ಜೀವನದ ಮೌಲ್ಯಗಳಿಗೆ ಸಂಕೇತವಾಗಿರುವ ಆಭರಣಗಳು…

ಸ್ತ್ರೀಯ ಅಲಂಕಾರ ಸಾಧನಗಳಲ್ಲಿ ಆಭರಣಗಳು ಮಹತ್ವದ ಪಾತ್ರ ವಹಿಸಿವೆ. ಅಮೂಲ್ಯ ಪದಾರ್ಥಗಳಾದ  ಲೋಹ ಮತ್ತು ರತ್ನಗಳಿಂದ ಕೂಡಿದ ಅಲಂಕರಣ ಸಾಧನ ಆಭರಣ. ಅತಿ ಪ್ರಾಚೀನ ಕಾಲದಲ್ಲಿ ಚಿಪ್ಪು, ಶಂಖ, ಕವಡೆಗಳು ಮುಖ್ಯವಾಗಿದ್ದು, ಆಭರಣಗಳ ವಸ್ತುಗಳಾಗಿದ್ದವು. ಆದರೆ ಚಿರ ಕಾಲ ಉಳಿದಿರುವುದು ಲೋಹ ಮತ್ತು ರತ್ನಗಳು ಮಾತ್ರ. ಆಭರಣಗಳ ರಚನೆ ಮತ್ತು ಧಾರಣೆಯಲ್ಲಿಯ ಉದ್ದೇಶಗಳು ಅನೇಕ. ಇವುಗಳಲ್ಲಿ ಸೌಂದರ್ಯ ವರ್ಧನೆ, ಸ್ವಪ್ರತಿಷ್ಠೆಯ  ಪ್ರದರ್ಶನ ಮತ್ತು ಸಂಪತ್ತಿನ ಸಂಗ್ರಹ ಇವುಗಳು ಮೂಲ ಉದ್ದೇಶಗಳಾಗಿವೆ. ಇಲ್ಲಿ ಆಯಾ ಕಾಲದ ಸಾಮಾಜಿಕ ಮೌಲ್ಯಗಳು ಮತ್ತು ವ್ಯಕ್ತಿಯ ಮಾನಸಿಕ ಸ್ಥಿತಿಯ ಪಾತ್ರ ಹಿರಿದು.  ಆಭರಣಗಳು ಒಂದು ಜನಾಂಗದ ವೈಶಿಷ್ಟ್ಯವನ್ನು ಪ್ರತಿಬಿಂಬಿಸುವ ಪ್ರತೀಕಗಳಾಗಿವೆ. ಹಲವು ಆಭರಣಗಳಿಗೆ ಧಾರ್ಮಿಕ ನಂಬಿಕೆಗಳು  ಮತ್ತು ಸಂಸ್ಕಾರದ ಪ್ರಭಾವಗಳ ಮಹತ್ವವಿದೆ. ಉದಾಹರಣೆಗೆ ಮುತ್ತೈದೆಯ ಓಲೆ, ಮೂಗುತಿ, ತಾಳಿ, ಕಡಗ ಮತ್ತು  ಕಾಲುಂಗುರ. ಈ ಆಭರಣಗಳ ವಿಷಯ ಸ್ತ್ರೀಯರ ಮನೋಧರ್ಮಕ್ಕೆ ಸಂಬಂಧಪಟ್ಟದ್ದು. ತಾಯತ, ಯಂತ್ರ, ಕರಡಿಗೆ, ಚಿನ್ನದ ಹೊದಿಕೆಯ ರುದ್ರಾಕ್ಷಿ ಇತ್ಯಾದಿ ಆಭರಣಗಳಲ್ಲಿ ಒಡವೆಗಳು ಆಯಾ ವ್ಯಕ್ತಿಯ ಸಾಮಾಜಿಕ, ಧಾರ್ಮಿಕ ನೆಲೆ, ಬೆಲೆಗಳನ್ನು ವ್ಯಕ್ತ ಪಡಿಸುತ್ತವೆ. 

‘ಇಟ್ಟು ತೊಟ್ಟರೆ ಪುಟ್ಟಕ್ಕ ಚೆಂದ’. ಆಭರಣಗಳು ಸೌಂದರ್ಯವನ್ನು ಹೆಚ್ಚಿಸುತ್ತವೆ. ಇವು ಶ್ರೀಮಂತಿಕೆಯ ಕುರುಹು ಆಗಿವೆ. ವ್ಯಕ್ತಿತ್ವಕ್ಕೆ  ಪ್ರತಿಷ್ಠೆ, ಗೌರವವನ್ನು ತಂದು ಕೊಡುತ್ತವೆ. ಕೆಲವರಿಗೆ ಅಲಂಕಾರ ಸಾಧನಗಳಾದರೆ ಮತ್ತೆ ಕೆಲವರಿಗೆ ಅಹಂಕಾರದ ಪ್ರತೀಕವೂ ಆಗಬಹುದು. ಅವರವರ ಅಭಿರುಚಿಗೆ ತಕ್ಕಂತೆ ಆಯ್ದ ಆಭರಣಗಳು ಅವರನ್ನು ಅಲಂಕರಿಸುತ್ತವೆ. 

ಪ್ರಪಂಚದ ಇತಿಹಾಸದಲ್ಲಿ ಆಭರಣಗಳ ಮೂಲವನ್ನು ಕಂಡುಹಿಡಿಯುವುದು ಕಷ್ಟ. ಇವುಗಳ ಬಳಕೆ ಶಿಲಾಯುಗದಲ್ಲೂ ಇತ್ತು. ಕಂಚಿನ ಯುಗಕ್ಕೂ ಮೊದಲು ಚಿನ್ನದ ಒಡವೆಗಳು ಪ್ರಚಲಿತವಾಗಿದ್ದವು ಎಂದು ತಿಳಿದಿದೆ. ಸುಗ್ರೀವನಿಂದ ಶ್ರೀರಾಮನಿಗೆ ದೊರೆತ ಸೀತೆಯ ಕಾಲುಗೆಜ್ಜೆ, ಕಡಗ ರಾಮ ಸೀತೆಗೆ ಕಳುಹಿಸಿದ ಚೂಡಾಮಣಿ, ಸೀತೆ ಹನುಮನಿಗೆ ಬಹುಮಾನವಾಗಿ ನೀಡಿದ ಕಂಠಾಭರಣ  ಇನ್ನೂ ಭಾರತದಲ್ಲಿ ಇವೇ ಹೆಸರಿನಿಂದ ಪ್ರಚಲಿತವಿವೆ. ಸೌಂದರ್ಯಕ್ಕಾಗಿ ಹರಳುಗಳನ್ನು ಚಿನ್ನದಲ್ಲಿ ಕೂರಿಸಿ  ಮಾಡುವ ಕಲೆಯನ್ನು ಭಾರತ ಅರಿತಿದ್ದೆಂದು ಶ್ಯಮಂತಕ ಮಣಿಯ ಕಥೆಯಿಂದ ತಿಳಿದುಕೊಳ್ಳಬಹುದು. 2000 ವರ್ಷಕ್ಕೂ ಹಿಂದೆ  ರೂಪುಗೊಂಡ ಮನೋಧರ್ಮ ಶಾಸ್ತ್ರದಲ್ಲಿಯೂ ಆಭರಣ ಕಲೆ ವಿವರಿಸಲ್ಪಟ್ಟಿದೆ.  ಬಂಗಾರವನ್ನು ಮಿಶ್ರಣಗೊಳಿಸಿದರೆ ದಂಡ ವಿಧಿಸಲಾಗುತ್ತಿತ್ತು. ಮೃಚ್ಛಕಟಿಕ  ಎಂಬ ಸಂಸ್ಕೃತ ನಾಟಕದಲ್ಲಿ ಹರಳು, ಮುತ್ತುಗಳನ್ನು  ಬಣ್ಣ ಬಣ್ಣ ದಾರಗಳಲ್ಲಿ ಹೆಣೆದು ತಯಾರಿಸುವ ರೀತಿ, ಹವಳ ಚಿಪ್ಪುಗಳನ್ನು  ಚಿನ್ನದೊಂದಿಗೆ ಅಳವಡಿಸಿ ಆಭರಣಗಳನ್ನು  ಮಾಡುವ  ರೀತಿಗಳನ್ನು ಹೇಳಲಾಗಿದೆ. 

ಇಂದು ನಾವು ಧರಿಸುವ ವಿವಿಧ ನಮೂನೆಯ ಆಭರಣಗಳಿಗೂ, ಅಜಂತ-ಎಲ್ಲೋರಾಗಳ ಚಿತ್ರಕಲೆಗಳಲ್ಲಿ ತೋರುವ ಆಭರಣಗಳಿಗೂ ಹಾಗೂ ಬರಹೂತ್, ಅಮರಾವತಿ, ಒರಿಸ್ಸಾ, ಹಳೇಬೀಡು, ಬೇಲೂರು ಮುಂತಾದಲ್ಲಿನ ಶಿಲ್ಪಗಳಲ್ಲಿ ತೋರುವ ಆಭರಣಗಳಿಗೂ ಹೊಂದಾಣಿಕೆ ಕಂಡುಬರುತ್ತದೆ. ಪ್ರಾಚೀನ ದೇವಾಲಯಗಳ ಶಿಲಾಮೂರ್ತಿಗಳು ಒಡವೆಗಳ ಪ್ರಾಮುಖ್ಯತೆಯನ್ನು ಸ್ಪಷ್ಟಪಡಿಸುತ್ತವೆ. 

ಧರ್ಮ, ನಡೆ, ನುಡಿ, ರಾಜಕೀಯ ಹೀಗೆ ಅನೇಕ ಕಾರಣಗಳಿಗಾಗಿ ಭಾರತದಲ್ಲಿ ಭಿನ್ನ ಭಿನ್ನ ರಾಜ್ಯಗಳಿದ್ದರೂ ಭಾರತದ ಮಹಿಳೆಯರು ಮಾತ್ರ ಒಡವೆಗಳ ಬಗ್ಗೆ ಭಾವೈಕ್ಯತೆಯ ಸಂಕೇತವಾಗಿದ್ದಾರೆ. ಭಾರತೀಯರು ನಾವು ಎಂದೆಂದೂ ಒಂದೇ ಎಂದು ಒಡವೆಗಳ ಮೂಲಕ ವ್ಯಕ್ತಗೊಳ್ಳುತ್ತಾರೆ. 

ಅತ್ಯಂತ ಹಳೆಯ ಒಡವೆಗಳ  ಕೈಗಾರಿಕೆಯ ಸ್ಥಳವನ್ನು  ಕಾಬೂಲ್ ಕಣಿವೆಯ ಜಲಾಲಬಾದ್ ನಲ್ಲಿರುವ ಬುದ್ಧ ದೇವಾಲಯದಲ್ಲಿ ಕಾಣಬಹುದು. 

ಈಜಿಪ್ಟ್ ಜನರಲ್ಲಿ ಸಮಾಧಿ ಒಳಗೆ ಬೆಲೆ ಬಾಳುವ ಒಡವೆಗಳನ್ನು ಇಡುವ ವಾಡಿಕೆಯಿತ್ತು. ಯುರೋಪಿನಲ್ಲೂ ಸಹ ಸತ್ತವರ ಜೊತೆಗೆ ಅವರ ಅಮೂಲ್ಯವಾದ ವಸ್ತುಗಳನ್ನು ಹೂತಿಡುವ ಪದ್ದತಿಯಿತ್ತು. 

ಸೌಂದರ್ಯ ಪ್ರಿಯನಾದ ಮಾನವ ಆಭರಣಗಳನ್ನು ಧರಿಸಿ ತಾನೂ ಆನಂದಿಸಿದ, ಸ್ತ್ರೀಗೂ ತೊಡಿಸಿ ಹಿಗ್ಗಿದ. 

ಕಿವಿ, ಮೂಗು, ನೆತ್ತಿ, ತುರುಬು, ಕೊರಳು ಮುಂತಾದ ಕಡೆಗೆ ಚಿನ್ನದ ಆಭರಣಗಳನ್ನೇ ಧರಿಸುತ್ತಾರೆ. ಕೈ ಕಾಲುಗಳಿಗೆ, ಸೊಂಟಕ್ಕೆ ಬೆಳ್ಳಿಯ ಆಭರಣಗಳನ್ನು ಧರಿಸುವುದು ವಾಡಿಕೆ. ಹಿಂದಿನ ಕಾಲದಲ್ಲಿ ಹಳ್ಳಿಯ ಬದುಕಿನ ಮನೆಯಲ್ಲಿ ಒಂದೊಂದು ಕುಕ್ಕೆಯಷ್ಟು ಆಭರಣಗಳು ಇರುತ್ತಿದ್ದವು. ಶಿರ, ಕರ್ಣ, ನಾಸಿಕ, ಕಂಠ, ಕರ , ಕಟಿ,  ಪಾದ ಭೂಷಣಗಳು ಇತ್ಯಾದಿ ನಮೂನೆಗಳು. ಈ ಆಭರಣಗಳಲ್ಲಿ ಪ್ರದರ್ಶಿತವಾಗುವ ಸೂಕ್ಷ್ಮ  ಕುಸುರಿ ಕೆಲಸ, ಕಲಾಪ್ರಿಯತೆ, ವರ್ಣ ಜೋಡಣೆ ಮೆರಗು ಬೆರಗು ಹುಟ್ಟಿಸುತ್ತವೆ.  ಒಂದೊಂದು ಅಂಗಾಂಗಕ್ಕೂ ವಿವಿಧ ನಮೂನೆಯ ಆಭರಣಗಳಿವೆ. 

ತಲೆಗೆ : ಬೈತಲೆ ಸರ, ಬಾಸಿಂಗ, ನಾಗರ ರಾಗಟೆ, ಕೇದಿಗೆ, ಸಂಪಿಗೆ, ಸೇವಂತಿಗೆ, ರೋಜಾ ಹೂ, ಚೌರಿ,  ಮೊಗ್ಗಿನ ಮಾಲೆ, ಗಿಳಿ ಹೆರಳು, ಬಂಗಾರ ಹೆರಳಲಂಕಾರ,  ಗೊಂಡೆ ಹೂ , ಜಡೆ ಬಿಲ್ಲೆ, ಚವಲಿತುಂಬು 

ಕಿವಿಗೆ :  ಓಲೆ, ಕಮಲ ಪುಷ್ಪ, ಬುಗುಡಿ, ಗುಬ್ಬಿ,  ಕೊಪ್ಪು, ಕೆನ್ನೆ ಸರಪಳಿ, ಬಾಬುಲ ಮೇಟಿ 

ಮೂಗಿಗೆ :  ಮೂಗುಬಟ್ಟು, ಮುಖುರ, ಬುಲಾಕು, ಚಂದ್ರ, ಅಕ್ಕಿಮುರು  ಬಟ್ಟು. 

ಕೊರಳಿಗೆ : ತಾಳಿ, ಚಂದ್ರಹಾರ, ಮೋಹನ ಮಾಲೆ, ಕಂಠೀ ಸರ, ಗುಂಡಿನ ಸರ , ಕಾಸಿನ ಸರ, ಬ್ರಹ್ಮ ಮುಡಿ ಸರ , ಮಾವಿನಕಾಯಿ ಸರ , ಜೋಮಾಲೆ ಸರ ಕೋಪ ಚೈನು , ಚಿಂತಾಕು, ಅಡ್ಡಿಕೆ, ಮೊಗ್ಗಿನ ಮಾಲೆ ಪದಕ, ಬೋರ ಮಾಳು  

ಕೈಗೆ : ಕಡಗ, ಪಾವಲಿ , ತೋಡೆ ,  ಬಳೆ , ತೋಳು ಬಂದಿ , ವಂಕಿ , ಸರಪಳಿ, ಸರಿಗೆ ,  ಅಸಲಿ ,  ಗಂಡು ಮುರಿ , ಕೊಂಡಿ ಕಪ್ಪ.

ಕೈ ಬೆರಳಿಗೆ: ಬೆರಳುಂಗುರ, ತಟ್ಟುಂಗುರ, ಗೋಲುಂಗುರ, ಬೇಲುಂಗುರ, ಮುದ್ರೆಉಂಗುರ, ಮುಡಿ ಉಂಗುರ, ಲಿಕ್ಕಿ ಉಂಗುರ. 

ತೋಳಿಗೆ : ಎಡಗೈ ಮುರಿ, ನಾಗಮುರಿ,   ಬಂದಿ ಮೇಗಣ  ಸನಿಕೆ,  ಬೇವಿನ ಕಾಯಿತಾತಿ. 

ಸೊಂಟಕ್ಕೆ :  ವಡ್ಯಾಣ ,  ಮೇಖಲೆ 

ಕಾಲಿಗೆ : ಕಾಲಂದುಗೆ, ತೋಡ , ತಾಡಗ, ರುಳೆ, ಗೆಜ್ಜೆ, ಕಡಗ, ಸರಪಳಿ 

ಕಾಲು ಬೆರಳಿಗೆ : ಕಿರುಪಿಲ್ಲೆ, ಗೆಜ್ಜೆ ಪಿಲ್ಲಿ,  ಮಿಂಚು, ಕಾಲುಂಗುರ, ಕಳಸಪಿಲ್ಲಿ , ಎಲೆ  ಪಿಲ್ಲೆ , ನಿಂಬೆ ಹೂವಿನ ಪಿಲ್ಲಿ ,  ಕಾಲು ಚೈನು. 

ಇನ್ನು ಮಣಿ ಸರಗಳು, ಹವಳದ ಸರಗಳು, ಹಿತ್ತಾಳೆ ಕೈಬಂದಿಗಳು, ದಂತದ ಒಡವೆಗಳನ್ನು ಹಲವು ಪಂಗಡದ ಜನಗಳಲ್ಲಿ ಕಾಣಬಹುದು. 

ವಜ್ರ: ವಜ್ರವನ್ನು ರತ್ನಗಳ ರಾಣಿ ಎನ್ನುವುದು ವಾಡಿಕೆ. ಕೊಹಿನೂರು ವಜ್ರ ಜಗತ್ ಪ್ರಸಿದ್ದ. 

ನಮ್ಮ ದೇಶದಲ್ಲಿ ಆರ್ಯರ ಕಾಲದಿಂದಲೂ ವಜ್ರಗಳ ಬಳಕೆ ಇದೆ. ‘ವಜ್ರಾದಪಿ ಕಠೋರಾಣಿ’ ಖನಿಜಗಳಲ್ಲಿ ಅತ್ಯಂತ ಗಡುಸಾದುದು ಈ ವಜ್ರ. ಬರೆಯುವ ಸೀಸ ಮತ್ತು ಇದ್ದಿಲಾಗಿ ದೊರೆಯುವ ಇಂಗಾಲದ ಇನ್ನೊಂದು  ಮುಖ ವಜ್ರ. ಮೂಲದಲ್ಲಿ ಇದು ಇಂಗಾಲದಿಂದ ಮಾಡಲ್ಪಟ್ಟು, ಪ್ರಕೃತಿ ನೀಡಿದ ಅಮೂಲ್ಯವಾದ ಪಾರದರ್ಶಕ ಹರಳಗಿದೆ. ಕೆತ್ತನೆ ಮತ್ತು ಉಜ್ಜುಗಾರಿಕೆಯಿಂದ ಹೊಳಪು ಹೊಮ್ಮುತ್ತದೆ ಹಾಗು ಬೆಳಕನ್ನು ಪ್ರತಿಬಿಂಬಿಸಿ, ಪ್ರಜ್ವಲಿಸುತ್ತದೆ.

ನಮ್ಮ ದೇಶದ ಆಂಧ್ರಪ್ರದೇಶದಲ್ಲಿರುವ ಗೋಲ್ಕೊಂಡ ಗಣಿ ವಜ್ರಕ್ಕೆ ಪ್ರಸಿದ್ದಿ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ  ಇದರ ಉಲ್ಲೇಖವಿದೆ. ವಜ್ರದ ಹರಳುಗಳಿಗೆ ಒಟ್ಟು 58 ಸಂಯುಕ್ತ ಮುಖಗಳಿರುತ್ತವೆ. ಕೆತ್ತನೆಗಾರರು  ಈ ಖನಿಜಕ್ಕೆ ಹೇಗೆ ಹೊಳಪನ್ನು ಕೊಡಬಹುದು ಎಂದು ಬಲ್ಲರು. ನಮ್ಮ ದೇಶದ 90 %  ರಷ್ಟು ವಜ್ರವನ್ನು ಹೊರ ದೇಶಗಳಿಗೆ ರವಾನಿಸಲಾಗುತ್ತದೆ. ಗುಜರಾತ್ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವಂಶ ಪಾರಂಪರ್ಯವಾಗಿ ವಜ್ರದ ಕೆಲಸ ಮಾಡುವ ಅಕ್ಕಸಾಲಿಗರಿದ್ದಾರೆ. 

ಅಮೇರಿಕನ್ ವಜ್ರ: ಈ ಹರಳು ಪ್ರಕೃತಿದತ್ತವಾದುದಲ್ಲ , ಮಾನವ ನಿರ್ಮಿತ. ಇದು ಜಿರ್ಕೋನಿಯಂ ಡಯಾಕ್ಸೈಡ್ ಎಂಬ ರಾಸಾಯನಿಕ ವಸ್ತುವಿನಿಂದ ತಯಾರಿಸಲ್ಪಡುತ್ತದೆ ಹಾಗೂ ಘನಾಕೃತಿಯುಳ್ಳದಾಗಿದೆ.  ರಷ್ಯಾ, ಸ್ವಿಜರ್ ಲ್ಯಾಂಡ್, ಅಮೇರಿಕಾ ದೇಶಗಳಲ್ಲಿ ಇವುಗಳನ್ನ ಹೇರಳವಾಗಿ ತಯಾರು ಮಾಡುತ್ತಾರೆ. ಕೃತಕ ವಜ್ರದಲ್ಲಿ ಅಮೇರಿಕ ಮಾದರಿಯೇ ಬಹು ಪ್ರಸಿದ್ದಿ. 

ಒಮ್ಮೆಗೇ ನೋಡಿದಾಗ ಕೃತಕ ಹಾಗೂ ನೈಜ ವಜ್ರ ಎರಡೂ ಒಂದೇ ತರಹ ಕಾಣಬಹುದು. ಆದರೆ  ಸೂಕ್ಷ್ಮವಾಗಿ  ಪರೀಕ್ಷಿಸಿದರೆ ವ್ಯತ್ಯಾಸಗಳನ್ನು  ಗುರುತಿಸಬಹುದು. ಒಂದು ಕ್ಯಾರೆಟ್ ಅಮೇರಿಕನ್ ವಜ್ರದ ಬೆಲೆ ರೂ 20 – 25   ಇದರಲ್ಲಿ ಅತ್ಯಂತ ಉತ್ತಮವಾದದ್ದು ರೂ 100 ಕ್ಕೆ ದೊರೆಯುತ್ತದೆ.  ಇದಕ್ಕೆ ವಿರುದ್ದವಾಗಿ ನೈಜ ವಜ್ರ ಒಂದು ಕ್ಯಾರೆಟ್ ಗೆ 16,000 ರೂ ಗಳಾಗುತ್ತದೆ. ಅಮೇರಿಕನ್ ವಜ್ರದ ಒಡವೆಗಳನ್ನು ಬೆಳ್ಳಿ ಅಥವಾ ಚಿನ್ನದ ನೀರು ಕುಡಿಸಿದ ಲೋಹದಲ್ಲಿ ತಯಾರಿಸಬಹುದು. ಹಾಗೂ ಈ ಒಡವೆಗಳನ್ನು ತುಂಬಾ ನಾಜೂಕಾಗಿ ಧರಿಸಿ ಕಾಪಾಡಿಕೊಳ್ಳಬೇಕು. ನೀರಿನ ಸಂಪರ್ಕದೊಂದಿಗೆ ಇವು ತಮ್ಮ ಹೊಳಪನ್ನು ಕಳೆದುಕೊಳ್ಳುತ್ತವೆ.  ಅಮೇರಿಕನ್ ವಜ್ರವನ್ನು ಕೈಯಲ್ಲಿ ಹಿಡಿದುಕೊಂಡು ಪರೀಕ್ಷಿಸಿದಾಗ ಅತ್ಯಂತ ಪಾರದರ್ಶಕತೆ ಹೊಂದಿದ ಈ ಹರಳಿನ ಮೂಲಕ ಕೈ  ರೇಖೆಗಳನ್ನು ಸಹ ಕಾಣಬಹುದು. ಆದರೆ ನಿಜವಾದ ವಜ್ರವು ಪಾರದರ್ಶಕತೆಯನ್ನು ತೋರದೇ ಸುತ್ತಲೂ ಮಿಣ ಮಿಣ ಮಿಂಚುತ್ತದೆ. 

ಆಭರಣಗಳ ಮಹತ್ವ : ಆದಿ ಕಾಲದಿಂದಲೂ ಮಾನವನಿಗೆ ಆಭರಣಗಳ ಮೂಲಕ ಅಮೂಲ್ಯ ಆಸ್ತಿಯನ್ನು ಕೂಡಿಡುವ ಹಂಬಲ.  ಸ್ತ್ರೀ ಗೆ ತನ್ನ ಪತಿಯನ್ನು ತನ್ನ ಸೌಂದರ್ಯದಿಂದ ಸಂತುಷ್ಟಿಗೊಳಿಸುವುದು ಧರ್ಮವೆಂಬ ಭಾವನೆ. ಚಿನ್ನದ ತಾಳಿ ವಧು-ವರರ ಜೀವನ ಬಂಧನದ  ಪವಿತ್ರ ಸಂಕೇತ. ವಧುವಿಗೆ ತಂದೆಯಿಂದ ಬಳುವಳಿಯಾಗಿ ದೊರೆತ ಚಿನ್ನ ಸ್ತ್ರೀ ಧನ. ಆಕೆ ಅವಕ್ಕೆ ಒಡತಿ. 

ಕ್ಷಾಮ ಪರಿಹಾರ. ಕೂಲಿ ಪರಿಹಾರ, ಜಮೀನು ಕೊಳ್ಳುವುದು, ಎತ್ತು ಕೊಳ್ಳುವುದು, ವಿದ್ಯಾಬ್ಯಾಸ, ಮದುವೆ, ಕರ್ಮಾಂತರಗಳಿಗೆ  ಹಣ ಬೇಕಾದಾಗ ಇವು ಉಪಯೋಗ. ಹೀಗೆ ಒಡವೆಗಳು ಜೀವನದ ಒಂದು ಭಾಗವೇ ಆಗಿವೆ. ಇವು ಕಾಲಕ್ಕನುಸಾರವಾಗಿ ಅವಶ್ಯಕತೆಗಳನ್ನು ಪೂರೈಸುವ ಕಲೆ, ಪರಂಪರೆಗಳನ್ನು ಉಳಿಸಿಕೊಂಡು ಅಭಿವೃದ್ಧಿ ಮಾರ್ಗದಲ್ಲಿ ನಡೆದಿವೆ. 

ಜನಪದ ಸಾಹಿತ್ಯದಲ್ಲಿ ಆಭರಣಗಳು  ಜನತೆಯ ಸಂಸ್ಕೃತಿಯೊಡನೆ ಅವಿಚ್ಚಿನ್ನವಾಗಿ  ಉಳಿದು ಬಂದಿವೆ. 

`ಪಿಲ್ಲಿಯ ಕಾಲಿನೋಳೆ ಚೆಲ್ಲಿನ ನೆರಿಯೋಳೆ
ಕಲ್ಲುಮೇಲೆ  ಕಾಲು ತೊಳೆಯೋಳೆ –  ಮಾಳವ್ವ
ನಿನ್ನ ಪಿಲ್ಲಿ ಸಾವಿರಕೆ ಬೆಲೆಯಾದೊ’
 
ಬದುಕಿಗೂ  ಆಭರಣಗಳಿಗೂ ನಿಕಟವಾದ  ಸಂಬಂಧವಿರುದನ್ನು ಕಾಣುತ್ತೇವೆ. ಇವು ಜೀವನ  ಮೌಲ್ಯಗಳಿಗೆ ಸಂಕೇತವಾಗಿ ನಿಲ್ಲುವ ಪವಿತ್ರ ವಸ್ತುಗಳೂ ಆಗಿವೆ.  

ಶ್ರೀರಾಮನ ವಿನಃ ಬೇರೆ ಯಾವುದನ್ನೂ ಬಯಸದ ಸೀತಾ ದೇವಿಯ ಮನಸ್ಸು  ಮಾರೀಚನೆಂಬ ರಾಕ್ಷಸನು ಚಿನ್ನದ ಜಿಂಕೆಯ ವೇಷದಲ್ಲಿ ಬಂದು ಸುಳಿದಾಡಿದಾಗ , ಸೀತೆ ಅದರ  ಚೆಲುವಿಗೆ ಸೋತು ಸ್ವಯಂ ಶ್ರೀರಾಮನನ್ನೇ ಅದರ ಹಿಂದೆ ಅಟ್ಟಿ, ಮುಂದೆ ರಾಮ-ರಾವಣರ ಯುದ್ದಕ್ಕೆ ಕಾರಣವಾಗಲಿಲ್ಲವೇ? ಹೀಗೆ ಯಾವುದೇ ಪರಿಸ್ಥಿತಿ ಆಭರಣಗಳ ಪ್ರಭಾವವನ್ನು ಕಡಿಮೆ ಮಾಡಲು ಸಮರ್ಥವಾಗಿಲ್ಲ .


ಪ್ರೊ. ಶಕುಂತಲಾ ಗುರುಸಿದ್ಧಯ್ಯ 
ನಿವೃತ್ತ ಪ್ರಾಚಾರ್ಯರು
ಧ. ರಾ. ಮ. ವಿ. ಕಾಲೇಜು, ದಾವಣಗೆರೆ.
[email protected]

error: Content is protected !!