ದಾವಣಗೆರೆ, ಏ. 1- ನಗರದಲ್ಲಿ ನೀರಿನ ಹಾಹಾಕಾರ ಸೃಷ್ಟಿಯಾಗಿದ್ದರೂ ಮಹಾನಗರ ಪಾಲಿಗೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಮಹಾನಗರ ಪಾಲಿಕೆ 33ನೇ ವಾರ್ಡ್ ಸದಸ್ಯ ಕೆ.ಎಂ. ವೀರೇಶ್ ಆರೋಪಿಸಿದ್ದಾರೆ.
ನಿನ್ನೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಟಿವಿ ಸ್ಟೇಷನ್ ಕೆರೆಯಿಂದ 4-5 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ಈ ತಪ್ಪು ಮಾಹಿತಿ ಯಿಂದ ಜನತೆ ಗೊಂದಲಕ್ಕೊಳಗಾಗುತ್ತಾರೆ. ಅಲ್ಲದೇ ನೀರು ಇದ್ದರೂ ಸಮರ್ಪಕವಾಗಿ ಪೂರೈಸುವಲ್ಲಿ ಪಾಲಿಕೆ ಸದಸ್ಯರು ವಿಫಲರಾಗಿದ್ದಾರೆ ಎಂದು ನಮ್ಮನ್ನು ದೂರುತ್ತಾರೆ.
ಪ್ರಸ್ತುತ ದಿನಗಳಲ್ಲಿ ಟಿವಿ ಸ್ಟೇಷನ್ ಕೆರೆಯಿಂದ 8 ರಿಂದ 10 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಕೆರೆಗೆ ಭೇಟಿ ನೀಡಿ ಹಾಗೂ ವಾರ್ಡ್ ಜನರ ಅಭಿಪ್ರಾಯ ಕೇಳಿ ಸತ್ಯಾಸತ್ಯತೆ ಪರಿಶೀಲಿಸಬೇಕು.
ಪ್ರಸ್ತುತ ಭದ್ರಾ ನಾಲಾ ನೀರನ್ನು ಕೆರೆಗೆ ತುಂಬಿಸಿಕೊಳ್ಳಲಾಗುತ್ತಿದೆ. ಅಕ್ರಮ ಪಂಪ್ಸೆಟ್ಗಳ ಹಾವಳಿಯಿಂದ ನೀರು ಕಡಿಮೆ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಅಲ್ಲದೇ ಪಂಪ್ಹೌಸ್ ಬಳಿ ಪದೇ ಪದೇ ವಿದ್ಯುತ್ ಕಡಿತಗೊಳ್ಳುತ್ತಿರುವುದರಿಂದಲೂ ನೀರು ಪೂರೈಕೆಗೆ ಸಮಸ್ಯೆಯಾಗುತ್ತಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ವೀರೇಶ್ ಮನವಿ ಮಾಡಿದ್ದಾರೆ.