ಸ್ವಚ್ಛ ಭಾರತ್ – ಗಾಂಧೀಜಿಯವರ ಕನಸು…

ರಾಷ್ಟ್ರಪಿತ  ಮಹಾತ್ಮಾ  ಗಾಂಧೀಜಿ  ಅವರು  ಕಂಡ  ಸ್ವಚ್ಚ  ಭಾರತ,  ಸ್ವಸ್ಥ  ಭಾರತ  ಎಂಬ  ಕನಸನ್ನು  ನನಸಾಗಿಸುವುದು  ಪ್ರತಿಯೊಬ್ಬ  ಭಾರತೀಯನ  ಆದ್ಯ  ಕರ್ತವ್ಯವಾಗಿದೆ.  ಹಾಗಾಗಿ  ನಮ್ಮ  ದೇಶದ  ಇಂದಿನ  ಪ್ರಧಾನಿ  ನರೇಂದ್ರ  ಮೋದಿಯವರು  ಸ್ವಚ್ಚ  ಭಾರತ  ಅಭಿಯಾನಕ್ಕೆ  ಮುನ್ನುಡಿ  ಬರೆದಿದ್ದಾರೆ.    ಅಭಿಯಾನವು  ಮಹಾತ್ಮಾ  ಗಾಂಧೀಜಿಯವರ 150ನೇ  ಜನ್ಮ ದಿನಾಚರಣೆಗೆ  ಮುನ್ನ  ಗುರಿ  ತಲುಪುವ  ಧ್ಯೇಯವನ್ನು  ಹೊಂದಿದೆ.    ಅಭಿಯಾನವು  ಭಾರತವನ್ನು  ಸ್ವಚ್ಚ  ಹಾಗು  ಸ್ವಸ್ಥ  ದೇಶವನ್ನಾಗಿಸುವುದಕ್ಕೆ  ತುಂಬಾ  ಪ್ರಮುಖವಾದದ್ದು.  ಇದು  ದೇಶದ  ಎಲ್ಲ  ಪಟ್ಟಣಗಳನ್ನು  ಹಾಗೂ  ಹಳ್ಳಿಗಳನ್ನು  ಒಳಗೊಂಡಿದೆ.  ಭಾರತ  ಸರ್ಕಾರವು  ನರೇಂದ್ರ  ಮೋದಿಯವರ  ನೇತೃತ್ವದಲ್ಲಿ  ಅಕ್ಟೋಬರ್  2 ರಂದೇ  ಅಂದರೆ  ಮಹಾತ್ಮಾ  ಗಾಂಧೀಜಿಯವರ  ಜನ್ಮ ದಿನದಂದೇ  ಜಾರಿಯಲ್ಲಿ  ತಂದಿತು.

ಗಾಂಧೀಜಿಯವರ  ಕಾಲದಿಂದಲೇ    ಅಭಿಯಾನವು  ಪ್ರಾರಂಭವಾಗಿತ್ತು. 2014-15  ನೇ  ಸಾಲಿನಲ್ಲಿ  ಇದು  ಅಧಿಕೃತವಾಗಿ  ಜಾರಿಯಲ್ಲಿ  ಬಂದಿತು. 2 ಅಕ್ಟೋಬರ್  2014 ರಂದು  ನವದೆಹಲಿಯ  ರಾಜ್‍ಘಾಟ್‌ನಲ್ಲಿ  ರಸ್ತೆಯೊಂದರ  ಕಸ ಗುಡಿಸುವುದರ  ಮೂಲಕ    ಅಭಿಯಾನವನ್ನು  ಪ್ರಧಾನಿ  ನರೇಂದ್ರ  ಮೋದಿಯವರು  ಪ್ರಾರಂಭಿಸಿದರು.  ಪ್ರಧಾನಿಯವರು  ಸ್ವತಃ  ಕೈಯಲ್ಲಿ  ಪೊರಕೆ  ಹಿಡಿದು  ರಸ್ತೆಯನ್ನು  ಸ್ವಚ್ಚಗೊಳಿಸಿ  ಸ್ವಚ್ಚ  ಭಾರತ್  ಅಭಿಯಾನಕ್ಕೆ  ಚಾಲನೆ  ನೀಡುವ  ಮೂಲಕ  ದೇಶದ  ಜನರಲ್ಲಿ  ರೋಮಾಂಚನ  ಉಂಟುಮಾಡಿ  ಸ್ಫೂರ್ತಿ  ನೀಡಿದ್ದಾರೆ.

ಭಾರತವು  ಅಭಿವೃದ್ಧಿಯನ್ನು  ಹೊಂದುತ್ತಿರುವ  ದೇಶವಾಗಿದ್ದು, ಹೆಚ್ಚಿನ  ಸಂಖ್ಯೆಯ  ಹಳ್ಳಿಗಳನ್ನು  ಹೊಂದಿದೆ.  ಹಳ್ಳಿಗಳು  ಹೆಚ್ಚಾಗಿರುವುದೇ  ಸ್ವಚ್ಚತೆಗೆ  ಒಂದು  ದೊಡ್ಡ  ಸಮಸ್ಯೆಯಾಗಿದೆ.  ಏಕೆಂದರೆ  ಅವರಿಗೆ  ಶೌಚಾಲಯದ  ವ್ಯವಸ್ಥೆ  ಇರುವುದಿಲ್ಲ. ಅವರು  ಬಯಲು  ಶೌಚಕ್ಕೆ  ಹೋಗಬೇಕಾಗುತ್ತದೆ.  ಇದು  ಆರೋಗ್ಯದ  ಮೇಲೆ  ಕೆಟ್ಟ  ಪರಿಣಾಮವನ್ನು  ಉಂಟುಮಾಡುತ್ತದೆ.  ಹೆಚ್ಚಿನ  ಜನರಿಗೆ  ಶಿಕ್ಷಣ  ಇಲ್ಲದೇ  ಇರುವುದರಿಂದ  ಎಲ್ಲೆಂದರಲ್ಲಿ  ಉಗಿಯುವುದು,  ಕಸಕಡ್ಡಿ  ಹಾಗೂ  ತ್ಯಾಜ್ಯಗಳನ್ನು  ಹಾಕುವಂತಹ  ಸಮಸ್ಯೆಗಳು  ಕಂಡುಬರುತ್ತಿವೆ.    ಸಮಸ್ಯೆಗಳ ಪರಿಹಾರಕ್ಕಾಗಿ ಸ್ವಚ್ಚ  ಭಾರತ್  ಅಭಿಯಾನವನ್ನು  ಪ್ರಾರಂಭಿಸಲಾಯಿತು.

  ಅಭಿಯಾನವು  ಅನೇಕ  ಉದ್ದೇಶಗಳನ್ನು  ಹೊಂದಿದೆ —
– ಪ್ರಮುಖವಾಗಿ  ದೇಶವನ್ನು  ಸ್ವಚ್ಚವಾಗಿಡುವುದು
– ಉತ್ತಮ  ನೀರಿನ  ವ್ಯವಸ್ಥೆ,  ಒಳಚರಂಡಿ  ವ್ಯವಸ್ಥೆಯನ್ನು  ಮಾಡುವುದು.
– ಪ್ರಜೆಗಳಿಗೆ  ಸ್ವಚ್ಚತೆಯ  ಬಗ್ಗೆ  ಅರಿವು  ಮೂಡಿಸುವಂತಹ  ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳುವುದು.
– ಬಯಲು  ಶೌಚ  ನಿರ್ಮೂಲನೆ.
– ಮಲ  ಹೊರುವ  ಪದ್ಧತಿಯನ್ನು  ಸಂಪೂರ್ಣವಾಗಿ ತೆಗೆದು  ಹಾಕುವುದು.
– ಘನತ್ಯಾಜ್ಯಗಳ  ನಿರ್ವಹಣೆ,  ಮರುಬಳಕೆ  ಹಾಗೂ  ಸಂಸ್ಕರಣೆ.
– ಸಾರ್ವಜನಿಕರಲ್ಲಿ  ನಿರ್ಮಲೀಕರಣಕ್ಕಾಗಿ  ಮಾನಸಿಕ  ಬದಲಾವಣೆ.
– ಸಂಪೂರ್ಣ  ಕೊಳೆಗೇರಿ  ನಿರ್ಮೂಲನೆ.

  ಮೇಲಿನ ಉದ್ದೇಶಗಳನ್ನು  ಈಡೇರಿಸುವುದಕ್ಕಾಗಿ  ಪ್ರಧಾನಿ  ಮೋದಿಯವರು  ಪ್ರಜೆಗಳಿಗೆ  ಮೊದಲು  ತಮ್ಮ  ಮನೆಯನ್ನು  ಹಾಗೂ  ತಮ್ಮ  ಸುತ್ತಮುತ್ತಲಿನ  ಪರಿಸರವನ್ನು  ಸ್ವಚ್ಚವಾಗಿಟ್ಟುಕೊಳ್ಳಲು  ಕರೆ  ನೀಡಿದ್ದಾರೆ.  ಅಲ್ಲದೇ  ಸಚಿನ್  ತೆಂಡೂಲ್ಕರ್,  ಅಂಬಾನಿಯಂತಹ  ದಿಗ್ಗಜರಿಗೆ  ಕೈ  ಜೋಡಿಸಲು  ಆಹ್ವಾನಿಸಿದ್ದು,    ಅಭಿಯಾನಕ್ಕೆ  ಇನ್ನಷ್ಟು  ಮೆರಗು  ತಂದಿದೆ.  ಸರ್ಕಾರಿ  ಹಾಗೂ  ಸರ್ಕಾರೇತರ  ಸಂಸ್ಥೆಗಳ  ಬೆಂಬಲ, ಸಾರ್ವಜನಿಕರ  ಸಹಭಾಗಿತ್ವ,  ಜಾಲತಾಣ,  ಮಾಧ್ಯಮಗಳ  ಮೂಲಕ  ಸ್ವಚ್ಚತೆಯ  ವಿಷಯ  ಕುರಿತು  ಪ್ರಚಾರ  ಇವೆಲ್ಲವುಗಳು    ಅಭಿಯಾನವನ್ನು  ಮತ್ತಷ್ಟು  ಚುರುಕುಗೊಳಿಸಿದೆ. 2019 ರಲ್ಲಿ ಗಾಂಧೀಜಿಯವರ 150ನೇ  ಜಯಂತಿ  ಆಚರಣೆಯಲ್ಲಿ  ಭಾರತವನ್ನು  ಕಸ ಮುಕ್ತಗೊಳಿಸುವುದರ  ಮೂಲಕ  ಆಚರಿಸೋಣ  ಎಂದು  ನ್ಯೂಯಾರ್ಕಿನ  ಮ್ಯಾಡಿಸನ್  ಸ್ಪೇರ್ ನಲ್ಲಿ  ಮಾಡಿದ  ಭಾಷಣದಲ್ಲಿ  ಮೋದಿಯವರು  ಘೋಷಿಸಿದ್ದನ್ನು  ಇಲ್ಲಿ  ಸ್ಮರಿಸಬಹುದು.

ಮೋದಿಯವರು  ಗಾಂಧೀಜಿ  ಹೇಳಿಕೊಟ್ಟ  ಮಂತ್ರ  ಬೋಧಿಸಿದ್ದರಿಂದ  ಪ್ರಭಾವಿತರಾದ  ಸರಿಸುಮಾರು  30.98 ಲಕ್ಷ  ನೌಕರರು  ಸ್ವಚ್ಚತೆಯ  ಶಪಥ  ಕೈಗೊಂಡಿದ್ದಾರೆ.    ಅಭಿಯಾನದಲ್ಲಿ  ಕೇಂದ್ರ  ಹಾಗೂ  ರಾಜ್ಯ  ಸರ್ಕಾರಿ  ನೌಕರರ  ಜೊತೆಗೆ  ಎನ್‌ಜಿಓಗಳು,  ಶೈಕ್ಷಣಿಕ ಹಾಗೂ  ಆರೋಗ್ಯ  ಸಂಸ್ಥೆಗಳು,  ಪಟ್ಟಣ  ಪಂಚಾಯಿತಿ,  ಪುರಸಭೆ,  ನಗರಸಭೆ,  ಮಹಾನಗರಪಾಲಿಕೆಗಳು,  ಸ್ವಯಂ ಸೇವಾಸಂಸ್ಥೆಗಳು,  ಯುವಸಂಘ, ಸಂಸ್ಥೆಗಳು,  ಮಾರುಕಟ್ಟೆ  ಒಕ್ಕೂಟಗಳು,  ಕೈಗಾರಿಕೆ  ಹಾಗೂ  ವಾಣಿಜ್ಯ  ಸಂಘ, ಸಂಸ್ಥೆಗಳು  ಪಾಲ್ಗೊಳ್ಳುವುದು  ಅಗತ್ಯವಾಗಿದೆ.  ಇಂದು  ದೇಶವ್ಯಾಪಿ  ಸ್ವಚ್ಚತಾ  ಅಭಿಯಾನ  ಜಾರಿಯಲ್ಲಿದೆ.  ವಾರಕ್ಕೆ  2.00  ಘಂಟೆಗಳ  ಸಮಯ  ಇದಕ್ಕಾಗಿ  ಮೀಸಲಿಡಿ.  ಕಸವನ್ನು  ಎಲ್ಲೆಂದರಲ್ಲಿ  ಎಸೆಯುವ  ಬದಲು  ಕಡ್ಡಾಯವಾಗಿ  ಕಸದ  ಬುಟ್ಟಿಗೆ  ಹಾಕಿ  ಎಂದು  ಪ್ರಧಾನಿಯವರು  ಕರೆ  ನೀಡಿದ್ದಾರೆ.  

ಮಕ್ಕಳಲ್ಲಿ  ಸ್ವಚ್ಚ  ಭಾರತ  ನಿರ್ಮಾಣದ  ಬಗ್ಗೆ  ಅರಿವು  ಮೂಡಿಸಿದರೆ  ಅವರ  ನಾಳಿನ  ಬದುಕು  ಸುಂದರವಾಗಿರುತ್ತದೆ.    ಅಭಿಯಾನವನ್ನು  ಯಶಸ್ವಿಗೊಳಿಸುವಲ್ಲಿ ವಿದ್ಯಾರ್ಥಿಗಳ  ಪಾತ್ರ  ತುಂಬಾ  ಪ್ರಮುಖವಾಗಿದೆ.  ಹಾಗಾಗಿ  ಕಾಲೇಜು  ಹಾಗೂ  ವಿಶ್ವವಿದ್ಯಾನಿಲಯಗಳಲ್ಲಿ  ರಾಷ್ಟ್ರೀಯ ಸೇವಾ  ಯೋಜನಾ  ಘಟಕಗಳನ್ನು  ಸ್ಥಾಪಿಸುವುದರ  ಜೊತೆಗೆ  ವಿದ್ಯಾರ್ಥಿಗಳನ್ನು  ಸ್ವಚ್ಚತಾ  ಕಾರ್ಯಗಳಲ್ಲಿ  ತೊಡಗಿಸಿಕೊಳ್ಳುವಂತೆ  ಮಾಡಲಾಗಿದೆ.  

ವಿದ್ಯಾರ್ಥಿಗಳು  ತಮ್ಮ  ಶಾಲೆಯ  ಆವರಣವನ್ನು  ಹಾಗೂ  ಸುತ್ತಮುತ್ತಲಿನ  ಪರಿಸರವನ್ನು  ಸ್ವಚ್ಚವಾಗಿಟ್ಟುಕೊಳ್ಳಲು  ಅನೇಕ  ಅರಿವು  ಮೂಡಿಸುವಂತಹ  ಕಾರ್ಯಕ್ರಮಗಳನ್ನು  ಸಂಘಟಿಸುವುದು.  ಇದಕ್ಕಾಗಿಯೇ  ಪ್ರತೀ ವರ್ಷ ಹಳ್ಳಿಗಳಲ್ಲಿ  ಶಿಬಿರಗಳನ್ನು  ಹಮ್ಮಿಕೊಳ್ಳುವ  ಮೂಲಕ  ಹಳ್ಳಿಯ  ಜನರಲ್ಲೂ  ಕೂಡ  ಸ್ವಚ್ಚತೆಯ ಬಗ್ಗೆ  ಜಾಗೃತಿ  ಮೂಡಿಸುವಂತಹುದು  ವಿದ್ಯಾರ್ಥಿಗಳು  ಹಾಗೂ ರಾಷ್ಟ್ರೀಯ  ಸೇವಾ  ಯೋಜನಾ  ಅಧಿಕಾರಿಗಳ  ಕರ್ತವ್ಯವಾಗಿದೆ. 2014 ರಿಂದ 19 ರ  ವರೆಗೆ  ಭಾರತ  ಸರ್ಕಾರವು  110 ಮಿಲಿಯನ್  ಶೌಚಾಲಯಗಳನ್ನು  ಕಟ್ಟಿಸುವ  ಕಾರ್ಯವನ್ನು  ಕೈಗೊಂಡಿರುವುದನ್ನು  ಇಲ್ಲಿ  ಸ್ಮರಿಸಬಹುದು.

ಇಂದು  ಭಾರತದಲ್ಲಿ  ಸ್ವಚ್ಚ  ಭಾರತ್  ಅಭಿಯಾನವು  ಉತ್ತಮ  ಪ್ರಗತಿಯನ್ನು  ಕಂಡಿದೆ.  ಕುಡಿಯುವ  ನೀರಿನ ವ್ಯವಸ್ಥೆ, ಸ್ಯಾನಿಟೇಶನ್  ಹಾಗೂ  ಶೌಚಾಲಯ  ವ್ಯವಸ್ಥೆಗಳನ್ನು  ಅಭಿವೃದ್ಧಿಪಡಿಸುವಲ್ಲಿ  ಯಶಸ್ವಿಯಾಗಿದೆ.  ಹಳ್ಳಿಗಳ  ಜನರು  ಶೌಚಾಲಯವನ್ನು  ಬಳಸುವತ್ತ  ಒಲವು  ತೋರಿದ್ದಾರೆ.  ಒಟ್ಟಾರೆ 8.4  ಕೋಟಿ  ಶೌಚಾಲಯಗಳನ್ನು  ಕಟ್ಟಿಸಲಾಗಿದೆ.  

  ಅಭಿಯಾನವನ್ನು  ಯಶಸ್ವಿ ಗೊಳಿಸುವಲ್ಲಿ  ಹೆಣ್ಣುಮಕ್ಕಳ  ಹಾಗೂ  ತಾಯಂದಿರ  ಪಾತ್ರವೂ  ತುಂಬಾ  ಅವಶ್ಯಕ.  ಮಕ್ಕಳಿಗೆ  ಚಿಕ್ಕಂದಿನಿಂದಲೇ  ಅರಿವು  ಮೂಡಿಸುವುದು,  ಅದರಲ್ಲೂ  ಹೆಣ್ಣುಮಕ್ಕಳಿಗೆ  ಅವರ  ಆರೋಗ್ಯವನ್ನು  ಕಾಪಾಡಿಕೊಳ್ಳಲು  ಸ್ವಚ್ಚತೆ  ತುಂಬಾ  ಅವಶ್ಯಕ.  ಹಾಗಾಗಿ  ಮಹಿಳೆಯರು  ಮತ್ತು  ಮಹಿಳಾ  ಸಂಘಟನೆಗಳು    ಅಭಿಯಾನದಲ್ಲಿ  ತಮ್ಮನ್ನು  ತಾವು  ತೊಡಗಿಸಿಕೊಳ್ಳಬೇಕು.


ಸ್ವಚ್ಛ ಭಾರತ್ - ಗಾಂಧೀಜಿಯವರ ಕನಸು... - Janathavaniಪ್ರೊ. ರೋಹಿಣಿ. ಎಂ. ಶಿರಹಟ್ಟಿ.
ಸಹ  ಪ್ರಾಧ್ಯಾಪಕರು,
ವಾಣಿಜ್ಯಶಾಸ್ತ್ರ ವಿಭಾಗ, ಶ್ರೀಮತಿ ಗಿರಿಯಮ್ಮ ಆರ್ ಕಾಂತಪ್ಪ ಶ್ರೇಷ್ಟಿ ಪ್ರ.ದ.ಮ.ಕಾಲೇಜು, ಹರಿಹರ.
[email protected]

error: Content is protected !!