ಬದಲಾದ ಜೀವನ ಶೈಲಿಯಿಂದಾಗಿ ಅನಾರೋಗ್ಯ ಹೆಚ್ಚಳ

ಬದಲಾದ ಜೀವನ ಶೈಲಿಯಿಂದಾಗಿ ಅನಾರೋಗ್ಯ ಹೆಚ್ಚಳ

ಮಲೇಬೆನ್ನೂರಿನಲ್ಲಿನ ಉಚಿತ ಆರೋಗ್ಯ ಶಿಬಿರದಲ್ಲಿ ಡಾ. ಲಕ್ಷ್ಮಿದೇವಿ ಬೇಸರ

ಮಲೇಬೆನ್ನೂರು, ಸೆ.1- ಜೀವನ ಶೈಲಿ ಬದಲಾಯಿಸಿಕೊಳ್ಳದಿದ್ದರೆ ಉತ್ತಮ ಆರೋಗ್ಯ ಸಾಧ್ಯವಿಲ್ಲ. ಕಳೆದ 40 ವರ್ಷಗಳಲ್ಲಿ ಜನರ ಜೀವನಶೈಲಿ ಸಾಕಷ್ಟು ಬದಲಾಗಿರುವ ಕಾರಣ ಅನಾರೋಗ್ಯಗಳು ಹೆಚ್ಚಾಗಿವೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಲಕ್ಷ್ಮಿದೇವಿ ಹೇಳಿದರು.

ಪಟ್ಟಣದ ಹರಳಹಳ್ಳಿ ರಸ್ತೆಯಲ್ಲಿರುವ ಗ್ರಾಮದೇವತೆ ಶ್ರೀ ಏಕನಾಥೇಶ್ವರಿ ದೇವಸ್ಥಾನದಲ್ಲಿ ಬಸವ ಬಳಗ ಹಾಗೂ ಅಕ್ಕನ ಬಳಗ ಮತ್ತು ಲಯನ್ಸ್ ಕ್ಲಬ್, ಮಲೇಬೆನ್ನೂರು ಇವರುಗಳ ಸಂಯುಕ್ತಾಶ್ರಯದಲ್ಲಿ ದಿ. ಬಿ.ಜಿ.ಅಭಿಷೇಕ ಗೌಡ ಇವರ ಜನ್ಮದಿನದ ಅಂಗವಾಗಿ ನಿನ್ನೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ದೈಹಿಕ ಶ್ರಮವಿಲ್ಲದ ಕಾರಣದಿಂದಾಗಿ ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಮತ್ತು ಹೃದಯಾಘಾತಗಳು ಹೆಚ್ಚಾಗುತ್ತಿವೆ. ಜೊತೆಗೆ ಬಹಳ ಜನರಲ್ಲಿ ರಕ್ತಹೀನತೆ ಕಂಡುಬರುತ್ತಿದೆ. ಮಕ್ಕಳಲ್ಲಿ ಗರ್ಭಿಣಿ ಮಹಿಳೆ ಯರಲ್ಲಿ ಮತ್ತು 40 ವರ್ಷಕ್ಕಿಂತ ಕೆಳಗಿನವರಲ್ಲಿ ರಕ್ತಹೀನತೆ ಸಾಮಾನ್ಯವಾಗುತ್ತಿರುವುದು ಬೇಸರದ ಸಂಗತಿ ಎಂದರು.

ರಕ್ತ ಹೀನತೆಯಿಂದ ಸುಸ್ತು, ನಿಶ್ಯಕ್ತಿ ಉಂಟಾಗುತ್ತದೆ. ಆದ್ದರಿಂದ ರೆಡಿಮೇಡ್ ಆಹಾರ, ಜಂಕ್ ಫುಡ್‌ಗಳನ್ನು ಬಳಸದೇ ಪೌಷ್ಠಿಕ ಆಹಾರ ಪದಾರ್ಥಗಳನ್ನು ಮತ್ತು ತರಕಾರಿ, ಕಾಳುಗಳನ್ನು ಬಳಸಬೇಕು. 40 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಸ್ವೀಚ್ ಆನ್ ಮಾಡಿ, ಕುಳಿತು ಕೆಲಸ ಮಾಡಿಸುವುದನ್ನು ನಿಲ್ಲಿಸಿ, ಕೈಯಿಂದ ಕೆಲಸ ಮಾಡುವುದನ್ನು ಮತ್ತು ವಾಕಿಂಗ್ ಮಾಡುವುದನ್ನು ಕಡ್ಡಾಯಗೊಳಿಸಿ ಎಂದು ಡಾ.ಲಕ್ಷ್ಮಿದೇವಿ ತಿಳಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಚಿಟ್ಟಕ್ಕಿ ನಾಗರಾಜ್ ಮಾತನಾಡಿ, ಇದೇ ದಿನಾಂಕ 4 ರಂದು ಮಲೇಬೆನ್ನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್‌ ವತಿಯಿಂದ ಉಚಿತ ಹೃದಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಇಸಿಜಿ, 2ಡಿ ಇಕೋ ಮತ್ತು ತಜ್ಞ ವೈದ್ಯರಿಂದ ಸಮಾಲೋಚನೆ ಸೌಲಭ್ಯ ಇರುತ್ತದೆ ಎಂದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿದರು. ಬಸವ ಬಳಗದ ಅಧ್ಯಕ್ಷ ವೈ.ನಾರೇಶಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಿರಿಗೆರೆ ಸಿದ್ದಪ್ಪ, ಖಜಾಂಚಿ ಭರಮಳ್ಳಿ ಮಂಜು, ಅಕ್ಕನ ಬಳಗದ ಅಧ್ಯಕ್ಷೆ ಶ್ರೀಮತಿ ಸರೋಜಮ್ಮ, ಡಾ. ಎಂ.ಜಿ.ರಂಗನಾಥ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಓ.ಜಿ.ರುದ್ರಗೌಡ್ರು, ಎನ್.ಜಿ.ಶಿವಾಜಿ ಪಾಟೀಲ್, ಎನ್.ಜಿ.ಬಸವನಗೌಡ, ಶ್ರೀಮತಿ ರೂಪಾ ಪಾಟೀಲ್, ಇ.ಎಂ.ಮರುಳಸಿದ್ದೇಶ್, ಡಾ. ಚಂದ್ರಕಾಂತ್, ಹೆಚ್.ಜಿ.ಚಂದ್ರಶೇಖರ್, ಹುಳ್ಳಳ್ಳಿ ಸಿದ್ದೇಶ್, ಪುರಸಭೆ  ಸದಸ್ಯರಾದ ಬೆಣ್ಣೆಹಳ್ಳಿ ಸಿದ್ದೇಶ್, ಶ್ರೀಮತಿ ಸುಲೋಚನಮ್ಮ, ಓ.ಜಿ.ಕುಮಾರ್, ಕೆ.ಪಿ.ಗಂಗಾಧರ್, ಭೋವಿಕುಮಾರ್, ಕೆ.ಜಿ.ಪರಮೇಶ್ವರಪ್ಪ, ಅಂಗನವಾಡಿ ಕಾರ್ಯಕರ್ತೆ ಮಂಜುಳಾ, ಬೆಣ್ಣೆಹಳ್ಳಿ ಬಸವರಾಜ್, ಆರೋಗ್ಯ ಕೇಂದ್ರದ ಕಿರಣ್, ನಾಗರಾಜ್, ನಳಿನ, ವಿಮಲಾ, ಶೀಲಾ, ಆಪ್ತ ಸಮಾಲೋಚಕ ಕಿರಣ್ ಸೇರಿದಂತೆ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. 

error: Content is protected !!