ಹರಪನಹಳ್ಳಿ, ಮಾ.22- ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಎಲ್ಲಾ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ ತಿಳಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ತಾಲ್ಲೂಕಿನಲ್ಲಿ ಒಟ್ಟು 4346 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 2068 ಬಾಲಕರು ಮತ್ತು 2278 ಬಾಲಕಿಯರು, 49 ಖಾಸಗಿ ವಿದ್ಯಾರ್ಥಿಗಳು ಹಾಗೂ 20 ಪುನರಾವರ್ತಿತ ಅಭ್ಯರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದ್ದಾರೆ.
13 ಪರೀಕ್ಷಾ ಕೇಂದ್ರಗಳು : ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 13 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಕೆಸಿಎ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆ ಗೋವೇರಹಳ್ಳಿ, ಶ್ರೀ ಗುರುದೇವ ಪ್ರೌಢಶಾಲೆ ಕಮ್ಮನಹಳ್ಳಿ, ಶ್ರೀ ಉತ್ಸವಾಂಬಾ ಪ್ರೌಢಶಾಲೆ ಉಚ್ಚಂಗಿದುರ್ಗ, ಸರ್ಕಾರಿ ಪ್ರೌಢಶಾಲೆ ತೆಲಗಿ, ಕೆಪಿಎಸ್ ಹಲುವಾಗಲು, ಜಿವಿಡಿಎಸ್ ಪ್ರೌಢಶಾಲೆ ಅರಸೀಕೆರೆ, ಸರ್ಕಾರಿ ಪ್ರೌಢಶಾಲೆ ಮೈದೂರು, ಶಾಂತಿನಿಕೇತನ ಪ್ರೌಢಶಾಲೆ ನಜೀರ್ ನಗರ, ಹನುಮಾನ್ ಪ್ರೌಢಶಾಲೆ ಸಾಸ್ವಿಹಳ್ಳಿ ಸೇರಿ ಒಟ್ಟು 13 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಈಗಾಗಲೇ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ಉಪಮುಖ್ಯ ಅಧೀಕ್ಷಕರು, ಪ್ರಶ್ನೆ ಪತ್ರಿಕೆ ಅಭಿರಕ್ಷಕರು ಹಾಗೂ ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ, ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳಿಗೆ ಬರಲು ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆಯವರಿಗೆ ಮನವಿ ಮಾಡಲಾಗಿದೆ. ಈ ಬಾರಿ ಪರೀಕ್ಷಾ ವೇಳೆಯಲ್ಲಿ ಪರೀಕ್ಷೆಯ ವೆಬ್ ಕಾಸ್ಟಿಂಗ್ ನಡೆಯುವುದರಿಂದ ವಿದ್ಯುತ್ ಕಡಿತ ಮಾಡದಂತೆ ಬೆಸ್ಕಾಂ ಅಧಿಕಾರಿಗಳಿಗೂ ಸಹ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.