ಹೆಚ್ಚಿನ ದರದಲ್ಲಿ ಯೂರಿಯಾ ಗೊಬ್ಬರ ಮಾರಾಟ

ರಾಣೇಬೆನ್ನೂರು, ಜು. 22 – ರಾಣೇಬೆನ್ನೂರಿನಲ್ಲಿ 260 ದರದ ಯೂರಿಯಾ ಗೊಬ್ಬರವನ್ನು 400-450 ವರೆಗೆ ಮಾರಾಟ ಮಾಡುತ್ತಾರೆ, ಅವರ  ಮೇಲೆ ಯಾವ ಕ್ರಮ ಜರುಗಿಸಿದ್ದೀರಿ ಎಂದು ಜಿಪಂ ಸದಸ್ಯ ಏಕನಾಥ ಭಾನುವಳ್ಳಿ ಉಪನಿರ್ದೇಶಕ ಗೌಡಪ್ಪಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.

ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ನಿನ್ನೆ ಏರ್ಪಾಡಾಗಿದ್ದ ತಾಲ್ಲೂಕು ಪಂಚಾಯ್ತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆ ಪ್ರಗತಿ ವರದಿ ಓದುವಾಗ ಈ ಘಟನೆ ನಡೆಯಿತು.

ನಮ್ಮಲ್ಲಿ ಸ್ಟಾಕ್ ಇಲ್ಲಾ ಬೇರೆಡೆಯಿಂದ ತರಿಸಿದ್ದೇವೆ ಎಂದು ಹೆಚ್ಚಿನ ದರದಲ್ಲಿ ಮಾರುತ್ತಿದ್ದಾರೆ. ನಮ್ಮ ಸಹಾಯಕರಿಂದ ನಾನೇ ತರಿಸಿದ್ದು, 400 ರೂ  ತೆಗೆದುಕೊಂಡಿದ್ದಾರೆ.ಇನ್ನು  ಬೇರೆ ರೈತರ ಪರಿಸ್ಥಿತಿ ಏನಾಗಿರಬಹುದು ಎಂದು ಏಕನಾಥ ಅಧಿಕಾರಿಯನ್ನು ಪ್ರಶ್ನಿಸಿದರು.

ಯುರಿಯಾ ಗೊಬ್ಬರ ಕ್ಷೇತ್ರವಾರು ಹಂಚಿಕೆಯಲ್ಲಿ ರಾಣೇಬೆನ್ನೂರು ತಾಲ್ಲೂಕಿಗೆ ಅನ್ಯಾಯವಾಗುತ್ತಿದೆ. ಎಲ್ಲ ತಾಲ್ಲೂಕುಗಳಿಗಿಂತ ನಮಗೆ ಹೆಚ್ಚು ಬೇಕಾಗಿದೆ. ನಾಳೆ ರಾಣೇಬೆನ್ನೂರಿನಲ್ಲಿ ಸಮರ್ಪಕವಾಗಿ ಗೊಬ್ಬರ ಇರಬೇಕು. ಕೊರತೆ ಆಗಬಾರದು. ರೈತರು ಅವಶ್ಯಕತೆಗೆ ಹೆಚ್ಚಿನ ದರ ಕೊಟ್ಟು ಒಯ್ಯುತ್ತಾರೆ ನಂತರ ದೂರುತ್ತಾರೆ. ಕಾರಣ ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ಸೂಕ್ತ ಕ್ರಮ ಜರುಗಿಸುವಂತೆ ಶಾಸಕ ಅರುಣಕುಮಾರ ಸೂಚನೆ ನೀಡಿದರು.

ಇಲಾಖೆಯ ಸಚಿವರು ಭೂಮಿ ಪೂಜೆ ನಡೆಸಿದ ಕಾಮಗಾರಿ ಇನ್ನು ಪ್ರಾರಂಭಿಸಿಲ್ಲ,  ಖಡಿ ಹಾಕದೆ ಕೇವಲ ಮರಡಿ ಮಣ್ಣು ಹಾಕಿರುವುದು, ಕುದರಿಹಾಳ, ಮೆಡ್ಲೇರಿ ರಸ್ತೆಗಳ ದುರಸ್ತಿ ಬಗ್ಗೆ ತಪ್ಪು ಮಾಹಿತಿ ಕೊಡುವುದು ಮುಂತಾದ ದೂರುಗಳೊಂದಿಗೆ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಯ ಮೇಲೆ ಹರಿಹಾಯ್ದ ಬ್ಯಾಡಗಿ ಹಾಗೂ ಇಲ್ಲಿನ ಶಾಸಕದ್ವಯರು ಕಾಮಗಾರಿ ಪೂರೈಸಲು ಸಮಯ ನಿಗದಿಗೊಳಿಸಿದರು.

25 ರಿಂದ 24×7 ನೀರು ಪೂರೈಕೆ : ಇದೇ ತಿಂಗಳು ರಾಣೇಬೆನ್ನೂರು ನಗರಕ್ಕೆ 24×7 ಯೋಜನೆಯ ನೀರು ಸರಬರಾಜು ಮಾಡಲಾಗುವುದು. ಗುಂಪು ಗ್ರಾಮ ಯೋಜನೆಯ ತಾಂಡಾ ಹಾಗೂ ಕೆಲಗ್ರಾಮಗಳ ಕುಡಿಯುವ ನೀರು ಸರಬರಾಜು ಸಹ ಅಂದೇ ಮಾಡಲಾಗುತ್ತಿದ್ದು ಅಷ್ಟರೊಳಗೆ ಅವಶ್ಯ ಕಾಮಗಾರಿ ಪೂರೈಸುವಂತೆ ಇಲಾಖಾಧಿಕಾರಿಗಳಿಗೆ ತಾಕೀತು ಮಾಡಲಾಯಿತು.

ಶಾಸಕದ್ವಯರಾದ ಅರುಣಕುಮಾರ ಪೂಜಾರ,  ವಿರುಪಾಕ್ಷಪ್ಪ ಬಳ್ಳಾರಿ, ಜಿ.ಪಂ ಸದಸ್ಯರಾದ ಶಿವಾನಂದ ಕನ್ನಪ್ಪಳವರ, ಏಕನಾಥ ಭಾನುವಳ್ಳಿ, ಮಂಗಳಗೌರಿ ಪೂಜಾರ, ಗದಿಗೆವ್ವ ದೇಸಾಯಿ, ತಾ.ಪಂ ಉಪಾಧ್ಯಕ್ಷೆ ಕಸ್ತೂರಿ ಹೊನ್ನಾಳಿ, ಇಒ ಎಸ್.ಎಂ. ಕಾಂಬಳೆ ಪೌರಾಯುಕ್ತ ಡಾ. ಮಹಾಂತೇಶ, ಮ್ಯಾನೇಜರ್ ಬಸವರಾಜ ಶಿಡೇನೂರ ಮತ್ತಿತರರು ಸಭೆಯಲ್ಲಿದ್ದರು.

error: Content is protected !!