ಸೇವಾದಳದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಹೆಚ್. ಚನ್ನಪ್ಪ ಪಲ್ಲಾಗಟ್ಟೆ
ದಾವಣಗೆರೆ, ಡಿ.5- ಸೇವಾದಳದ ಸದಸ್ಯರೆಲ್ಲರೂ ಸಕ್ರಿಯರಾದರೆ ಜಿಲ್ಲಾ ಘಟಕವನ್ನು ರಾಜ್ಯದಲ್ಲೇ ನಂಬರ್ ಒನ್ ಮಾಡಬಹುದು ಎಂದು ಭಾರತ ಸೇವಾದಳ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಹೆಚ್. ಚನ್ನಪ್ಪ ಪಲ್ಲಾಗಟ್ಟೆ ಹೇಳಿದರು.
ಭಾರತ ಸೇವಾದಳದ ಕಛೇರಿಯಲ್ಲಿ ಆಜೀವ ಸದಸ್ಯರನ್ನುದ್ದೇಶಿಸಿ ಅವರು ಮಾತನಾಡಿದರು. ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದಲ್ಲಿನ ಅಹಿಂಸಾತ್ಮಕ ಸತ್ಯಾಗ್ರಹ ಮತ್ತು ರಚನಾತ್ಮಕ ಕಾರ್ಯಗಳಿಗೆ ಒಂದು ಮೂರ್ತ ಸ್ವರೂಪ ನೀಡಲು ರೂಪುಗೊಂಡ ಸ್ವಯಂ ಸೇವಾ ಸಂಸ್ಥೆಯೇ ಭಾರತ ಸೇವಾದಳ.
ಕರ್ನಾಟಕದವರೇ ಆದ ನಾ.ಸು.ಹರ್ಡೇಕರ್‌ರವರು ಮಹಾತ್ಮಾ ಗಾಂಧೀಜಿಯವರ ಕಾರ್ಯಕ್ರಮಗಳು ಶಿಸ್ತು ಬದ್ಧವಾಗಿ, ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಜರುಗಲು ಯುವ ಜನರನ್ನೊಳಗೊಂಡ ಹಿಂದೂಸ್ಥಾನಿ ಸೇವಾದಳ ಎಂಬ ಸೇವಾ ಸಂಸ್ಥೆಯನ್ನು ಸ್ಥಾಪಿಸಿದರು. ಸ್ವಾತಂತ್ರ್ಯಾ ನಂತರ ಇದು ಭಾರತ ಸೇವಾದಳ ಸಂಸ್ಥೆಯಾಗಿ ರೂಪುಗೊಂಡಿತು.
ಸ್ವಾತಂತ್ರ್ಯಾ ನಂತರ ದೇಶದ ಯುವ ಜನರಲ್ಲಿ ದೇಶಭಕ್ತಿ, ರಚನಾತ್ಮಕ ಕಾರ್ಯಗಳಾದ ಸಮಾಜದ ದೀನ-ದುರ್ಬಲರ ಸೇವೆ, ಭ್ರಾತೃತ್ವ, ಸ್ವಚ್ಛತೆ ಮುಂತಾದ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಶಿಕ್ಷಣ, ತರಬೇತಿ ನೀಡುವುದು ಈ ಸಂಸ್ಥೆಯ ಧ್ಯೇಯೋದ್ದೇಶವಾಗಿದೆ. ಇದು ಯಾವುದೇ ರಾಜಕೀಯ ಪ್ರಭಾವಗಳಿಂದ ಮುಕ್ತ ಮತ್ತು ಪಕ್ಷಾತೀತ ಸಂಸ್ಥೆಯಾಗಿದ್ದು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಯುವ ಜನರಿಗೆ, ಶಿಕ್ಷಕರಿಗೆ ತರಬೇತಿ ಶಿಬಿರಗಳನ್ನು ಏರ್ಪಡಿಸುತ್ತಾ ಬಂದಿದೆ ಎಂದು ಅವರು ವಿವರಿಸಿದರು.