ಆಧುನಿಕತೆಯ ಅಬ್ಬರದಲ್ಲಿ ಕೊಚ್ಚಿ ಹೋದ ಶಾಂತಿ, ನೆಮ್ಮದಿ

ಆಧುನಿಕತೆಯ ಅಬ್ಬರದಲ್ಲಿ ಕೊಚ್ಚಿ ಹೋದ ಶಾಂತಿ, ನೆಮ್ಮದಿ

ಹರಪನಹಳ್ಳಿ : ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಲಿಂಗನಾಯಕನಹಳ್ಳಿಯ ಶ್ರೀ ಚನ್ನವೀರ ಮಹಾ ಶಿವಯೋಗಿಗಳ ವ್ಯಾಕುಲತೆ

ಹರಪನಹಳ್ಳಿ, ಜ.13- ಮನುಷ್ಯನ ಮನಸ್ಸು ಹಾಗೂ ದೇಹಕ್ಕೂ ಮುದ ನೀಡುವ ಮೂಲಕ ಆರೋಗ್ಯಯುತ ಬದುಕಿಗೆ ಆಸರೆಯಾಗಿದ್ದ ಶಾಂತಿ ಹಾಗೂ ನೆಮ್ಮದಿ ಆಧುನಿಕತೆಯ ಅಬ್ಬರದಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ, ಮನುಷ್ಯನ ಮನಸ್ಸು ವಿಕಸನಗೊಳ್ಳುವ ಬದಲು ವಿಕಾರಗೊಳ್ಳುತ್ತಿದೆ. ಜನಸಾಮಾನ್ಯರನ್ನು ಅಧ್ಯಾತ್ಮದತ್ತ ಕರೆದುಕೊಳ್ಳಲು, ನೈತಿಕ ಮೌಲ್ಯಗಳನ್ನು ಹೆಚ್ಚಿಸಲು, ಅನುಭಾವದ ಚಿಂತನೆಗೆ ತೊಡಗಿಸಲು ಕಾಲಕಾಲಕ್ಕೆ ಬೇರೆ ಬೇರೆ ಧರ್ಮಗಳು ಹುಟ್ಟಿಕೊಂಡಿವೆ ಎಂದು ಶ್ರೀಕ್ಷೇತ್ರ  ಲಿಂಗನಾಯಕನಹಳ್ಳಿಯ ಶ್ರೀ ಚನ್ನವೀರ ಮಹಾ ಶಿವಯೋಗಿಗಳು ಹೇಳಿದರು.

ಪಟ್ಟಣದ  ಕಾಶಿಮಠದಲ್ಲಿ ಶರಣ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ವತಿಯಿಂದ ನೂತನ ಅಧ್ಯಕ್ಷರ ಮತ್ತು ಕಾರ್ಯಕಾರಿ ಸಮಿತಿಯ ಕಾಯಕ ದೀಕ್ಷೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬಸವಣ್ಣನವರ ಮೂಲಕ ಹುಟ್ಟಿ, ಅನುಭವ ಮಂಟಪದ ಚರ್ಚೆಯ ಮೂಲಕ ಬೆಳೆದು, ಇಂದಿಗೂ ಚರ್ಚಾಸ್ಪದವಾಗಿರುವ ಬಸವ ಧರ್ಮವು ವಿಶಿಷ್ಟ ಧರ್ಮವಾಗಿದೆ. ಧರ್ಮವೆಂಬುದು ಜನಸಮುದಾಯವನ್ನು ಕೂಡಿಸಬೇಕೇ ಹೊರತು, ಅಗಲಿಸುವುದಲ್ಲ. ಧರ್ಮದ ಹೆಸರಿನಲ್ಲಿ ಜಗಳ, ಕೋರ್ಟು-ಕಚೇರಿ ತಿರುಗುವುದೆಂದರೆ, ಧರ್ಮವನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ ವೆಂಬುದು ಸ್ಪಷ್ಟವಾಗುತ್ತದೆ.

ಸಾಮಾಜಿಕ ಸಮಾನತೆ, ಮರ್ತ್ಯ ಲೋಕದ ಹಿರಿಮೆ, ಆತ್ಮವಿಮರ್ಶೆ, ನಡೆ-ನುಡಿಯಲ್ಲಿ ಒಂದಾಗುವಿಕೆ, ಸಂಸಾರದಲ್ಲಿ ಸಹಿಷ್ಣುತೆ, ಸಾಮಾಜಿಕ ಬದ್ಧತೆ, ವೈಚಾರಿಕತೆ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದನ್ನು ಶರಣ ಸಂಸ್ಕೃತಿ ಪ್ರತಿಪಾದಿಸುತ್ತದೆ. ಮೌಢ್ಯ, ಶ್ರೇಣೀಕೃತ ಸಮಾಜ, ವರ್ಣಭೇದ, ಶೋಷಣೆ, ಅಸಮಾನತೆ, ವೇದಾಗಮ ಪುರಾಣ ಬಹುದೇವತೋಪಾಸನೆ ಮುಂತಾದವುಗಳನ್ನು ಪ್ರಬಲವಾಗಿ ವಿರೋಧಿಸುತ್ತದೆ.

ಬಸವ ಧರ್ಮಕ್ಕೆ ಸಂಬಂಧಿಸಿದಂತೆ ಹರಿಹರನ ದೃಷ್ಟಿಕೋನ ಒಂದು ರೀತಿಯದಾದ್ದರೆ, ಚಾಮರಸನ ದೃಷ್ಟಿಕೋನ ಮತ್ತೊಂದು ರೀತಿಯದ್ದಾಗಿದೆ. ಮಾದಾರ ಚೆನ್ನಯ್ಯ ಶ್ವಪಚಯ್ಯನಂತಹ ದಲಿತ ವಚನಕಾರರ ಬಗೆಗೆ ಹರಿಹರ ಕವಿ ಭಕ್ತಿಯಿಂದ ರಗಳೆ ಕಾವ್ಯ ರಚಿಸಿದ್ದಾನೆ. 12ನೇ ಶತಮಾನದ ಶರಣರ ಸಿದ್ಧಾಂತಕ್ಕೆ ಹರಿಹರ ಸಮೀಪವಾದರೆ, ಚಾಮರಸ ಶರಣರ ಸಿದ್ಧಾಂತಗಳನ್ನು ಮತ್ತೊಂದು ರೀತಿಯಲ್ಲಿ ಪ್ರತಿಪಾದಿಸುತ್ತಾನೆ. `ಹೆಣ್ಣು, ಹೊನ್ನು, ಮಣ್ಣು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯೆ’ಯೆಂದು ಅಲ್ಲಮಪ್ರಭು ಹೇಳಿದ್ದರೆ, ಚಾಮರಸನು ತನ್ನ `ಪ್ರಭುಲಿಂಗಲೀಲೆ’ ಕೃತಿಯಲ್ಲಿ ಅಲ್ಲಮನನ್ನು ಮಾಯಾ ಕೋಲಾಹಲದ ಪಾತ್ರದಂತೆ ಚಿತ್ರಿಸಿದ್ದಾನೆ. ಹೆಣ್ಣು ಮಾಯೆಯೆಂದು ತಿಳಿದಿದ್ದ ಚಾಮರಸನು, ಅಲ್ಲಮನು ಮಾಯೆಯನ್ನು ಸೋಲಿಸಿದನೆಂದು ಹೇಳುತ್ತಾನೆ ಎಂದರು.

ಬಂಗಾರ ನಮಗೆ ತೃಪ್ತಿ ಕೊಡುವುದಿಲ್ಲ. ಹಣ ನಮಗೆ ತೃಪ್ತಿ ಕೊಡುವುದಿಲ್ಲ. ಅಧಿಕಾರ ನಮಗೆ ತೃಪ್ತಿ ಕೊಡುವುದಿಲ್ಲ, ಆದರೆ ಶರಣರ ಮಾತುಗಳು ನಮಗೆ ತೃಪ್ತಿ ಕೊಡುತ್ತವೆ. ಮನುಷ್ಯನಿಗೆ ತಿಳಿದುಕೊಳ್ಳುವ ಅರಿವು ಬರಬೇಕು. ಶರಣ ಸಾಹಿತ್ಯವನ್ನು  ಯುವಕರಲ್ಲಿ, ಎಲ್ಲರಲ್ಲೂ ಅಳವಡಿಸಿಕೊಳ್ಳಬೇಕು ಎಂದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ  ಡಾ. ಕೆ. ರವೀಂದ್ರನಾಥ  ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ,  ಹಾಲಮ್ಮ ಸಿದ್ದಪ್ಪ  ದತ್ತಿಯ `ಶರಣ ಸಾಹಿತ್ಯದ ಪ್ರಸಾರ’ ಕುರಿತು ಉಪನ್ಯಾಸ ಮಂಡಿಸಿ  ಜಾತಿ, ಮತ, ಲಿಂಗ ಭೇದ ತೊಡೆದು ಹಾಕಿ, ಸಮಸಮಾಜದ ಪರಿಕಲ್ಪನೆಯಡಿ ಕೆಲಸ ಮಾಡಲು, ಶರಣ ಸಾಹಿತ್ಯ ಪರಿಷತ್‌ ಪ್ರೇರೇಪಿಸುತ್ತದೆ ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್‌ ತಾಲ್ಲೂಕು ಅಧ್ಯಕ್ಷ ಪೂಜಾರ್ ಷಣ್ಮುಖಪ್ಪ ಮಾತನಾಡಿ, ಹಣ, ಅಧಿಕಾರ, ಅಂತಸ್ತು, ಕಾರು, ಬಂಗಲೆ, ಬಂಗಾರ, ವಜ್ರ, ವೈಢೂರ್ಯಗಳ ವೈಭವೋಪೇತದ ವಿಲಾಸದ ಬದುಕು ನಮಗೆ ತೃಪ್ತಿ ಕೊಡಲಾರವು.  ಆದರೆ, ಶರಣ ಸಾಹಿತ್ಯದ ಪ್ರತಿ ಪದವು, ನಮ್ಮ ಬದುಕಿಗೆ ಬೇಕಾದ ತೃಪ್ತಿ ಕೊಡುತ್ತವೆ ಎಂಬ ವಾಸ್ತವವನ್ನು ನಾವು ಅರಿಯಬೇಕಿದೆ. ಶರಣ ಸಾಹಿತ್ಯ ಎಲ್ಲ ವಯೋಮಾನದ ಮನುಷ್ಯನ ಬದುಕಿಗೆ ದಾರಿದೀಪದಂತೆ ಎಂದರು.

ಶರಣ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಗೌರವ ಅಧ್ಯಕ್ಷ  ಸಿ.ಸಿದ್ದಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಎಂ.ರಾಜಶೇಖರ್‌ ಮಾತನಾಡಿದರು.

ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಎನ್.ಎಂ.ರವಿಕುಮಾರ್. ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷರಾದ ಹೆಚ್.ಎಂ.ಲಲಿತಮ್ಮ, ಹಗರಿಬೊಮ್ಮನಹಳ್ಳಿ ತಾಲ್ಲೂಕು  ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ಇಂದುಮತಿ. ಸಮಿತಿಯ ಉಪಾಧ್ಯಕ್ಷ ಕೆ.ಎಸ್.ವೀರಭದ್ರಪ್ಪ, ಶರಣ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಎಸ್.ಬಿ.ಪಾಟೀಲ್, ಪ್ರಧಾನ ಕಾರ್ಯದರ್ಶಿ ಬಿ.ರಾಜಶೇಖರ್‌. ಗೌರವ ಕಾರ್ಯದರ್ಶಿ ಜಿ.ಮಹಾದೇವಪ್ಪ, ಕೋಶಾಧ್ಯಕ್ಷರಾದ ಕುಸುಮ ಜಗದೀಶ್‌, ಸಂಘಟನಾ ಕಾರ್ಯದರ್ಶಿಗಳಾದ  ಐ.ಬಸವರಾಜಪ್ಪ, ಕೆ.ಉಮಾಪತಿ, ನಾಗರಾಜ ಸಿ.ಪಾಟೀಲ್, ಶಿಕ್ಷಕರಾದ ಚನ್ನಪ್ಪ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ.ಸಂತೋಷ್, ಎ.ಕೆ.ಬಿ.ಶೇಖರಪ್ಪ, ಕೊಟ್ರಯ್ಯ ಪಿ.ಹೆಚ್, ಎಂ.ಪಿ.ಎಂ.ಕೊಟ್ರಯ್ಯ, ಪಿ.ಶಂಭುಲಿಂಗನಗೌಡ, ಪಿ.ಕೊಟ್ರಬಸವನಗೌಡ, ಡಿ.ಶಂಕ್ರಣ್ಣ, ವಿಠೋಬ, ಎಸ್.ಹೆಚ್.ವೈ. ಗಾಯತ್ರಮ್ಮ, ಯು.ಎಸ್.ಶಕುಂತಲಮ್ಮ ಸೇರಿದಂತೆ, ಇತರರು ಇದ್ದರು.  

ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರಾದ ಪುಷ್ಪ ದಿವಾಕರ್, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಡಿ.ರಾಮನಮಲಿ, ಮುಖಂಡ ವಿಜಯ ದಿವಾಕರ್ ಸೇರಿದಂತೆ ಇತರರು ಇದ್ದರು.

error: Content is protected !!