1ರಿಂದ ಹಂತ ಹಂತವಾಗಿ ಗ್ಯಾರಂಟಿ ಜಾರಿ: ಹೆಚ್.ಬಿ. ಮಂಜಪ್ಪ

1ರಿಂದ ಹಂತ ಹಂತವಾಗಿ ಗ್ಯಾರಂಟಿ ಜಾರಿ: ಹೆಚ್.ಬಿ. ಮಂಜಪ್ಪ

ಎಸ್ಸೆಸ್-ಎಸ್ಸೆಸ್ಸೆಂ ಗೆಲುವು ಹಿನ್ನೆಲೆ: ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸಿದ ಜಿಲ್ಲಾ ಕಾಂಗ್ರೆಸ್

ದಾವಣಗೆರೆ, ಮೇ 30- ಕಾಂಗ್ರೆಸ್ ಪಕ್ಷ ನುಡಿದಂತೆ ಹಿಂದೆಯೂ ನಡೆದಿದೆ, ಮುಂದೆಯೂ ನಡೆಯಲಿದೆ. ಜೂನ್ 1 ರಿಂದ ಹಂತ-ಹಂತವಾಗಿ 5 ಗ್ಯಾರಂಟಿಗಳನ್ನು ಜಾರಿಗೆ ತರಲಿದ್ದು, ಪಕ್ಷದ ಕಾರ್ಯಕರ್ತರು ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪುವಂತೆ ಮಾಡಬೇಕೆಂದು  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಕ್ಷದ ಕಛೇರಿಯಲ್ಲಿ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಕಾರ್ಯಕರ್ತರಿಗೆ ಇಂದು ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಿಜೆಪಿಗರು ಸೋತು ಹತಾಶೆ ಭಾವನೆಯಿಂದ ಸುಳ್ಳು ಸುದ್ಧಿ ಹಬ್ಬಿಸುತ್ತಿದ್ದಾರೆ. ಬಿಜೆಪಿ ತಟ್ಟೆಯಲ್ಲಿ ಹೆಗ್ಗಣವೇ ಬಿದ್ದಿದೆ. ಅದನ್ನು ನೋಡಿಕೊಳ್ಳದೇ ಮತ್ತೊಬ್ಬರ ತಟ್ಟೆಯಲ್ಲಿ ಏನು ಬಿದ್ದಿದೆ ಎಂಬುದರ ಬಗ್ಗೆ ಚಿಂತೆ ಅವರದ್ದು.  ಕೇಂದ್ರ ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿಗರು ಪ್ರತಿಯೊಬ್ಬರ ಖಾತೆಗೂ 15 ಲಕ್ಷ, 2 ಕೋಟಿ ಉದ್ಯೋಗದಂತಹ ಭರವಸೆಗಳನ್ನು ನೀಡಿ ಇಂದಿಗೂ ಸಹ ಒಂದೇ ಒಂದು ಭರವಸೆ ಈಡೇರಿಸದ ಬಿಜೆಪಿಯವರು ಕಾಂಗ್ರೆಸ್ ಪಕ್ಷದ ಗ್ಯಾರಂಟಿಯನ್ನು ಪ್ರಶ್ನಿಸುತ್ತಿದ್ದಾರೆ ಎಂದರು.

ಕೆಪಿಸಿಸಿ ಸದಸ್ಯ ಮುದೇಗೌಡ್ರು ಗಿರೀಶ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಶ್ರಮದಿಂದ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಅರ್ಹರನ್ನು ಗುರುತಿಸಿ ಅಧಿಕಾರ ನೀಡಲಾಗುವುದು. ಮುಂದಿನ ದಿನಗಳಲ್ಲಿ ಬರುವ ಎಲ್ಲಾ ಚುನಾವಣೆಗಳಲ್ಲೂ ಪಕ್ಷ ಅಭೂತಪೂರ್ವ ಗೆಲುವು ದಾಖಲಿಸಬೇಕೆಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರ್ಯಕರ್ತರ ಶ್ರಮವೇ ಕಾರಣ. ಕಳೆದ 5 ವರ್ಷಗಳಿಂದ ಪಕ್ಷದ ಪರವಾಗಿ ಕೆಲಸ ಮಾಡಿದ ಕಾರ್ಯಕರ್ತರನ್ನು ಜಿಲ್ಲಾಧ್ಯಕ್ಷರು ಗುರುತಿಸಿ, ವಿವಿಧ ಇಲಾಖೆಗಳಿಗೆ ನಾಮನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.

ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರ ಗೆಲುವಿನಲ್ಲಿ ಅವರ ಕುಟುಂಬ ವರ್ಗದ ಪಾತ್ರವೂ ಇದೆ. ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್, ಶ್ರೀಮತಿ ರೇಖಾ ಗಣೇಶ್, ಎಸ್.ಎಸ್. ಬಕ್ಕೇಶ್, ಎಸ್.ಎಸ್. ಗಣೇಶ್, ಸಮರ್ಥ್ ಶಾಮನೂರು, ಶ್ರೇಷ್ಠ ಶಾಮನೂರು ಸೇರಿದಂತೆ, ಕುಟುಂಬದ ಎಲ್ಲರೂ ಶ್ರಮಿಸಿದ್ದಾರೆ ಎಂದು ದಿನೇಶ್ ಕೆ.ಶೆಟ್ಟಿ ಶ್ಲ್ಯಾಘಿಸಿದ್ದಾರೆ.

ಪರಿಶಿಷ್ಟ ಜಾತಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಹೆಚ್.ವೀರಭದ್ರಪ್ಪ ಮಾತನಾಡಿ, ಪಕ್ಷಕ್ಕಾಗಿ ದುಡಿದವರನ್ನು ಗುರುತಿಸುವಂತಹ ಕೆಲಸಗಳಾಗಲೀ ಎಂದರು.

ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಹಿಳಾ ಕಾರ್ಯಕರ್ತರು ಮನೆ-ಮನೆಗೆ ತಲುಪಿಸುವಂತಹ ಕೆಲಸ ಮಾಡಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಪ್ರಾಶಸ್ತ್ಯ ನೀಡಬೇಕೆಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೆ.ಜಿ.ಶಿವಕುಮಾರ್ ಮತ್ತು ಅಯೂಬ್ ಪೈಲ್ವಾನ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದಾಗಿ ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಿದ್ದು, ಕೆಲವು ಭಾಗಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಮತಗಳು ಬಂದಿಲ್ಲ. ಆ ಭಾಗದ ಕಾರ್ಯಕರ್ತರು ಇನ್ನು ಹೆಚ್ಚಿನದಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಎಸ್.ಮಲ್ಲಿಕಾರ್ಜುನ್, ಎ.ನಾಗರಾಜ್, ಪ್ರಚಾರ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ್, ನಿವೃತ್ತ ಕಾರ್ಯಪಾಲಕ ಅಭಿಯಂತರ ಆನಂದಪ್ಪ, ಎನ್.ಜೆ.ನಿಂಗಪ್ಪ, ರಾಮಚಂದ್ರ, ಅಡಾಣಿ ಸಿದ್ದಪ್ಪ, ಸುರೇಶ್, ಯುವ ಕಾಂಗ್ರೆಸ್‍ನ ಸಾಗರ್, ರಹಮತ್ ಅಲಿ, ಕೊಡಪಾನ ದಾದಾಪೀರ್, ಸುಭಾನ್, ಹರೀಶ್ ಬಸಾಪುರ, ರಾಜೇಶ್ವರಿ, ಶುಭ ಮಂಗಳ, ರಂಗನಾಥ ಸ್ವಾಮಿ, ಹರೀಶ್, ಶಿರಮನಹಳ್ಳಿ ರುದ್ರೇಶ್, ಆರನೇಕಲ್ಲು ಮಂಜಪ್ಪ, ಡೋಲಿ ಚಂದ್ರು ಮತ್ತಿತರರಿದ್ದರು.

error: Content is protected !!