ಶಿಕ್ಷಣಕ್ಕೆ ನೆಲೆಗಟ್ಟಾಗಿ ಸಂಸ್ಕಾರ ಅಗತ್ಯ

ಶ.ಸಾ.ಪ. ಪದಾಧಿಕಾರಿಗಳ ಸೇವಾ ದೀಕ್ಷೆ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶ್ರೀ

ದಾವಣಗರೆ, ಫೆ.23- ಶಿಕ್ಷಣಕ್ಕೆ ನೆಲೆಗಟ್ಟಾಗಿ ಸಂಸ್ಕಾರ ಇರಬೇಕು. ಸಂಸ್ಕಾರವಿಲ್ಲದ ಶಿಕ್ಷಣ ಮನುಷ್ಯನನ್ನು ರಾಕ್ಷಸರನ್ನಾಗಿ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ದಾವಣಗೆರೆ ನಗರ ಘಟಕದ ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ ಹಾಗೂ ಶರಣ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಬಾಲ್ಯದಿಂದಲೇ ಒಳ್ಳೆಯ ಸಂಸ್ಕಾರಗಳು ಬಂದಾಗ ಬಸವಣ್ಣನವರು ಹೇಳಿದಂತೆ ಅಂತರಂಗ-ಬಹಿರಂಗ ಶುದ್ಧಿ ಸಾಧ್ಯ. ಮಕ್ಕಳಿಗೆ ನಿಜವಾದ ಸಂಸ್ಕಾರ ಕೊಡ ಬೇಕಾದರೆ ಮೊದಲು ನಾವು ಸಂಸ್ಕಾರ ಪಡೆದಿಬೇಕು. ಆದರೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವು ದರಿಂದ ಸಂಸ್ಕಾರ ಮರೆಯಾಗುತ್ತಿದೆ.  ಹೆತ್ತವರಿಗೆ ಸಂಸ್ಕಾರ ಕೊಡುವಷ್ಯು ವ್ಯವಧಾನವಿಲ್ಲವಾಗಿದೆ. ಮಕ್ಕಳನ್ನು ಕಾನ್ವೆಂಟ್‌ಗೆ ಕಳುಹಿಸಿದರೆ ಹೊಣೆಗಾರಿಕೆ ಮುಗಿಯತು  ಎಂದು ಭಾವಿಸಿದ್ದಾರೆ. ಇನ್ನು  ಗುರುಗಳೂ ಸಹ ಭಕ್ತರ ಅಜ್ಞಾನ ಕಳೆದು, ಸುಜ್ಞಾನದ ಕಡೆ ಕರೆದೊಯ್ಯುವ ಕಾರ್ಯ ಮಾಡುತ್ತಿಲ್ಲ ಎಂದು ಹೇಳಿದರು.

ಧರ್ಮದ ನೆಲೆಗಟ್ಟಿನ ಮೇಲೆ ಬದುಕು ಕಟ್ಟಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಭಾರತ ಧರ್ಮದ ನಾಡು, ಅಧ್ಯಾತ್ಮದ ಬೀಡು. ಸರ್ವ ಜನಾಂಗದ ಶಾಂತಿಯ ತೋಟ ಎಂದೆಲ್ಲಾ ಹೇಳುತ್ತೇವೆ. ಆದರೆ ಶಾತಿ ಇಲ್ಲವಾಗಿದೆ. ಪರಸ್ಪರ ದ್ವೇಷ ಹೆಚ್ಚಾಗಿದೆ. ಧರ್ಮವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡು ಧರ್ಮದ ಹೆಸರಿನಲ್ಲಿ ಜಗಳವಾಡುವ, ಪ್ರಾಣ ತೆಗೆಯುವ, ರಕ್ತ ಸುರಿಸುವ, ಅಶಾಂತಿ ಬೆಳೆಸುವ ದುಷ್ಟ ಮನಸ್ಥಿತಿಯನ್ನು  ಗಳಿಸಿಕೊಳ್ಳು ತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಯಾವ ಧರ್ಮವೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಜಾತಿಯ ಮನೋಭಾವ ಕಿತ್ತು ಹಾಕಿ ಒಂದಾಗಿ ಬಾಳಬೇಕು ಎಂಬುದು ಪ್ರತಿಯೊಂದು ಧರ್ಮದ ಸಾರವಾಗಿದೆ. ಶಾಂತಿ, ಅಹಿಂಸೆ, ಪ್ರೇಮ, ಸತ್ಯ, ಪ್ರಾಮಾಣಿಕತೆಯನ್ನು ಧರ್ಮ  ಹೇಳುತ್ತದೆ. ಇವುಗಳನ್ನೇ ಮೌಲ್ಯ ಎಂದು ತಿಳಿದು ಬಾಳಿದರೆ ಮಾತ್ರ ಬದುಕಿಗೆ ಭವ್ಯತೆ ಬರಲು ಸಾಧ್ಯ ಎಂದು ಹೇಳಿದರು.

ಮೇಲೆ ಬೆಳಕು, ಒಳಗೆ ಕೊಳಕು ಆದರೆ ಪ್ರಯೋಜನವಿಲ್ಲ. `ಮೇಲೆ ಬಸಪ್ಪ ಒಳಗೆ ವಿಷಪ್ಪ’ ಆಗದೆ ಮೇಲೆ ಹಾಗೂ ಒಳಗಡೆ ಎರಡರಲ್ಲೂ ಬಸಪ್ಪ ಆಗಬೇಕು. ಆಗ ಮಾತ್ರ ಸುಂದರ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.

ನಾವು ಶರಣರ ಸ್ಥಾನ ತುಂಬುವ ಕೆಲಸ ಮಾಡಬೇಕು. ಅಂತಹ ವ್ಯಕ್ತಿತ್ವ ಕಟ್ಟಬೇಕು. ಅದಕ್ಕೆ ಬೇಕಾದ ವಾತಾವರಣ ನಿರ್ಮಿಸಬೇಕು. ಆಗ ಮಾತ್ರ ಶರಣರು ನಮ್ಮ ಮೂಲಕ ಉದಯಿಸಿ ಬರಲು ಸಾಧ್ಯ. ಈ ಕೆಲಸ ನಿರಂತರವಾಗಿ ನಡೆಯಬೇಕಿದೆ. ಈ ನೆಲೆಯಲ್ಲಿ ಶರಣ ಸಾಹಿತ್ಯ ಪರಿಷತ್ ಕೇವಲ ಸಮಾರಂಭಗಳನ್ನು ಮಾಡದೆ ಜನರನ್ನು ಸನ್ಮಾನರ್ಗದೆಡೆ ಕರೆದೊಯ್ಯಬೇಕು. ಸಂಸ್ಕಾರ ನೀಡುವ ಕೆಲಸ ನಡೆಸಬೇಕು ಎಂದು  ಶ್ರೀಗಳು ಹೇಳಿದರು.

ಅನಸೂಯದೇವಿ ಟಿ.ಎಸ್. ಪಟೇಲ್ ಸೇವಾ ದೀಕ್ಷೆ ನೀಡಿದರು. ನಗರ ಘಟಕದ ಅಧ್ಯಕ್ಷ ಎಂ.ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಎಂಜಿನಿಯರ್ ಎ.ಹನುಮಂತಪ್ಪ ಅನುಭಾವ ನುಡಿಗಳನ್ನಾಡಿದರು.  ಬಿ.ದಿಳ್ಯೆಪ್ಪ ಇತರರು ಉಪಸ್ಥಿತರಿದ್ದರು.

error: Content is protected !!