ಗ್ರಾಮದೇವತೆ ಹಬ್ಬಕ್ಕೆ ಮಲೇಬೆನ್ನೂರು ಸಜ್ಜು

ಗ್ರಾಮದೇವತೆ ಹಬ್ಬಕ್ಕೆ ಮಲೇಬೆನ್ನೂರು ಸಜ್ಜು

ಇಂದು ರಾತ್ರಿ ವೈಭವದ ಮೆರವಣಿಗೆ

ಮಲೇಬೆನ್ನೂರು, ಮಾ.18- ಪಟ್ಟಣದಲ್ಲಿ 5 ವರ್ಷಗಳ ಬಳಿತ ಮತ್ತೆ ಗ್ರಾಮದೇವತೆಗಳಾದ ಏಕನಾಥೇಶ್ವರಿ, ಕೋಡಿ ಮಾರೇಶ್ವರಿ ಮತ್ತು ಹಟ್ಟಿ ದುರ್ಗಾಂಬಿಕಾದೇವಿ ಜಾತ್ರೆ ಮಂಗಳವಾರ ಮತ್ತು ಬುಧವಾರ ವೈಭವದೊಂದಿಗೆ ಜರುಗಲಿದೆ. ಅದ ಕ್ಕಾಗಿ ಮಲೇಬೆನ್ನೂರು ಪಟ್ಟಣ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಬೀಗರು-ಬಿಜ್ಜರನ್ನು ಆಹ್ವಾನಿಸುತ್ತಿದೆ.

ಗುರುವಾರ ಜರುಗಿದ ಶ್ರೀ ಬಸವೇಶ್ವರ ರಥೋತ್ಸವದ ವೇಳೆ ಪಟ್ಟಣದ ಮುಖ್ಯ ರಸ್ತೆ ಫ್ಲೆಕ್ಸ್‌ಗಳಿಂದ ತುಂಬಿ ತುಳುಕುತ್ತಿತ್ತು. ಆದರೀಗ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಭಾನುವಾರ ಹಬ್ಬಕ್ಕಾಗಿ ಹಾಕಿದ್ದ ಎಲ್ಲಾ ಫ್ಲೆಕ್ಸ್‌ಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದರಿಂದ ಫ್ಲೆಕ್ಸ್‌ಗಳ ಭರಾಟೆ ಇಲ್ಲದಂತಾಗಿದೆ.

ವಿದ್ಯುತ್ ಅಲಂಕಾರ : ಊರ ಹೊರಗಿರುವ ಏಕನಾಥೇಶ್ವರಿ ದೇವಸ್ಥಾನದ ಬಳಿ ನಿರ್ಮಿಸಿರುವ ಮಂಟಪ ಸೇರಿದಂತೆ ಪಟ್ಟಣದ ಎಲ್ಲಾ ಪ್ರಮುಖ ರಸ್ತೆಗಳು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಅಮ್ಮನ ಹಬ್ಬಕ್ಕಾಗಿ ಮನೆಗಳನ್ನು ಸುಣ್ಣ-ಬಣ್ಣ ಮಾಡಿಸಲಾಗಿದ್ದು, ಮನೆ ಮಂದಿಗೆ ಹೊಸ ಬಟ್ಟೆ ಖರೀದಿಯೂ ಆಗಿದೆ.

ಮಾಂಸಹಾರಿ ಜನರ ಮನೆಗಳಲ್ಲಿ ಕನಿಷ್ಠ 2 ರಿಂದ ಗರಿಷ್ಠ 8-10 ಕುರಿಗಳನ್ನು ಹಬ್ಬಕ್ಕಾಗಿ ಕಟ್ಟಿದ್ದಾರೆ. ಬುಧವಾರ ಮತ್ತು ಗುರುವಾರ ಪಟ್ಟಣ ಹಬ್ಬದ ಊಟಕ್ಕಾಗಿ ಬರುವ ಬಂಧು-ಮಿತ್ರರಿಂದ ತುಂಬಿ ತುಳುಕಲಿದೆ.

ಹಬ್ಬವನ್ನು ಶಾಂತಿ-ಸಾಮರಸ್ಯ ಹಾಗೂ ಯಶಸ್ವಿಗೊಳಿಸುವ ಉದ್ದೇಶದಿಂದ ಹಬ್ಬದ ಸಮಿತಿ ರಚಿಸಿಕೊಂಡು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ.

ಅಮ್ಮನವರ ಉತ್ಸವ : ಮಾ.19ರ ಮಂಗಳವಾರ ಬೆಳಿಗ್ಗೆ ಪರಶುರಾಮನ ಉಚ್ಛಾಯದ ನಂತರ ದೇವಸ್ಥಾನದಲ್ಲಿ ಜೋಗಮ್ಮನವರಿಗೆ ಪಡಲಿಗೆ ಮತ್ತು ಗೊರವಪ್ಪನವರಿಗೆ ದೋಣಿ ತುಂಬಿಸುವ ಶಾಸ್ತ್ರ ಮಾಡಲಾಗುವುದು.

ಮಧ್ಯಾಹ್ನ 12 ರಿಂದ ದೇವಸ್ಥಾನದಲ್ಲಿ ಭಕ್ತರಿಗೆ ಹೋಳಿಗೆ ಪ್ರಸಾದದ ಜೊತೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಅರ್ಚಕ ಪ್ರಕಾಶಾಚಾರ್ ತಿಳಿಸಿದ್ದಾರೆ.

ರಾತ್ರಿ 9 ರಿಂದ ಊರ ಒಳಗಿರುವ ಅಮ್ಮನವರ ದೇವಸ್ಥಾನದಿಂದ ಮೆರವಣಿಗೆ ಸಕಲ ವೈಭವ ದೊಂದಿಗೆ ಆರಂಭವಾಗಿ ಬುಧವಾರ ಬೆಳಗಿನ ಜಾವ ಹೊರ ಹೊರಗಿನ ದೇವಸ್ಥಾನ ತಲುಪಲಿದೆ.

ಹಟ್ಟಿ ದುರ್ಗಾಂಬಿಕೆ ದೇವಸ್ಥಾನದಿಂದ ಘಟೆ ಬಂದ ನಂತರ ಹಿಟ್ಟಿನ ಕೋಣನ ಬಲಿ ನೀಡಲಾಗುವುದು. ಮಂಗಳವಾರ ಮತ್ತು ಬುಧವಾರ ಅಮ್ಮನವರಿಗೆ ಉಡಿ ತುಂಬುವ ಮತ್ತು ಹರಕೆ ಸೇವೆಗಳು ನಡೆಯಲಿವೆ.

error: Content is protected !!