ಪತ್ತೆಯಾಗದ ಬಾಲಕನ ಶವ

ದಾವಣಗೆರೆ, ಫೆ.3- ತಾಲೂಕಿನ ಕುರ್ಕಿ ಬಳಿ ಭದ್ರಾ ನಾಲೆಯಲ್ಲಿ ಭಾನುವಾರ ಕೊಚ್ಚಿ ಹೋಗಿರುವ ಗಣೇಶ್ ಶವ ಸೋಮವಾರವೂ ಪತ್ತೆಯಾಗಲಿಲ್ಲ.

ತುರ್ಚಘಟ್ಟ ಗ್ರಾಮದ ಗುರುಕುಲ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಅಭ್ಯಾಸ ಮಾಡುತ್ತಿದ್ದ ಗಣೇಶ್ ತನ್ನ ಗೆಳೆಯ ಪಾಂಡು ರಂಗನೊಂದಿಗೆ ಭದ್ರಾ ನಾಲೆಯಲ್ಲಿ ಈಜಲು ತೆರಳಿದ್ದ ಸಂದರ್ಭದಲ್ಲಿ ಕೊಚ್ಚಿ ಹೋಗಿದ್ದ. ಪಾಂಡುರಂಗನ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ನಂತರ ಪೋಷಕರಿಗೆ ಪಾರ್ಥಿವ ಶರೀರ ಹಸ್ತಾಂತರಿಸಲಾಗಿತ್ತು.

ಭದ್ರಾ ನಾಲೆಯಲ್ಲಿ ಕೊಚ್ಚಿ ಹೋಗಿರುವ ಗಣೇಶ್‌ನ ಶವಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು, ನುರಿತ ಮೀನುಗಾರರು ಎಲ್ಲೆಡೆ ಹುಡುಕಾಟ ನಡೆಸಿದ್ದರು. 

ಶವ ಪತ್ತೆಯಾಗಿರಲಿಲ್ಲ. ಸಂಜೆಯಾಗಿದ್ದರಿಂದ ಕಾರ್ಯಾ ಚರಣೆ ಸ್ಥಗಿತಗೊಳಿಸಲಾಗಿತ್ತು.

ಸೋಮವಾರ ಬೆಳಗ್ಗೆಯಿಂದಲೇ ಗಣೇಶ್‌ನ ಪಾರ್ಥಿವ ಶರೀರಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು, ನುರಿತ ಮೀನುಗಾರರು ಹುಡುಕಾಟ ನಡೆಸಿದರು. ಚಟ್ಟೋಬನಹಳ್ಳಿ, ಲೋಕಿಕೆರೆವರೆಗೆ ಸರಿ ಸುಮಾರು 10 ಕಿಲೋ ಮೀಟರ್ ದೂರದವರೆಗೂ ತಲಾಶ್ ನಡೆಸಿದರೂ ಶವ ಪತ್ತೆಯಾಗಲಿಲ್ಲ. ಹಾಗಾಗಿ ಮಂಗಳವಾರಕ್ಕೆ ಕಾರ್ಯಾಚರಣೆ ಮುಂದುವರಿಸಲಾಗುವುದು. ನಾಲೆಯಲ್ಲಿ ಮಗ ಕೊಚ್ಚಿ ಹೋಗಿ ಎರಡು ದಿನ ಕಳೆದರೂ ಶವ ಪತ್ತೆಯಾಗದಿರುವುದರಿಂದ ಪೋಷಕರ ರೋಧನ ಮುಗಿಲು ಮುಟ್ಟಿದೆ.

error: Content is protected !!