ಮಾಗಾನಹಳ್ಳಿ ರತ್ನಮ್ಮ ಅವರಿಗೆ `ಅಕ್ಕ ಶ್ರೀ’ ಪ್ರಶಸ್ತಿ

ಮಾಗಾನಹಳ್ಳಿ ರತ್ನಮ್ಮ ಅವರಿಗೆ `ಅಕ್ಕ ಶ್ರೀ’ ಪ್ರಶಸ್ತಿ

ದಾವಣಗೆರೆಯ ಶ್ರೀ ಅಕ್ಕಮಹಾದೇವಿ ಸಮಾಜದ ವತಿಯಿಂದ ಮಹಿಳಾ ಕ್ಷೇತ್ರದ ಸಾಧಕರಿಗೆ ಅಕ್ಕಮಹಾದೇವಿ ಜಯಂತ್ಯೋತ್ಸವ ಹಾಗೂ ವಚನೋತ್ಸವದ ಸಂದರ್ಭದಲ್ಲಿ ಕೊಡ ಮಾಡುವ ಅಕ್ಕ ಶ್ರೀ ಪ್ರಶಸ್ತಿಗೆ ಶ್ರೀಮತಿ ಮಾಗಾನಹಳ್ಳಿ ರತ್ನಮ್ಮ ಭಾಜನರಾಗಿದ್ದಾರೆ.

ಶ್ರೀಮತಿ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ಇಂದು ಸಂಜೆ 6 ಗಂಟೆಗೆ ಏರ್ಪಾಡಾಗಿರುವ ಸಮಾರಂಭದಲ್ಲಿ ರತ್ನಮ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ನ್ಯಾಮತಿ ಪಟ್ಟಣದ ಪ್ರಸಿದ್ಧ ನುಚ್ಚಿನ ಮನೆತನದ ಶ್ರೀಮತಿ ಚನ್ನಬಸಮ್ಮ ಹಾಗೂ ಶ್ರೀ ನುಚ್ಚಿನ ಬಸವಣ್ಣಪ್ಪನವರ ದ್ವಿತೀಯ ಪುತ್ರಿಯಾಗಿ ರತ್ನಮ್ಮನವರು 1943 ರಲ್ಲಿ ಜನಿಸಿದರು.

ನ್ಯಾಮತಿಯಲ್ಲಿ 8ನೇ ತರಗತಿಯ ವರೆಗೆ ವಿದ್ಯಾಭ್ಯಾಸ ಮಾಡಿದರು. ಚಿಕ್ಕ ವಯಸ್ಸಿನಲ್ಲಿ ನ್ಯಾಮತಿಯ ಕಲ್ಮಠದಲ್ಲಿ ನೆರವೇರಿಸಿದ್ದ ಶ್ರೀ ಅಕ್ಕನ ಹುಣ್ಣಿಮೆ ಕಾರ್ಯಕ್ರಮದಲ್ಲಿ `ಅಕ್ಕಮಹಾದೇವಿ’ ಪಾತ್ರಧಾರಿಯಾಗಿ ಕೌಶಿಕ ಮಹಾರಾಜನನ್ನು ಎದುರಿಸಿದ ಪ್ರಸಂಗ ಹಾಗೂ ಅರಮನೆಯನ್ನು ತೊರೆದ ಪ್ರಸಂಗ ಎಲ್ಲರ ಪ್ರಶಂಸೆಯನ್ನು ಪಡೆದು ಬೆಳ್ಳಿ ಪದಕವನ್ನು ಬಹುಮಾನವಾಗಿ ಪಡೆದಿರುವ ಹೆಗ್ಗಳಿಕೆ ಇವರದು. ಪ್ರತಿವರ್ಷ ವಚನ ಗಾಯನ ಮಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದರು. 12ನೇ ವರ್ಷದಲ್ಲಿ ಸಿದ್ದರಾಮ. ಸಖಿ ಇನ್ನು ಮುಂತಾದ ಶಿವಶರಣರ ವೇಷಧರಿಸಿ ಪಾತ್ರದಾರಿಯಾಗಿದ್ದರು.

1959 ಮೇ 11ರ೦ ಬಸವ ಜಯತಿ ದಿನದಂದು ದಾವಣಗೆರೆಯ ಪ್ರಸಿದ್ಧ ಮನೆತನವಾದ ಮಾಗಾನಹಳ್ಳಿ ಶ್ರೀ ದೊಡ್ಡಬಸಪ್ಪ ಮತ್ತು ಶ್ರೀಮತಿ ಬಸಮ್ಮ ಇವರ ಪುತ್ರರಾದ ಮಾಗಾನಹಳ್ಳಿ ಗುರುಪಾದಪ್ಪ (ಸೋದರ ಮಾವ) ನವರೊಂದಿಗೆ 16ನೇ ವಯಸ್ಸಿನಲ್ಲಿಯೇ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಇವರಿಗೆ ಇಬ್ಬರು ಪುತ್ರರಿದ್ದಾರೆ. ಮಾಗಾನಹಳ್ಳಿ ಮನೆತನದ ಬಳಗದಲ್ಲಿ ಎಲ್ಲರ ಮನ ಗೆದ್ದಿರುವರು.

ಶ್ರೀಮತಿ ಎಂ.ಸಿ. ಗಿರಿಜಮ್ಮನವರ ಸಮಾಜ ಸೇವೆಯಿಂದ ಪ್ರೇರಿತರಾಗಿ 1980 ರಲ್ಲಿ ಶ್ರೀ ಅಕ್ಕಮಹಾದೇವಿ ಸಮಾಜದಲ್ಲಿ ಸದಸ್ಯರಾಗಿ, ನಿರ್ದೇಶಕರಾಗಿ, ನಂತರ ಶ್ರೀ ಅಕ್ಕಮಹಾದೇವಿ ನೇತ್ರದಾನ ಪ್ರೇರಣಾ ಸಮಿತಿಯ ಪದಾಧಿಕಾರಿಯಾಗಿ 1992 ರಿಂದ ಶ್ರೀಮತಿ ಚಂದ್ರಮ್ಮ ಜಯಣ್ಣನವರ ನೇತೃತ್ವದಲ್ಲಿ ಹಲವಾರು ಮೃತರ ನೇತ್ರಗಳನ್ನು ಸ್ವೀಕರಿಸಿ ಅಂಧರ ಪಾಲಿಗೆ ಆಶಾಕಿರಣವಾಗಿದ್ದಾರೆ. ಮಲೇಬೆನ್ನೂರು, ಜಗಳೂರು, ಹದಡಿ ಹಲವಾರು ಕಡೆ ಉಚಿತ ನೇತ್ರ ತಪಾಸಣೆ ಹಾಗೂ ಕಣ್ಣಿನ ಪೊರೆ ಆಪರೇಷನ್ ಮಾಡಿಸುವ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ.

1998 ರಿಂದ ಶ್ರೀಮತಿ ಉಮಾ ವೀರಭದ್ರಪ್ಪನವರ ನೇತೃತ್ವದಲ್ಲಿ ಶ್ರೀ ಅಕ್ಕಮಹಾದೇವಿ ವಧು-ವರರ ಅನ್ವೇಷಣೆ ಕೇಂದ್ರ ದಲ್ಲಿ ಸಹ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರತಿ ವರ್ಷ `ಅಕ್ಕನ ಹುಣ್ಣಿಮೆ’ಯಲ್ಲಿ ವಚನ ಗಾಯನ, ತತ್ವಪದ, ನಾಟಕಗಳು, ಶಿವಶರಣರ ಪಾತ್ರಧಾರಿಯಾಗಿ ಭಾಗವಹಿಸಿ ರುವ ಇವರು ಮಹಿಳಾ ಸಮಾಜದಲ್ಲಿಯೂ ಸದಸ್ಯರಾಗಿರುವರು. ತಮ್ಮ 82ನೇ ಇಳಿ ವಯಸ್ಸಿನಲ್ಲಿ ಸಮಾಜಕ್ಕೆ ಅಳಿಲು ಸೇವೆ ಮಾಡುತ್ತಾ, ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳೊಂದಿಗೆ ತುಂಬು ಜೀವನ ನಡೆಸುತ್ತಿರುವ ಶ್ರೀಮತಿ ಮಾಗಾನ ಹಳ್ಳಿ ರತ್ನಮ್ಮ ಹಾಗೂ ಕುಟುಂಬದವರ ಮೇಲೆ ಶ್ರೀ ಅಕ್ಕಮಹಾದೇವಿ ಆಶೀರ್ವಾದ ಸದಾ ಇರಲಿ ಎಂದು ಹಾರೈಸುವೆವು. 

– ಶ್ರೀಮತಿ ಶೋಭ ಎಸ್‌.ಕಣವಿ, ಕಾರ್ಯಕಾರಿ ಸಮಿತಿ ಸದಸ್ಯೆ,  ಶ್ರೀ ಅಕ್ಕಮಹಾದೇವಿ ಸಮಾಜ, ದಾವಣಗೆರೆ

error: Content is protected !!