ಗಣೇಶನ ಮೂರ್ತಿ ತಯಾರಿಕೆಗೆ ವಿಘ್ನ

ದೊಡ್ಡ ಮೂರ್ತಿಗಳನ್ನು ರೂಪಿಸುತ್ತಿಲ್ಲ ಚಿಕ್ಕದಕ್ಕೂ ಬೇಡಿಕೆ ಆರಂಭವಾಗಿಲ್ಲ

ದಾವಣಗೆರೆ, ಜು. 8 – ವಿಘ್ನ ನಿವಾರಕ ವಿನಾಯಕನ ಚತುರ್ಥಿಗೆ ಕೊರೊನಾ ವಿಘ್ನ ಎದುರಾಗಿದೆ. ಈ ಬಾರಿ ಗಣೇಶನ ಮೂರ್ತಿಗೆ ಮಣ್ಣು ತರುವುದರಿಂದಲೇ ವಿಘ್ನಗಳು ಆರಂಭವಾಗಿವೆ.

ಸಾಮಾನ್ಯವಾಗಿ ಮಾರ್ಚ್ – ಏಪ್ರಿಲ್ ತಿಂಗಳ ವೇಳೆಗೆ ನದಿಗಳ ದಂಡೆಯಿಂದ ಮಣ್ಣು ತಂದು ಗಣಪತಿ ಮೂರ್ತಿಗಳ ತಯಾರಿಕೆಗೆ ಸಿದ್ಧವಾಗಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ, ಈ ಬಾರಿ ಕೊರೊನಾ ಕಾರಣದಿಂದಾಗಿ ಲಾಕ್‌ಡೌನ್ ಹೇರಿಕೆಯಾಗಿ ಮೂರ್ತಿಗಳನ್ನು ರೂಪಿಸುವ ಕಲಾವಿದರು ಮಣ್ಣು ತರುವುದೇ ಕಷ್ಟವಾಯಿತು.

ಅಲ್ಲಿಂದ ಆರಂಭವಾದ ವಿಘ್ನಗಳು, ಮೂರ್ತಿಗಳ ಮಾರಾಟದವರೆಗೂ ಮುಂದುವರೆಯಲಿವೆಯೇ? ಎಂಬ ಕಳವಳ ಕಾಡುತ್ತಿದೆ. ಸಾರ್ವಜನಿಕ ಗಣೇಶೋತ್ಸವ ನಡೆಯುವುದು ಅನುಮಾನವಾಗಿರುವುದರಿಂದ ದೊಡ್ಡ ಮೂರ್ತಿಗಳಿಗೆ ಬೇಡಿಕೆಯೇ ಇಲ್ಲ. ಕಲಾವಿದರೂ ಆ ಕುರಿತ ಗೊಡವೆಗೂ ಹೋಗಿಲ್ಲ.

ಮನೆಯಲ್ಲಿ ಆರಾಧಿಸುವ ಸಣ್ಣ ಮಣ್ಣಿನ ಮೂರ್ತಿಗಳಷ್ಟೇ ಈಗ ಕುಶಲ ಕರ್ಮಿಗಳ ಕೈ ಚಳಕದಿಂದ ರೂಪುಗೊಳ್ಳುತ್ತಿವೆ. ಅದೂ ಸಹ ಸಾಕಷ್ಟು ಕಡಿಮೆ ಸಂಖ್ಯೆಯಲ್ಲಿ. 

ಈ ಬಗ್ಗೆ ಹೊಂಡದ ರಸ್ತೆಯಲ್ಲಿರುವ ಮನೆಯಲ್ಲಿ ಮಣ್ಣಿನ ಮೂರ್ತಿಗಳನ್ನು ರೂಪಿಸುವ ವಿಠ್ಠಲ್ ರಾವ್ ಮಾತನಾಡಿದ್ದು, ಈ ವರ್ಷ ಶೇ.50ರಷ್ಟು ನಷ್ಟವಾಗುತ್ತಿದೆ. ಮುಂಚೆ 250ರಿಂದ 300 ಮೂರ್ತಿಗಳನ್ನು ರೂಪಿಸುತ್ತಿದ್ದೆವು. ಈಗ 100ರಿಂದ 150 ಮೂರ್ತಿಗಳು ಮಾತ್ರ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ವೇಳೆಗಾಗಲೇ ಮೂರ್ತಿಗಳು ರೂಪುಗೊಂಡು ಬಣ್ಣ ಹಚ್ಚುವ ಕೆಲಸದತ್ತ ಸಾಗಬೇಕಿತ್ತು. ಆದರೆ, ಈ ಬಾರಿ ಮಣ್ಣು ತಂದಿದ್ದೇ ತಡವಾಯಿತು. ಮೂರ್ತಿಗಳನ್ನು ರೂಪಿಸುವುದೂ ತಡವಾಗಿದೆ. ಕಡಿಮೆ ಸಮಯದಲ್ಲೇ ಕಡಿಮೆ ಮೂರ್ತಿಗಳನ್ನು ಮಾಡುತ್ತಿದ್ದೇವೆ ಎಂದವರು ಹೇಳಿದ್ದಾರೆ.

ಸಾಮಾನ್ಯ ಪರಿಸ್ಥಿತಿಯಲ್ಲಿ ಈಗಾಗಲೇ ಮೂರ್ತಿಗಳ ಬುಕಿಂಗ್ ಆರಂಭವಾಗಿರುತ್ತಿತ್ತು. ವಿಶೇಷವಾಗಿ ದೊಡ್ಡ ಮೂರ್ತಿಗಳು ಬೇಕಾದವರು ಹೇಳಿರುತ್ತಿದ್ದರು. ಆದರೆ, ಈ ಬಾರಿ ಸಣ್ಣ ಮೂರ್ತಿಗಳನ್ನೂ ಸಹ ಯಾರೂ ಬುಕ್ಕಿಂಗ್ ಮಾಡಿಲ್ಲ ಎಂದವರು ಪರಿಸ್ಥಿತಿಯ ಬಗ್ಗೆ ತಿಳಿಸಿದ್ದಾರೆ.

ಮೂರ್ತಿಗಳನ್ನು ರೂಪಿಸುವ ಕೆಲಸ ವರ್ಷದಲ್ಲಿ ಆರು ತಿಂಗಳವರೆಗೆ ನಡೆಯುತ್ತದೆ. ಹೀಗಾಗಿ ಅರ್ಧ ಜೀವನ ಇದರಲ್ಲೇ ಹೋಗುತ್ತದೆ. ಉಳಿದ ಸಮಯದಲ್ಲಿ ಕೂಲಿ ಕೆಲಸವಷ್ಟೇ ಮಾಡಲು ಸಾಧ್ಯ. ಹೀಗಾಗಿ ಮೂರ್ತಿ ಕಲಾವಿದರಿಗೆ ಈ ವರ್ಷ ಸಂಕಷ್ಟ ಬಂದಿದೆ ಎಂದು ಇನ್ನೋರ್ವ ಕಲಾವಿದ ಸಾಗರ್ ತಿಳಿಸಿದ್ದಾರೆ.

ಮದುವೆಯಾಗಿ ಅತ್ತೆ ಮನೆಗೆ ಬಂದ ಮೇಲೆ ಮೂರ್ತಿಗಳನ್ನು ರೂಪಿಸುವ ಕೆಲಸ ಕಲಿತಿರುವುದಾಗಿ ಹೇಳಿರುವ ಭಾರತಿ, ಇಪ್ಪತ್ತು ವರ್ಷಗಳಿಂದ ಈ ಕೆಲಸ ಮಾಡುತ್ತಾ ಬಂದಿದ್ದೇನೆ. ಇಷ್ಟು ಕಡಿಮೆ ಮೂರ್ತಿಗಳ ಬೇಡಿಕೆ ಎಂದೂ ಕಂಡಿರಲಿಲ್ಲ ಎಂದಿದ್ದಾರೆ.

ಅರುಣ ಟಾಕೀಸ್ ಎದುರಿನ ಮೈದಾನ ಸೇರಿದಂತೆ ಹಲವು ಕಡೆಗಳಲ್ಲಿ ಬೃಹತ್ ಮೂರ್ತಿಗಳ ನಿರ್ಮಾಣ ಪ್ರತಿ ವರ್ಷ ನಡೆಯುತ್ತಿತ್ತು. ಆದರೆ, ಈ ವರ್ಷ ಎಲ್ಲೂ ಸಹ ಅಂತಹ ಮೂರ್ತಿಗಳ ನಿರ್ಮಾಣ ಕಂಡು ಬರುತ್ತಿಲ್ಲ.

ಈ ವೇಳೆಗಾಗಲೇ ಬೃಹತ್ ಮೂರ್ತಿಗಳ ನಿರ್ಮಾಣ ಅರ್ಧದಷ್ಟು ಆಗಿರಬೇಕಿತ್ತು. ಆದರೆ, ಯಾವ ಕಲಾವಿದರೂ ಇಲ್ಲಿಗೆ ಬಂದಿಲ್ಲ ಎಂದು ಶ್ರೀ ಉಮಾ ಮಹೇಶ್ವರಿ ದೇವಸ್ಥಾನದ ಅರ್ಚಕರಾದ ಉದಯ ಶಂಕರ್‌ ಶಾಸ್ತ್ರಿ ಹೇಳಿದ್ದಾರೆ.

ಗುಜರಾತ್, ರಾಜಸ್ಥಾನ ಹಾಗೂ ಪಶ್ಚಿಮ ಬಂಗಾಳಗಳಂತಹ ರಾಜ್ಯಗಳಿಂದ ಕಲಾವಿದರು ಇಲ್ಲಿಗೆ ಬಂದು ಬೃಹತ್ ಮೂರ್ತಿಗಳನ್ನು ನಿರ್ಮಿಸುತ್ತಿದ್ದರು. ಈ ಬಾರಿ ಒಬ್ಬರೂ ಬಂದಿಲ್ಲ ಎಂದವರು ತಿಳಿಸಿದ್ದಾರೆ.

2020 ಈಗಾಗಲೇ ವಿಘ್ನಗಳ ಸರಮಾಲೆಯನ್ನೇ ತಂದಿದೆ. ಅರ್ಧ ವರ್ಷ ವಿಘ್ನಗಳಲ್ಲೇ ಕಳೆದಿದೆ. ವಿಘ್ನ ವಿನಾಶಕ ವಿನಾಯಕ ಈ ಕೊರೊನಾ ವಿಘ್ನವನ್ನು ನಿವಾರಿಸಲಿ ಎಂಬುದಷ್ಟೇ ಈಗ ಮೂರ್ತಿ ತಯಾರಕರ ಪ್ರಾರ್ಥನೆಯಾಗಿದೆ.

error: Content is protected !!