ಹರಿಹರ, ಜು. 24- ತಾಲ್ಲೂಕಿನಲ್ಲಿ ಏ. 1ರಿಂದ ಇದೇ ತಿಂಗಳ 23 ರವರೆಗೆ ಸುರಿದ ಅತಿ ಹೆಚ್ಚು ಮಳೆಯಿಂದಾಗಿ ವಿವಿಧ ಗ್ರಾಮಗಳ 24 ಮನೆಗಳಿಗೆ ಹಾನಿಯಾಗಿದ್ದು, ಒಟ್ಟು 23 ಲಕ್ಷದ 85 ಸಾವಿರ ರೂಪಾಯಿ ನಷ್ಟವಾಗಿದೆ ಎಂದು ತಹಶೀಲ್ದಾರ್ ಗುರುಬಸವರಾಜ್ ತಿಳಿಸಿದರು.
ತಮ್ಮ ಕಚೇರಿಯ ಆವರಣದಲ್ಲಿ ಮಾಹಿತಿ ನೀಡಿದ ಅವರು, ಹರಿಹರ ನಗರ ಸೇರಿದಂತೆ ತಾಲ್ಲೂಕಿನ ಬೆಳ್ಳೂಡಿ, ಗೋವಿನಾಳ, ಹರಲಹಳ್ಳಿ, ಎಳೆಹೊಳೆ, ಮಲೇಬೆನ್ನೂರು, ರಾಜನಹಳ್ಳಿ, ಸಿರಿಗೆರೆ, ಕೊಕ್ಕನೂರು, ವಾಸನ, ಕೊಮಾರನಹಳ್ಳಿ, ಜಿ.ಬೇವಿನಹಳ್ಳಿ, ಬೂದಿಹಾಳ, ಕುಣೆಬೆಳಕೇರೆ ಸೇರಿದಂತೆ, ಹಲವು ಗ್ರಾಮದಲ್ಲಿ ಕಚ್ಚಾ ಮನೆ, ದನದ ಕೊಟ್ಟಿಗೆ, ಪಕ್ಕಾ ಮನೆ ಸೇರಿದಂತೆ 24 ಮನೆಗಳಿಗೆ ಹಾನಿ ಸಂಭವಿಸಿದೆ ಎಂದು ತಿಳಿಸಿದರು.
ನಷ್ಟಕ್ಕೆ ಸಂಬಂಧಿಸಿದಂತೆ ಕೇವಲ 10 ಜನರು ಮಾತ್ರ ಪೂರ್ಣ ದಾಖಲೆ ಒದಗಿಸಿದ್ದು, ಉಳಿದವರು ದಾಖಲೆಗಳನ್ನು ನೀಡಿರುವುದಿಲ್ಲ. ಸರ್ಕಾರ ಇತ್ತೀಚೆಗೆ ಸಂಪೂರ್ಣ ಹಾನಿಯಾದ ಮನೆಗೆ 1 ಲಕ್ಷದ 20 ಸಾವಿರ, ಪಕ್ಕಾ ಮನೆ ಹಾನಿಗೆ 5200 ರೂಪಾಯಿ, ಕಚ್ಚಾ ಮನೆಗೆ 4 ಸಾವಿರ ರೂಪಾಯಿ ಪರಿಹಾರ ನೀಡುತ್ತಿರುವು ದರಿಂದ ಜನರು ಆಸಕ್ತಿ ತೋರಿಸಲು ಹಿಂಜರಿಕೆ ಮಾಡುತ್ತಿದ್ದಾರೆ ಎಂದು ಹೇಳಿದರು. ತಾಲ್ಲೂಕು ಆಡಳಿತದ ಮಂಜುನಾಥ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.