ದಾವಣಗೆರೆ, ಜ.2- ನಗರದ ಜಯನಗರ ‘ಬಿ’ ಬ್ಲಾಕ್‌ನ ಟವರ್ ಲೇಔಟ್‌ನಲ್ಲಿ ನಕಲಿ ಕೀ ಬಳಸಿ ಮನೆಯೊಂದರಲ್ಲಿ ಬಂಗಾರದ ಆಭರಣ ಹಾಗೂ ಹಣ ಕಳವು ಮಾಡಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಪೊಲೀಸರು ಆತನಿಂದ ಒಟ್ಟು 2.80 ಲಕ್ಷ ರೂ. ಮೌಲ್ಯದ ಆಭರಣ ಹಾಗೂ 30,000 ರೂ. ಹಾಗೂ ಕೃತ್ಯಕ್ಕೆ ಬಳಸಿದ್ದ ನಕಲಿ ಕೀ ವಶಪಡಿಸಿಕೊಂಡಿದ್ದಾರೆ.
ನಂದೀಶ ಬಂಧಿತ ಆರೋಪಿ. ಈತ ಅದೇ ಬಡಾವಣೆಯ ನಿವಾಸಿ ಅಜ್ಜಪ್ಪ ಎಸ್. ಅವರ ಮನೆಯಲ್ಲಿ ಈಚೆಗೆ ಯಾರೂ ಇಲ್ಲದಿದ್ದಾಗ ನಕಲಿ ಕೀ ಬಳಸಿ ಮನೆಯ ಬಾಗಿಲು ತೆರೆದು ಬೀರುವಿನಲ್ಲಿಟ್ಟಿದ್ದ 52,000 ರೂ. ಹಾಗೂ 2.80 ಲಕ್ಷ ಮೌಲ್ಯದ 20 ಗ್ರಾಂ ತೂಕದ ಬಂಗಾರದ ಸರ ಹಾಗೂ 25 ಗ್ರಾಂನ ಬಂಗಾರದ ಕೈ ಕಡಗ ಕಳವು ಮಾಡಿದ್ದ.
ಈ ಸಂಬಂಧ ಅಜ್ಜಪ್ಪ ಕೆ.ಟಿ.ಜೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕೆ.ಟಿ.ಜೆ. ನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ಎಚ್.ಎಸ್. ಅವರ ನೇತೃತ್ವದಲ್ಲಿ ಪಿಎಸ್ಐ ಲತಾ ಆರ್. ಹಾಗೂ ಸಿಬ್ಬಂದಿ ಸುರೇಶ್ ಬಾಬು, ಮಹಮದ್ ರಫಿ, ಸಿದ್ದಪ್ಪ, ಗೀತಾ ಸಿ.ಕೆ. ಅವರ ತಂಡ ಆರೋಪಿ ಪತ್ತೆ ಕಾರ್ಯಾಚರಣೆ ನಡೆಸಿತ್ತು.