ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜನಪರ ಚಿಂತನೆಯ ಜಂಗಮ ಜಯದೇವಯ್ಯ

ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜನಪರ ಚಿಂತನೆಯ ಜಂಗಮ ಜಯದೇವಯ್ಯ

ಬಿಳಿ ಶರ್ಟ್, ಬಿಳಿ ಕಚ್ಚೆ ಪಂಚೆ, ಬಗಲಲ್ಲೊಂದು ಬ್ಯಾಗ್ ಹಿಡಿದು, ಹಣೆಗೆ ವಿಭೂತಿ ಧರಿಸಿದ ಲವಲವಿಕೆಯ ವಾಮನಮೂರ್ತಿ ಯೊಂದು ನಡೆದು ಬರುತ್ತಿರುವುದು ಕಂಡು ಬಂದರೆ ಅವರೇ 88ರ ಹರೆಯದ ನಿವೃತ್ತ ಶಿಕ್ಷಕ ಜಯದೇವಯ್ಯ ಮಠದ ಎಂದು ಗುರುತಿಸಬಹುದು. ದಿನಾಂಕ 11   ಮತ್ತು 12 ರಂದು ರಾಣೇಬೆನ್ನೂರಿನಲ್ಲಿ ನಡೆಯುವ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿವರು.

1933ರಲ್ಲಿ ತಾಲ್ಲೂಕಿನ ಹೊಳೆ ಆನ್ವೇರಿಯ ಮಹದೇವಯ್ಯ ಬಸಮ್ಮ ದಂಪತಿಯ ಉದರದಲ್ಲಿ ಜನಿಸಿ, ತಮ್ಮ 9ನೇ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡರು. ಬಡತನದ ಬವಣೆಯಿಂದ ವಾರದನ್ನದ ಮನೆಗಳನ್ನು ಆಶ್ರಯಿಸಿ ಚಳಗೇರಿ, ಮುದೇನೂರು,  ಹುಬ್ಬಳ್ಳಿಗಳಲ್ಲಿ ಶಿಕ್ಷಣ ಪೂರೈಸಿ 1955ರಲ್ಲಿ ಕಾಟನ್ ಸೇಲ್ಸ್ ಸೊಸೈಟಿಯಲ್ಲಿ ಕೆಲಸಕ್ಕೆ ಸೇರುತ್ತಾರೆ.  ನಂತರ ಖಾಸಗಿ ಶಾಲೆಯ ಶಿಕ್ಷಕ ವೃತ್ತಿ ಪ್ರಾರಂಭಿಸಿ  1962ರಿಂದ ಸರ್ಕಾರಿ ಶಾಲಾ ಶಿಕ್ಷಕರಾಗಿ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ 1994ರಲ್ಲಿ ನಿವೃತ್ತರಾಗುತ್ತಾರೆ. ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆ ಅವರಿಂದ ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಜಯದೇವಯ್ಯ ಮಠದ  ಇಂದಿಗೂ ಸ್ವಯಂಪ್ರೇರಿತರಾಗಿ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ  ಕನ್ನಡ ಭಾಷೆ, ಕನ್ನಡ ಸಂಖ್ಯೆಗಳ ಬಳಕೆ, ಮನಸ್ಸನ್ನು ಕಲುಷಿತಗೊಳಿಸುವ ಮಾಧ್ಯಮ ಗಳಿಂದ ಅಂತರ ಕಾಯ್ದುಕೊಳ್ಳುವಂತೆ ತಿಳಿ ಹೇಳುವುದು, ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಮೂಡಿಸುವ ಪ್ರಯತ್ನ ಅವರ ದಿನಚರಿಯಾಗಿದೆ.

       ಬರೆಯುವ, ಹಾಡುವ, ಚರ್ಮವಾದ್ಯ ನುಡಿಸುವ, ಅದರಲ್ಲೂ  ಬುಲ್ ಬುಲ್ ಸಿತಾರಾ ಅಚ್ಚುಮೆಚ್ಚು. `ಮೊದಲು ಮಾನವನಾಗು’ `ಬದುಕು ಚಹಾದ ಬಟ್ಟಲಲ್ಲ’  ಸೇರಿದಂತೆ ಎಂಟು ಪುಸ್ತಕಗಳ ಜೊತೆಗೆ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಸ್ಥಾಪಿಸಿ ಸಭೆ, ಸಮಾರಂಭಗಳನ್ನು ಆಯೋಜಿಸಿದ್ದಾರೆ. ಪ್ರತಿದಿನವೂ ಚೌಡಯ್ಯದಾನಾಪುರದಿಂದ ಸರ್ಕಾರಿ ಬಸ್ ನಲ್ಲಿ ರಾಣೇಬೆನ್ನೂರಿಗೆ ಬರುವ ಇವರ ಕೈಯಲ್ಲಿ ನಾಡು, ನುಡಿ, ಅಧ್ಯಾತ್ಮಿಕ, ಸಾಮಾಜಿಕ ಚಟುವಟಿಕೆಯ ಯಾವದಾದರೊಂದು ಕರಪತ್ರ ಇದ್ದೇ ಇರುತ್ತದೆ. ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಮೆರಗು ತಂದವರಿವರು.

  ಮನೋಹರ ಮಲ್ಲಾಡದ

error: Content is protected !!