ಶಾಸಕಾಂಗಕ್ಕಿನ್ನು ಹೊಸ ಕೇಂದ್ರ

ಶಾಸಕಾಂಗಕ್ಕಿನ್ನು ಹೊಸ ಕೇಂದ್ರ

ನವದೆಹಲಿ, ಮೇ 28 – ನೂತನ ಸಂಸತ್ ಕಟ್ಟಡವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದು, ಇದು ಸಶಕ್ತೀಕರಣ, ಕನಸುಗಳ ಬೆಳಗುವ ಹಾಗೂ ಕನಸುಗಳನ್ನು ಸಾಕಾರಗೊಳಿಸುವ ತಾಣವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಪ್ರಧಾನಿ ಮೋದಿ, ಮೊದಲ ಗೇಟ್ ಮೂಲಕ ಸಂಸತ್ತಿನ ಆವರಣ ಪ್ರವೇಶಿಸಿ ದರು. ಲೋಕಸಭಾಧ್ಯಕ್ಷ ಓಂ ಬಿರ್ಲಾ ಪ್ರಧಾನಿಯನ್ನು ಸ್ವಾಗತಿಸಿದರು.

ಕರ್ನಾಟಕದ ಶೃಂಗೇರಿ ಮಠದ ಅರ್ಚಕರು ವೇದ, ಘೋಷಗಳೊಂದಿಗೆ ಪ್ರಧಾನಿಯನ್ನು ಸ್ವಾಗತಿಸಿದರು. ಪ್ರಧಾನಿ ಮೋದಿ ಅವರು ಗಣಪತಿ ಹೋಮ ನೆರವೇರಿಸಿದರು.

ನಂತರ ರಾಜದಂಡಕ್ಕೆ ದೀರ್ಘದಂಡ ನಮಸ್ಕಾರ ಮಾಡಿದ ಮೋದಿ, ತಮಿಳುನಾಡಿನ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು. ಅವರು ರಾಜದಂಡವನ್ನು ಪ್ರಧಾನಿಗೆ ಹಸ್ತಾಂತರಿಸಿದರು. ವೇದ ಘೋಷ ಹಾಗೂ ಮಂಗಳವಾದ್ಯಗಳ ನಡುವೆ ಪ್ರಧಾನಿ ಮೋದಿ ರಾಜದಂಡವನ್ನು ಮೆರವಣಿಗೆ ಯಲ್ಲಿ ತಂದು ನೂತನ ಲೋಕಸಭೆಯ ಸಭಾಧ್ಯಕ್ಷ ಸ್ಥಾನದ ಬಲಭಾಗದಲ್ಲಿ ಅಳವಡಿಸಿದರು.

ಶಾಸಕಾಂಗಕ್ಕಿನ್ನು ಹೊಸ ಕೇಂದ್ರ - Janathavani

ನಂತರ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ನೂತನ ಸಂಸತ್ ಕಟ್ಟಡದ ಉದ್ಘಾಟನೆಯಾಗಿದೆ. ಇದು ನಮ್ಮ ಹೃದಯ ಹಾಗೂ ಮನಸ್ಸುಗಳನ್ನು ಹೆಮ್ಮೆ, ಆಶಯ ಹಾಗೂ ಭರವಸೆ ಗಳಿಂದ ತುಂಬಿದೆ. ಈ ಭವ್ಯ ಕಟ್ಟಡವು ಸಶಕ್ತೀಕರಣ, ಕನಸುಗಳ ಬೆಳಗುವ ಹಾಗೂ ಕನಸುಗಳನ್ನು ಸಾಕಾರಗೊಳಿ ಸುವ ತಾಣವಾಗಲಿ. ನಮ್ಮ ಮಹಾನ್ ದೇಶವನ್ನು ಉನ್ನತ ಪ್ರಗತಿಯತ್ತ ಕೊಂಡೊಯ್ಯಲಿ ಎಂದು ಕರೆ ನೀಡಿದರು.

ಉದ್ಘಾಟನಾ ಸಮಾರಂಭದ ಚಿತ್ರಗಳನ್ನೂ ಅವರು ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಷಾ, ಎಸ್. ಜೈಶಂಕರ್, ಅಶ್ವಿನಿ ವೈಷ್ಣವ್, ಮನ್‌ಸುಖ್‌ ಮಾಂಡವೀಯ ಹಾಗೂ ಜಿತೇಂದ್ರ ಸಿಂಗ್, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡ ಮತ್ತಿತರರು ಉಪಸ್ಥಿತರಿದ್ದರು.

ಕಟ್ಟಡ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೆಲ ಕಾರ್ಮಿಕರಿಗೆ ಪ್ರಧಾನಿ ಶಾಲು ಹಾಗೂ ಸ್ಮರಣಿಕೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸರ್ವಧರ್ಮೀಯ ಪ್ರಾರ್ಥನೆಯನ್ನೂ ಆಯೋಜಿಸಲಾಗಿತ್ತು.

ನಂತರ ಪ್ರಧಾನಿ ಮೋದಿ ಅವರು ವಿಧಾನಸಭಾಧ್ಯಕ್ಷರು ಮತ್ತಿತರೆ ಗಣ್ಯರ ಜೊತೆಗೂಡಿ ಹಳೆಯ ಸಂಸತ್ ಭವನಕ್ಕೆ ಭೇಟಿ ನೀಡಿದರು.

ನೂತನ ಸಂಸತ್ ಭವನದ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ 75 ರೂ.ಗಳ ನಾಣ್ಯ ಹಾಗೂ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.

error: Content is protected !!