ಸಂಸದರ ನಡುವಳಿಕೆಯೇ ನಾನು ಕಾಂಗ್ರೆಸ್‌ ಸೇರಲು ಕಾರಣ: ಸೋಗಿ ಶಾಂತಕುಮಾರ್

ದಾವಣಗೆರೆ, ಏ.22-  ಸಂಸದರ ನಡವಳಿಕೆಯಿಂದ ಬೇಸತ್ತು, ಹಿರಿಯರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನಾನು ಕಾಂಗ್ರೆಸ್ ಪಕ್ಷ ಸೇರಿದ್ದೇನೆ ಎಂದು ಮಹಾನಗರ ಪಾಲಿಕೆ ಸದಸ್ಯ, ಪಂಚಮಸಾಲಿ ಸಮಾಜದ ಮುಖಂಡ ಸೋಗಿ ಶಾಂತಕುಮಾರ್ ಹೇಳಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಸೂಕ್ತ ಗೌರವ ಇಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಗೌರವ ಇರದ ಜಾಗದಲ್ಲಿ ಇರಬಾರದೆಂದು ನಿರ್ಧರಿಸಿ ಕಾಂಗ್ರೆಸ್‌ಗೆ ಬಂದಿದ್ದೇನೆ. ಇನ್ನೂ ಅನೇಕ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಿದರು.

ಸಂಸದರು ನನ್ನ ವಾರ್ಡ್ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸಲಿಲ್ಲ. ನನ್ನಂತೆ ಅನೇಕ ಬಿಜೆಪಿ ಪಾಲಿಕೆ ಸದಸ್ಯರಿಗೆ ಗೌರವ ಕೊಡಲಿಲ್ಲ. ಅಲ್ಲಿ ಉಸಿರು ಕಟ್ಟುವಂತಹ ವಾತಾವರಣವಿದೆ ಎಂದು ಹೇಳಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್  ನನ್ನ ರಾಜಕೀಯ ಗುರುಗಳು. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅಲ್ಲದೇ ಬಿಜೆಪಿಯಲ್ಲಿರುವ ನನ್ನ ಸ್ನೇಹಿತರ ಮೇಲೂ ಗೌರವವಿದೆ ಎಂದು ಸೋಗಿ ಶಾಂತಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಪಾಲಿಕೆ ಸದಸ್ಯರುಗಳಾದ ಗಡಿಗುಡಾಳ್ ಮಂಜುನಾಥ್, ಎ.ನಾಗರಾಜ್, ಕೆ.ಚಮನ್ ಸಾಬ್, ಮುಖಂಡರುಗಳಾದ ಡಿ.ಬಸವರಾಜ್, ಕೆ.ಜಿ ಶಿವಕುಮಾರ್, ಗೋಪಿನಾಯ್ಕ, ಡೋಲಿ ಚಂದ್ರು, ಮಲ್ಲಿಕಾರ್ಜುನ ಇಂಗಳೇಶ್ವರ, ಸಚಿನ್, ಮನು ಇತರರಿದ್ದರು.

error: Content is protected !!