ಅಂತರ್ಜಲ ಮಟ್ಟ ಹೆಚ್ಚಿಸಲು ಕಾಳಜಿ ವಹಿಸಬೇಕು ; ನ್ಯಾ.ರಾಜೇಶ್ವರಿ

ಅಂತರ್ಜಲ ಮಟ್ಟ ಹೆಚ್ಚಿಸಲು ಕಾಳಜಿ ವಹಿಸಬೇಕು ; ನ್ಯಾ.ರಾಜೇಶ್ವರಿ

ಇಂಗುಗುಂಡಿ  ಸ್ಥಾಪಿಸಿ ಅಂತರ್ಜಲದ ಮಟ್ಟ ಹೆಚ್ಚಿಸುವ ಜತೆಗೆ ಕೆರೆಗಳ ಹೂಳು ತೆಗೆದು ನೀರು ಸಂಗ್ರಹಿಸಬೇಕು ಮತ್ತು ಅಗತ್ಯಕ್ಕೆ ತಕ್ಕಂತೆ ನೀರು ಬಳಸಬೇಕು

– ಮಹಾವೀರ ಮ. ಕರೆಣ್ಣನವರ್‌, ಹಿರಿಯ ಸಿವಿಲ್ ನ್ಯಾಯಾಧೀಶರು

ದಾವಣಗೆರೆ, ಮಾ.22- ಪ್ರಸಕ್ತ ದಿನಗಳಲ್ಲಿ  ದಿನೇದಿನೇ  ಅಂತರ್ಜಲ ಮಟ್ಟ ಕುಸಿಯುತ್ತಿದೆ. ಆದ್ದರಿಂದ ಜವಾಬ್ದಾರಿಯುತವಾಗಿ ಜಲ ಸಂರಕ್ಷಣೆ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ   ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ  ಇವರ ಸಹಯೋಗದಲ್ಲಿ ಶುಕ್ರವಾರ ನಡೆದ ಅಂತರಾಷ್ಟ್ರೀಯ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೀರನ್ನು ವ್ಯರ್ಥ ಮಾಡದೇ ಅವಶ್ಯಕತೆಗೆ ತಕ್ಕಂತೆ ಬಳಕೆ ಮಾಡುವುದರಿಂದ ಜಲ ಸಂರಕ್ಷಣೆ ಮಾಡಬಹುದು ಎಂದು ಸಲಹೆ ನೀಡಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಎಚ್. ಲಕ್ಷ್ಮೀಕಾಂತ್ ಮಾತನಾಡಿ, ಮಣ್ಣು ಮತ್ತು ನೀರನ್ನು ಉಳಿಸಿಕೊಂಡಾಗ ಮಾತ್ರ ಮನುಷ್ಯ ಬದುಕಲು ಸಾಧ್ಯ. ಆದ್ದರಿಂದ ನೀರನ್ನು ಹಾಳು ಮಾಡದಂತೆ ತಿಳುವಳಿಕೆ ಹೇಳಿದರು.

ಬೋರ್‌ವೆಲ್‌ಗಳಿಂದ ಭೂಮಿಯ ಮೇಲಿನ ತೇವಾಂಶ ನಶಿಸುತ್ತಿದೆ. ಆದ್ದರಿಂದ ಕೆರೆಕಟ್ಟೆ ಉಳಿಸುವ ಕಾರ್ಯ ಮುಖ್ಯವಾಗಿ ಆಗಬೇಕು ಎಂದರು.

1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ವಿ. ವಿಜಯಾನಂದ ಮಾತನಾಡಿ, ಮದುವೆ ಮನೆ ಮತ್ತು ಶುದ್ಧ  ಕುಡಿಯುವ ನೀರಿನ ಘಟಕಗಳಲ್ಲಿ ನೀರು ವ್ಯರ್ಥವಾಗದಂತೆ ಅಭಿಯಾನ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು. ಹೆಚ್ಚಾಗಿ ಮರ-ಗಿಡ ನೆಡುವ ಮೂಲಕ ಮಳೆಗೆ ಆಮಂತ್ರಣ ನೀಡಬೇಕು ಮತ್ತು ನೀರು ಸಂರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಎಚ್. ಅರುಣ್ ಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ  ಜನರು ನೀರಿಗಾಗಿ ಪರದಾಡುತ್ತಿದ್ದು, ಆದಾಗ್ಯೂ ನೀರು ಸಂರಕ್ಷಣೆ ಮಾಡದಿದ್ದರೆ ನೀರಿಗಾಗಿ ಹೊಡೆದಾಡುವ ಕಾಲ ಬರಲಿದೆ ಎಂದರು.

ಇದೇ ವೇಳೆ ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಅನಿಲ್ ಬಿಹಾರಿ ಮತ್ತು ಮಾಲಿನ್ಯ ನಿಯಂತ್ರಣಾಧಿಕಾರಿ  ಎಚ್. ಲಕ್ಷ್ಮೀಕಾಂತ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್. ಶ್ರೀಪಾದ, ಕೌಟುಂಬಿಕ ಜಿಲ್ಲಾ ನ್ಯಾಯಾಧೀಶರಾದ ದಶರಥ, 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್‌. ಎನ್‌. ಪ್ರವೀಣ್ ಕುಮಾರ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಿವಪ್ಪ ಗಂಗಪ್ಪ ಸಲಗೆರೆ ಮತ್ತು ಇತರರು ಇದ್ದರು.

error: Content is protected !!