ಶ್ರೀಗಳಿಗೆ ತರಳಬಾಳು ಪೀಠ ಉಳಿಸಿ ಜಾಗೃತಿ ಸಮಿತಿ ಒತ್ತಾಯ
ದಾವಣಗೆರೆ, ನ.7- ಸಿರಿಗೆರೆಯ ತರಳಬಾಳು ಪೀಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಪೀಠ ತ್ಯಾಗ ಮಾಡಬೇಕು ಹಾಗೂ ಮುಂದಿನ ಉತ್ತರಾಧಿಕಾರಿ ಆಯ್ಕೆಗೆ ಮಠದ ಭಕ್ತರಿಗೆ ಅವಕಾಶ ನೀಡುವಂತೆ ತರಳಬಾಳು ಪೀಠ ಉಳಿಸಿ ಜಾಗೃತಿ ಸಮಿತಿ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಇಂದು ಸಾಧು ಸದ್ಧರ್ಮ ಸಮಾಜದ ಹಿರಿಯ ಮುಖಂಡರಾದ ಮುದೇಗೌಡ್ರು ವೀರಭದ್ರಪ್ಪ, ಆನಗೋಡು ನಂಜುಂಡಪ್ಪ ಸೇರಿದಂತೆ ಕೆಲ ಮುಖಂಡರು ಮಾತನಾಡಿ, ತರಳಬಾಳು ಪೀಠಕ್ಕೆ ಉತ್ತರಾಧಿಕಾರಿ ನೇಮಕದ ವಿಚಾರವಾಗಿ ಈಗಿನ ಶ್ರೀಗಳಿಗೆ ನಾಲ್ಕು ಬಾರಿ ಪತ್ರ ಬರೆಯಲಾಗಿದೆ. ಆದರೆ, ಶ್ರೀಗಳು ಅದನ್ನು ಕಡೆಗಣಿಸಿದ್ದರ ಪರಿಣಾಮ ನಾವುಗಳು ಇಂದು ಮಾಧ್ಯಮದ ಮುಂದೆ ಬಂದಿದ್ದೇವೆ. ನಾವು ಮಠದ ವಿರುದ್ಧ ಬಂದಿಲ್ಲ. ಪೀಠಾಧ್ಯಕ್ಷರಾದ ಶ್ರೀಗಳ ಕಾರ್ಯವೈಖರಿ, ಶಿಷ್ಯರನ್ನು ನಡೆಸಿಕೊಳ್ಳುವ ರೀತಿ ಸಾದರ ಲಿಂಗಾಯತರ ಸಮಾಜಕ್ಕೆ ಕುಂದುಂಟಾಗುತ್ತಿದೆ. ಹೀಗೆ ತಪ್ಪುಗಳನ್ನು ತಿದ್ದಿಕೊಳ್ಳುವ ಮೂಲಕ ಸರಿಪಡಿಸಿಕೊಳ್ಳಲು ಅವಕಾಶವನ್ನು ಶ್ರೀಗಳು ಕಲ್ಪಿಸಲಿಲ್ಲ ಎಂದು ಆರೋಪಿಸಿದರು.
ಹಿಂದಿನ ಹಿರಿಯ ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಪ್ರಜಾಪ್ರಭುತ್ವದ ರೀತಿಯಲ್ಲಿ 50ನೇ ವಯಸ್ಸಿನಲ್ಲಿ ಹಾಲಿ ಗುರುಗಳನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿ, ಸಮಾಜಕ್ಕೆ ಪರಿಚಯಿಸಿ 60ನೇ ವಯಸ್ಸಿನಲ್ಲಿ ಹಾಲಿ ಶ್ರೀಗಳಿಗೆ ಪಟ್ಟ ಕಟ್ಟಿದರು. ಆದರೆ, ಈಗಿರುವ ಜಗದ್ಗುರುಗಳು 2012ರಲ್ಲಿ ಪಟ್ಟ ಬಿಡುವುದಾಗಿ ತಿಳಿಸಿದ್ದರು. ಆದರೆ ಅವರಿಗೆ 76 ವರ್ಷಗಳಾದರೂ ಇನ್ನೂ ಉತ್ತರಾಧಿಕಾರಿಯನ್ನು ನೇಮಕ ಮಾಡಿಲ್ಲ ಎಂದು ಅಪಾದಿಸಿದರು.
ಶ್ರೀಗಳು ಭಾರತ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಾರೆ, ಪತ್ರಿಕೆಗಳಲ್ಲಿ ಬರೆಯುತ್ತಾರೆ. ಆದರೆ, ಅವರ ನಡೆಯೇ ಬೇರೆಯಾಗಿದೆ. ಮಠದಲ್ಲಿ ಬಸವ ತತ್ವ ಪಾಲನೆ ಆಗುತ್ತಿಲ್ಲ. ಲಿಂಗೈಕ್ಯ ಶ್ರೀಗಳು ಇದ್ದಾಗ ಮಠ ಆರ್ಥಿಕವಾಗಿ ಸಬಲವಾಗದಿದ್ದರೂ ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ತೆರೆದರು. ಸಿರಿಗೆರೆ ಮಠ ಕರ್ನಾಟಕದಲ್ಲಿ ವಿದ್ಯಾದಾನದಲ್ಲಿ ಹೆಸರು ಗಳಿಸಿತ್ತು. ಈಗ ಆ ಹೆಸರು ಉಳಿಯುವುದೇ ಎಂಬ ಆತಂಕ ಸಮಾಜದಲ್ಲಿ ಮೂಡುತ್ತಿದೆ ಎಂದು ದೂರಿದರು.
ನಮ್ಮ ಸಮಾಜದಲ್ಲಿ ವಿದ್ವಾಂಸರು, ವಿಶೇಷ ಪರಿಣಿತರು, ಅನುಭವಿಗಳು, ಜನಸೇವಕರು, ದಾನಿಗಳು ಇದ್ದರೂ ಸಹ ಅವರ ಸೇವೆಯನ್ನು ಸಮರ್ಥವಾಗಿ ಬಳಸಿಕೊಳ್ಳದೇ ಈಗಿನ ಶ್ರೀಗಳಿಂದ ಇಚ್ಛಾನುವರ್ತಿಯಾಗಿ ಏಕಮುಖ ನಿರ್ಧಾರಗಳು ಬರುತ್ತಿದೆ. ಸರ್ವಾಧಿಕಾರಿ ಮನೋಭಾವದ ವ್ಯಕ್ತಿತ್ವ ಹೊಂದಿದ್ದಾರೆ. ಪೀಠಾಧ್ಯಕ್ಷರಾದ ಶ್ರೀಗಳ ಕಾರ್ಯವೈಖರಿ, ಶಿಷ್ಯರನ್ನು ನಡೆಸಿಕೊಳ್ಳುವ ರೀತಿಯ ತಪ್ಪುಗಳನ್ನು ಪ್ರಶ್ನಿಸುತ್ತಿರುವ ಹಿರಿಯ ಶ್ರೀಗಳೇ ತಯಾರಿಸಿದ ಸಮಾಜದ ವಿದ್ವಾತ್‌ವುಳ್ಳ ಪಡೆಯವರ ಮೇಲೆ ಎತ್ತುಕಟ್ಟಿ, ಸಮಾಜದ ವಿರೋಧಿಗಳು ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ಅಲ್ಲದೆ ದೂರವಿಟ್ಟು ತುಳಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಮಠದ ಭಕ್ತರ ನಡುವೆ ಮಾತಿನ ಚಕಮಕಿ :
ದಾವಣಗೆರೆ, ನ.7- ಸಿರಿಗೆರೆಯ ತರಳಬಾಳು ಮಠದ ಎರಡು ಬಣಗಳ ಭಕ್ತರ ಮಧ್ಯೆ ರಸ್ತೆಯಲ್ಲಿ ಮಾತಿನ ಚಕಮಕಿ ನಡೆದ ಪ್ರಸಂಗ ವರದಿಗಾರರ ಕೂಟದ ಮುಂದೆ ನಡೆಯಿತು.
ತರಳಬಾಳು ಜಗದ್ಗುರುಗಳು ಪೀಠ ತ್ಯಾಗ ಮಾಡಬೇಕು ಎಂದು ಸಮಾಜದ ಮುಖಂಡರು ಪತ್ರಿಕಾಗೋಷ್ಠಿ ಮುಗಿಸಿ ಹೊರ ಬಂದಾಗ, ಇನ್ನೊಂದು ಬಣದ ಯುವಕರು ಬಂದು ಅವರೊಂದಿಗೆ ಗಲಾಟೆ ಮಾಡಿದರು. ಇನ್ನೂ ಸ್ವಾಮೀಜಿ ಪರವಾದ ಭಕ್ತರು ವಿರುದ್ಧ ಬಣದ ಆರೋಪವನ್ನು ತಳ್ಳಿ ಹಾಕಿದರು. ಸ್ವಾಮೀಜಿಗಳ ವಿರುದ್ಧ ನೀಡಿರುವ ಹೇಳಿಕೆಗಳು ಸತ್ಯಕ್ಕೆ ದೂರವಾಗಿದ್ದು, ದುರುದ್ದೇಶದಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಸ್ವಾಮೀಜಿ ಪರವಾಗಿ ಕೆಲ ಭಕ್ತರು ಬೆಂಬಲಕ್ಕೆ ನಿಂತರು.
ಯುವಕರು ಸಮಾಜದ ಪ್ರಮುಖರ ಮೇಲೆ ವಾಗ್ದಾಳಿ ಆರಂಭಿಸಿದಾಗ ಸಮಾಜ ಹಿರಿಯರಾದ ಆನಗೋಡು ನಂಜುಂಡಪ್ಪ ಅವರು ಅದನ್ನು ತಡೆಹಿಡಿದು, ಹೀಗೆ ಬೀದಿಯಲ್ಲಿ ಬಂದು ಮಾತನಾಡಬೇಡಿ, ಎಲ್ಲಿ ಮಾತನಾಡಬೇಕು ಎಂದು ಹೇಳಿ ಅಲ್ಲಿಗೆ ಬಂದು ಮಾತನಾಡುತ್ತೇನೆ ಎಂದು ಹೇಳಿದರು.
ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಂಘದ 1977ರ ಬೈಲ ನಿರ್ಲಕ್ಷಿಸಿ ಟ್ರಸ್ಟ್ ಮಾಡಿಕೊಂಡು ತಾವು ಇರುವವರೆಗೂ ಅಧಿಕಾರ ಚಲಾಯಿಸುವ ಹಕ್ಕನ್ನು ಈಗಿನ ಶ್ರೀಗಳು ಪಡೆದಿದ್ದಾರೆ. ಆದ್ದರಿಂದ ಇದುವರೆಗೂ ಉತ್ತರಾಧಿಕಾರಿ ನೇಮಿಸಿಲ್ಲ. ಹೀಗೆ ದೋಷಗಳನ್ನು ಸರಿಪಡಿಸುವ ಕುರಿತು ಶ್ರೀಗಳೊಂದಿಗೆ ಚರ್ಚೆ ಮಾಡಲು ನಾವುಗಳು ಮುಂದಾದರೆ, ಅವರು ನಮ್ಮಗಳ ಸಂಪರ್ಕಕ್ಕೆ ಸಿಗುವುದಿಲ್ಲ. ದೋಷಗಳನ್ನು ಪ್ರಶ್ನಿಸುವರ ಮೇಲೆ ದೊಣ್ಣೆ ಎಸೆಯುತ್ತಿದ್ದಾರೆ. ಪ್ರತಿರೋಧ ನೆಪ ಮಾಡಿಕೊಂಡು ನ್ಯಾಯಾಲಯದಲ್ಲಿ ದಾವೆ ಹೂಡಲಾಗುತ್ತಿದೆ. ಇದಕ್ಕೆಲ್ಲಾ ನಾವುಗಳು ಬಗ್ಗುವುದಿಲ್ಲ. ನಮಗೆ ಸಮಾಜ ಮುಖ್ಯ. ಹೀಗಾಗಿ, ನಾವುಗಳು ತರಳಬಾಳು ಪೀಠ ಉಳಿಸುವ ಕೆಲಸ ಮಾಡುತ್ತಿದ್ದೇವೆ. ಮಠದ ವಿರುದ್ಧವಾಗಿ ನಿಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಅತೀ ಶೀಘ್ರವೇ ಈಗಿನ ಶ್ರೀಗಳು ಪೀಠ ತ್ಯಾಗ ಮಾಡಬೇಕು ಮತ್ತು ಪೀಠದ ಉತ್ತರಾಧಿಕಾರಿ ಆಯ್ಕೆಯ ಅವಕಾಶವನ್ನು ಭಕ್ತರಿಗೆ ನೀಡಬೇಕು, ಬೆಂಗಳೂರಿನ ನ್ಯಾಯಾಲಯದಲ್ಲಿ ಕೆಲ ವಿಚಾರಶೀಲ, ಸಜ್ಜನ ಭಕ್ತರ ವಿರುದ್ಧ ದಾಖಲಿಸಿರುವ ದಾವೆಯನ್ನು ಹಿಂಪಡೆಯಬೇಕು, 1990 ರಲ್ಲಿ ನೀವೇ ಬರೆದುಕೊಂಡ ಟ್ರಸ್ಟ್ ಡೀಡ್ ಅನ್ನು ರದ್ದುಪಡಿಸಬೇಕು ಎಂಬುದು ಸೇರಿದಂತೆ ಕೆಲವು ಅಂಶಗಳ ಬಗ್ಗೆ ಮುಖಂಡರು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಮಾದನಬಾವಿ ರುದ್ರಪ್ಪಗೌಡ, ಶಿವನಕೆರೆ ಬಸವಲಿಂಗಪ್ಪ, ಎಸ್.ಟಿ. ಶಾಂತಗಂಗಾಧರ್, ಎಮ್. ಸಿದ್ದಯ್ಯ ಸೇರಿದಂತೆ ಇತರರು ಇದ್ದರು.