ದಾವಣಗೆರೆ, ಸೆ. 27- ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ತಮ್ಮ ಪತ್ನಿ ಲೋಕ ಸಭಾ ಚುನಾವಣೆಯಲ್ಲಿ ಸೋತ ಬಳಿಕ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಕಡೆಗಣಿ ಸುತ್ತಿದ್ದಾರೆ. ಅಧಿಕಾರ ಸಿಕ್ಕರೆ ಮಾತ್ರ ಪಕ್ಷ ಸಂಘಟನೆಗೆ ಬರುವ ಸಿದ್ಧೇಶ್ವರವರಿಂದ ಪಕ್ಷಕ್ಕೆ ಜಿಲ್ಲೆಯಲ್ಲಿ ಭಾರೀ ಹಿನ್ನಡೆಯಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಕಾರ್ಯಕರ್ತ ರಾದ ರಾಜು, ಪ್ರವೀಣ್ ಜಾಧವ್ ಮಾತನಾಡಿ, ಲೋಕಸಭೆಯ ನಾಲ್ಕು ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಹಗಲು – ರಾತ್ರಿ ಎನ್ನದೇ ಕೆಲಸ ಮಾಡಿ ಗೆಲ್ಲಿಸಿದ್ದೇವು. ಆದರೆ ಈಗ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ರಣತಂತ್ರ ರೂಪಿಸಲು ಕರೆಯಲಾಗಿದ್ದ ಸಭೆಗೆ ಗೈರಾಗಿದ್ದಾರೆ. ಅಧಿಕಾರ ಇದ್ದರೆ ಮಾತ್ರ ಪಕ್ಷ ಬಲಿಷ್ಠ ವಾಗುವುದು ಹೇಗೆ ? ಎಂದು ಪ್ರಶ್ನಿಸಿದರು.
ಸಿದ್ದೇಶ್ವರ ಗೆಲ್ಲಲು ವೈಯಕ್ತಿಕ ವರ್ಚಸ್ಸಿ ಗಿಂತ ಪಕ್ಷದ ಕಾರ್ಯಕರ್ತರು, ಮುಖಂಡರು, ಬಿಜೆಪಿ ಚಿಹ್ನೆ, ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಜನಪ್ರಿಯತೆ, ವರ್ಚಸ್ಸು ಕಾರಣ. ಪಕ್ಷ ಕಟ್ಟಿ ದುಡಿದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಅವರಂತಹ ನಾಯಕರಿಗೆ ಜಿಲ್ಲೆಯ ನಾಯಕತ್ವ ನೀಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್ ಪೇಂಟರ್, ಗಂಗರಾಜು, ಜಿ. ದಯಾನಂದ, ಪ್ರದೀಪ್, ಮಂಜುನಾಥ್ ಮತ್ತಿತರರಿದ್ದರು.