ದಾವಣಗೆರೆ, ಫೆ. 4- ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆ ಯರಿಗೆ 15,000 ರೂ. ಸಹಾಯಕಿಯರಿಗೆ 10,000 ರೂ.ಗೆ ವೇತನ ಹೆಚ್ಚಿಸುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರು ನೀಡಿದ ಆರನೇ ಗ್ಯಾರಂಟಿ ಭರವಸೆಯಂತೆ ಸರ್ಕಾರ ಇದೇ ಬಜೆಟ್ ನಲ್ಲಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಫೆಬ್ರವರಿ 3 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಎಐಟಿಯುಸಿ ಸಂಯೋಜಿತ ಅಂಗನವಾಡಿ ಕಾರ್ಯಕ ರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ರಾಜ್ಯ ಸಮಿತಿ ನೇತೃತ್ವದಲ್ಲಿ ಆರಂಭವಾಗಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಖ್ಯ ಮಂತ್ರಿಗಳ ಭರವಸೆ ಮೇರೆಗೆ ಮುಂದೂಡಲಾಗಿದೆ ಎಂದು ಫೆಡರೇಶನ್ ರಾಜ್ಯಾಧ್ಯಕ್ಷ ಬಿ. ಅಮ್ಜದ್ ತಿಳಿಸಿದ್ದಾರೆ.
ಮುಷ್ಕರ ನಡೆಯುತ್ತಿದ್ದ ಫ್ರೀಡಂ ಪಾರ್ಕ್ಗೆ ಮುಖ್ಯಮಂತ್ರಿಗಳ ಪ್ರತಿನಿಧಿಯಾಗಿ ಆಗಮಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರು ಮುಷ್ಕರ ನಿರತರನ್ನು ಉದ್ದೇಶಿಸಿ ಮಾತನಾಡಿ, ನಾನು ಮುಖ್ಯಮಂತ್ರಿಗಳ ಪರವಾಗಿ ಇಲ್ಲಿಗೆ ಬಂದಿದ್ದು, ಬರುವ ಬಜೆಟ್ ನಲ್ಲಿ ನಿಮ್ಮ ಬೇಡಿಕೆಯನ್ನು ಪರಿಗಣಿಸುವುದಾಗಿ ಭರವಸೆ ನೀಡಿ ಮುಷ್ಕರವನ್ನು ಕೈ ಬಿಡಲು ವಿನಂತಿಸಿದರು ಎಂದು ಫೆಡರೇಶನ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಮ್ಮ ತಿಳಿಸಿದರು.
ಕೋರ್ ಕಮಿಟಿ ಸಭೆ ನಡೆಯುವ ಸಂದರ್ಭದಲ್ಲಿ ಎಐಟಿಯುಸಿ ರಾಜ್ಯ ಅಧ್ಯಕ್ಷ ಹೆಚ್. ವಿ. ಅನಂತ ಸುಬ್ಬರಾವ್ ರಾಜ್ಯ ಕಾರ್ಯದರ್ಶಿ ಆವರಗೆರೆ ಚಂದ್ರು ಸೇರಿದಂತೆ ಇತರರು ಇದ್ದರು.