ಜಗಳೂರು : `ನರೇಗಾ’ ಬರಪೀಡಿತ ಕ್ಷೇತ್ರದ ಕಾರ್ಮಿಕರಿಗೆ ವರದಾನ

ಎಸ್.ವಿ. ರಾಮಚಂದ್ರ

ಜಗಳೂರು, ಏ.8- ವರ್ಷದಲ್ಲಿ ಒಂದು ಕುಟುಂಬಕ್ಕೆ ನೂರು ದಿನಗಳ ಕೆಲಸ ನೀಡುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ  ಬರಪೀಡಿತ ತಾಲ್ಲೂಕಿನ ಕೂಲಿಕಾರರ ಬದುಕಿಗೆ   ವರದಾನ ವಾಗಿದೆ ಎಂದು ಶಾಸಕರು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ  ಅಧ್ಯಕ್ಷ ಎಸ್.ವಿ. ರಾಮಚಂದ್ರ ಹೇಳಿದರು.  

ತಾಲ್ಲೂಕಿನ ಬಿಳಿಚೋಡು ಗ್ರಾ.ಪಂ ವ್ಯಾಪ್ತಿಯ ಮಾದನಹಳ್ಳಿ ಗ್ರಾಮದಲ್ಲಿ 2021-22ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ  ಅವರು ಮಾತನಾಡಿದರು. 

ತಾಲ್ಲೂಕಿನಲ್ಲಿ ಮಳೆಗಾಲ ಮತ್ತು ಸುಗ್ಗಿ ಕಾಲ  ಮುಗಿದ ನಂತರ  ರೈತರಿಗೆ ಯಾವುದೇ ಕೆಲಸವಿರುವುದಿಲ್ಲ. ಹೀಗಾಗಿ ಜೀವನ ನಿರ್ವಹಣೆಯೂ ಕೂಡ ತುಂಬಾ ಕಷ್ಟವಾಗುತ್ತದೆ.   ಮಳೆಗಾಲ ಬರುವವರೆಗೂ ನಿತ್ಯ ಕೆಲಸ ಮಾಡಿ ಕೂಲಿ ಹಣ ಪಡೆದುಕೊಳ್ಳಬಹುದಾಗಿದ್ದು, ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬರಪೀಡಿತ, ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ  ಇರುವ ಜಗಳೂರು ತಾಲ್ಲೂಕಿನ ಚಿತ್ರಣ  ಬರುವ  ಮೂರು ವರ್ಷಗಳಲ್ಲಿ ಸಂಪೂರ್ಣ ಬದಲಾಗಲಿದೆ. 57 ಕೆರೆಗಳಿಗೆ  ನೀರು ತುಂಬಿಸುವುದು, ಭದ್ರಾ ಮೇಲ್ದಂಡೆ  ಯೋಜನೆಯಡಿ  40 ಸಾವಿರ ಎಕರೆ  ಪ್ರದೇಶಕ್ಕೆ  ನೀರುಣಿಸುವ ಮೂಲಕ ನೀರಾವರಿ ಪ್ರದೇಶವನ್ನಾಗಿ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.  

ತಾ.ಪಂ. ಇಒ ಮಲ್ಲಾನಾಯ್ಕ ಮಾತನಾಡಿ, ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ  ಕೃಷಿ ಹೊಂಡ, ವೈಯಕ್ತಿಕ ದನದ  ಕೊಟ್ಟಿಗೆ, ಕುರಿ ಶೆಡ್, ಬಚ್ಚಲು ಗುಂಡಿ, ಶೌಚಗೃಹ ಹೀಗೆ  ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ನರೇಗಾದಲ್ಲಿ ಮಹಿಳಾ ಕೂಲಿಕಾರರಿಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಮನವಿ ಮಾಡಿದರು. 

ಕಳೆದ  ವರ್ಷ  ಕೆರೆ ಮತ್ತು ಗೋಕಟ್ಟೆ ಹೂಳೆ ತ್ತಿದ್ದರಿಂದ ಮಳೆಗಾಲದಲ್ಲಿ ನೀರು ಸಂಗ್ರಹಣೆ ಯಾಗಿ ಅಂತರ್ಜಲ ವೃದ್ಧಿಯಾಗಿ ಕೊಳವೆ ಬಾವಿಗಳು ಮರು ಪೂರಣವಾಗಿವೆ. ಹೀಗಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎಂದರು. 

ಬಿಳಿಚೋಡು ಗ್ರಾಮ ಪಂಚಾಯಿತಿಯಲ್ಲಿ ಈಗಾಗಲೇ  ಬಿಳಿಚೋಡು ಮತ್ತು ಮಾದನಹಳ್ಳಿ  ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಯಲ್ಲಿ ಜನ ತೊಡಗಿಕೊಂಡಿದ್ದಾರೆ.  ವಾರ ಕ್ಕೊಮ್ಮೆ  ಎನ್‍ಎಂಆರ್  ತೆಗೆದು  ಕೂಲಿಕಾರರ ಖಾತೆಗಳಿಗೆ ನೇರವಾಗಿ ಹಣ ತುಂಬಲಾಗುತ್ತದೆ ಎಂದು ಅಭಿವೃದ್ದಿ ಅಧಿಕಾರಿ ಎನ್. ಪ್ರಭಾಕರ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ಶಿವಕುಮಾರ್, ತಾಂತ್ರಿಕ ಸಹಾಯಕ ಹೆಚ್. ಎಂ,  ಮಿಥುನ್ ಹಾಗೂ ಇನ್ನಿತರರಿದ್ದರು. 

error: Content is protected !!