ದಾವಣಗೆರೆ, ಏ. 18 – ನಗರದ ಖಾಸಗಿ ಆಸ್ಪತ್ರೆಯ ವೈದ್ಯರು ದೋಷ ಪೂರಿತ ವೈದ್ಯಕೀಯ ಸೇವೆಗೆ ಪರಿಹಾರವಾಗಿ ನಷ್ಟ ಅನುಭವಿಸಿದ ರೋಗಿಗೆ ರೂ.4,36,626 ಪರಿಹಾರ ಹಾಗೂ ಮಾನಸಿಕ ವೇದನೆ, ಪ್ರಕರಣದ ಖರ್ಚಾಗಿ ರೂ.60 ಸಾವಿರ ಭರಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಸ್ಥಳೀಯ ಟಿ. ಕುಮಾರ ಅವರು ತಮ್ಮ ಎಡಗೈಗೆ ಉಂಟಾದ ಗಾಯಕ್ಕೆ ಚಿಕಿತ್ಸೆ ಕೋರಿ 2022 ರ ಫೆ. 2 ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಿಗೆ ತೋರಿಸಿದಾಗ ವೈದ್ಯರು ಎಡಕ್ಕೆ ಮೂಳೆ ಮುರಿದಿದ್ದು, ಅದಕ್ಕಾಗಿ ಶಸ್ತ್ರ ಚಿಕಿತ್ಸೆ ಮಾಡಬೇಕಾಗಬಹುದೆಂದು ನಿರ್ಧರಿಸಿ ರೋಗಿಗೆ 2022 ರ ಫೆ. 16 ರಂದು ಶಸ್ತ್ರ ಚಿಕಿತ್ಸೆ ನಡೆಸಿ 2022 ರ ಫೆ. 21 ರಂದು ಬಿಡುಗಡೆ ಮಾಡಿದ್ದರು. ಆದರೆ, ಗುಣ ಹೊಂದದೇ ಇರುವುದರಿಂದ, ರೋಗಿಯು ಸರ್ಕಾರಿ ಆಸ್ಪತ್ರೆಯಲ್ಲಿ ಸಮಾಲೋಚಿಸಿದಾಗ ಎಡಗೈ ಮೂಳೆ ಸರಿಯಿರುವುದು ಎಕ್ಸರೇ ವರದಿಯಿಂದ ತಿಳಿದು ಬಂದಿರುತ್ತದೆ. ಸರ್ಕಾರಿ ಆಸ್ಪತ್ರೆ ವೈದ್ಯರು ರೋಗಿಗೆ ಹೆಚ್ಚಿನ ಚಿಕಿತ್ಸೆ ಪಡೆಯಲು ನೀಡಿದ ಸಲಹೆಗೆ ರೋಗಿಯು ಮಣಿಪಾಲ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುತ್ತಾರೆ.
ರೋಗಿಯು ಖಾಸಗಿ ಆಸ್ಪತ್ರೆ ವೈದ್ಯರು ಸೇವಾ ನ್ಯೂನತೆ ಮಾಡಿದ ಬಗ್ಗೆ ಸಕ್ಷಮ ಪ್ರಾಧಿಕಾರದೊಂದಿಗೆ ಪತ್ರ ವ್ಯವಹಾರ ನಡೆಸಿ, ತಪ್ಪಿತಸ್ತ ವೈದ್ಯರ ಮೇಲೆ ಸೂಕ್ತ ಕ್ರಮಕ್ಕಾಗಿ ಆಶ್ರಯಿಸಿದ್ದರು. ಆದರೆ, ಸೂಕ್ತ ಕ್ರಮ ಜರುಗಿಸಲು ಒಪ್ಪದ ಪ್ರಾಧಿಕಾರ, ವೈದ್ಯರನ್ನು ತಪ್ಪಿತಸ್ತರಲ್ಲ ಎಂದು ನಿರ್ಧರಿಸಿ ಹಿಂಬರಹ ನೀಡಿತ್ತು.
ಪ್ರಾಧಿಕಾರ ಕ್ರಮ ಪ್ರಶ್ನಿಸಿ ಮತ್ತು ಸೂಕ್ತ ಚಿಕಿತ್ಸೆ ನೀಡಲು ನಿರ್ಲಕ್ಷ್ಯ ವಹಿಸಿದ್ದು ವೈದ್ಯರಿಂದ ಪರಿಹಾರ ಕೋರಿ, ದೂರುದಾರ ಟಿ. ಕುಮಾರ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಸದರಿ ಪ್ರಕರಣದಲ್ಲಿ ಎದುರುದಾರರಾಗಿ ಹಾಜರಾದ ವೈದ್ಯರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ದೂರುದಾರರು ಹಾಜರುಪಡಿಸಿದ ಸೂಕ್ತ ದಾಖಲೆಗಳನ್ನು ಮತ್ತು ಉಭಯ ಪಕ್ಷಗಾರರ ಅಹವಾಲನ್ನು ಪರಿಶೀಲಿಸಿದ ಆಯೋಗ, ದೂರುದಾರರು ಸಲ್ಲಿಸಿದ ದೂರನ್ನು ಪುರಸ್ಕರಿಸಿ, ಎದುರುದಾರ ವೈದ್ಯರು ಸೇವೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂದು ನಿರ್ಣಯಿಸಿ, ಎದುರುದಾರ ವೈದ್ಯರು, ನೊಂದ ದೂರುದಾರ ಗ್ರಾಹಕ ರೋಗಿಗೆ ಪರಿಹಾರ ರೂಪವಾಗಿ ಒಟ್ಟು ರೂ.4,36,626 ಮತ್ತು ಮಾನಸಿಕ ವೇದನೆ ಮತ್ತು ಪ್ರಕರಣದ ಖರ್ಚು ಒಟ್ಟು ರೂ.60,000/- ನೀಡಲು ಆದೇಶಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಬಿ.ಯು. ಗೀತಾ ಇವರು ಆದೇಶಿಸಿದ್ದಾರೆ.