಿದವರು ಮಹರ್ಷಿ ವಾಲ್ಮೀಕಿ. ಅವರು ರಾಮಾಯಣ ಬರೆಯದೇ ಇದ್ದರೆ ಶ್ರೀರಾಮನ ಪರಿಚಯವೇ ಆಗುತ್ತಿರಲಿಲ್ಲ ಎಂದೂ ಹೇಳಿದರು. ಅಯೋಧ್ಯೆಯಲ್ಲಿ ಮೊದಲು ವಾಲ್ಮೀಕಿ ಮಂದಿರ ಕಟ್ಟುತ್ತಾರೆ ಎಂದು ಕೊಂಡಿದ್ದೆವು. ನಮ್ಮೆಲ್ಲರ ನಿರೀಕ್ಷೆ ಹುಸಿಯಾಗಿದೆ. ಅಲ್ಲಿ ಶ್ರೀರಾಮ ಮಂದಿರದ ಪಕ್ಕದಲ್ಲೇ ಭವ್ಯ ವಾಲ್ಮೀಕಿ ಮಂದಿರ ಕಟ್ಟುವುದು ನಮ್ಮ ಗುರಿ ಎಂದು ತಿಳಿಸಿದರು.

ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿ, ಸಂಬಂಧ ಇಲ್ಲದೇ ಇರುವವರು ವಾಲ್ಮೀಕಿ ಹಾಗೂ ರಾಮನ ಹೆಸರಿನಲ್ಲಿ ಏನೇನೋ ಮಾಡುತ್ತಿದ್ದಾರೆ. ಆದರೆ, ನಮಗೆ ಸಂಬಂಧ ಇದೆ. ಈ ಸಂದೇಶ ನೀಡುವ ಸಲುವಾಗಿ ರಾಜ್ಯದಲ್ಲಿ ವಾಲ್ಮೀಕಿ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಮಾತನಾಡಿ, ಬಿಜೆಪಿಯವರು ರಾಮನ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರಲ್ಲಿ ಎಷ್ಟು ಜನ ರಾಮಾಯಣ ಪಠಣ ಮಾಡುತ್ತಾರೆ? ನಾನು ಪ್ರತಿ ವರ್ಷ ಎರಡು ಬಾರಿ ರಾಮಾಯಣದ ಶ್ರೇಷ್ಠ ಅಧ್ಯಾಯವಾದ ಸುಂದರಕಾಂಡ ಅಧ್ಯಯನ ಮಾಡುತ್ತೇನೆ ಎಂದರು.

ಬಿಜೆಪಿ ರಾಮನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ನಾವೆಲ್ಲ ರಾಮ ಭಕ್ತರೇ, ನಾವು ರಾಮನ ಪೂಜೆ ಮಾಡುತ್ತೇವೆ. ಆದರೆ, ರಾಮ – ರಹೀಮರಿಬ್ಬರನ್ನೂ ಪ್ರೀತಿ – ವಾತ್ಸವ್ಯದಿಂದ ಕಾಣುತ್ತೇವೆ ಎಂದು ಹೇಳಿದರು.

ಅಮೃತ್‌ಸರ್‌ ಬಳಿಯ ರಾಮ ತೀರ್ಥದಲ್ಲಿ ಭವ್ಯ ಮಂದಿರ ಇದೆ. ಇದು ರಾಮಾಯಣ ಕಾಲದಲ್ಲಿ ಮಹರ್ಷಿ ವಾಲ್ಮೀಕಿ ಆಶ್ರಮವಾಗಿತ್ತು ಎಂಬ ಪ್ರತೀತಿ ಇದೆ. ಇಲ್ಲಿ ಸೀತಾ ಮಾತೆ ಆಶ್ರಯ ಪಡೆದಿದ್ದರು ಹಾಗೂ ಲವ – ಕುಶ ಜನಿಸಿದ್ದರು. ಇಲ್ಲಿ ಅತ್ಯಂತ ನೈಜ ಸ್ವರೂಪದ ವಾಲ್ಮೀಕಿ ಪ್ರತಿಮೆ ಇದೆ. ಇದೇ ರೀತಿಯ ಪ್ರತಿಮೆಯನ್ನು ರಾಜನಹಳ್ಳಿ ಗುರುಪೀಠದಲ್ಲೂ ಸ್ಥಾಪಿಸಬೇಕಿದೆ ಎಂದು ಶಾಸಕಿ ಲತಾ ಮಲ್ಲಿಕಾರ್ಜುನ್ ಹೇಳಿದರು.

error: Content is protected !!