ಜಿಲ್ಲೆಗೆ ಎಸ್ಸೆಸ್, ಎಸ್ಸೆಸ್ಸೆಮ್ ಕೊಡುಗೆ ಶೂನ್ಯ

ರಾಜಶೇಖರ್ ಆರೋಪ

ದಾವಣಗೆರೆ, ಏ. 1- ಜಿಲ್ಲೆಗೆ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಕೊಡುಗೆ ಶೂನ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ನಾಗಪ್ಪ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುವ ಸಂದರ್ಭದಲ್ಲಿ ಕಳೆದ 25 ವರ್ಷಗಳಿಂದ ಓರ್ವ ಅಭ್ಯರ್ಥಿಗೇ ಮತ ಹಾಕುತ್ತಿದ್ದೀರಿ, ಅವರು ಜಿಲ್ಲೆಯ ಅಭಿವೃದ್ಧಿಗೆ ಏನು ಕೊಡುಗೆ ಕೊಟ್ಟಿದ್ದಾರೆ ? ಎಂದು ಪ್ರಶ್ನಿಸಿದ್ದಾರೆ. ಆದರೆ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಉಸ್ತುವಾರಿ ಸಚಿವರಾದ ಮೇಲೆ ಜಿಲ್ಲೆಯ ಎಷ್ಟು ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ ಎಂಬುದನ್ನು ಪಟ್ಟಿ ಕೊಡಲಿ ಎಂದು ರಾಜಶೇಖರ್ ತಿರುಗೇಟು ನೀಡಿದರು.

ಸಂಸದ ಜಿ.ಎಂ. ಸಿದ್ದೇಶ್ವರರ ಸಾಧನೆಗಳ ಬಗ್ಗೆ ಪ್ರಶ್ನೆ ಮಾಡುವ ಅಭ್ಯರ್ಥಿ ಪ್ರಭಾ ಅವರು ತಮ್ಮ ಕುಟುಂಬದ ಶಾಸಕರು, ಸಚಿವರ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಲಿ ಎಂದರು.

ಸಂಸದ ಸಿದ್ದೇಶ್ವರ ಅವರು ಕೇಂದ್ರ ಸರ್ಕಾರದ ಯೋಜನೆಗಳ ಜೊತೆಗೆ ತಮ್ಮ  ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇತ್ತೀಚಿಗಷ್ಟೇ ಸಾಧನೆಗಳ ರಿಪೋರ್ಟ್ ಕಾರ್ಡ್ ಸಹ ಬಿಡುಗಡೆ ಮಾಡಲಾಗಿದೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಮಹಾನಗರ ಪಾಲಿಕೆಗೆ ಪ್ರತಿ ವರ್ಷ ನೂರು ಕೋಟಿಯಂತೆ ಮೂರು ವರ್ಷ ಮುನ್ನೂರು ಕೋಟಿ ರೂ. ಅನುದಾನ, ಕೇಂದ್ರ ಸರ್ಕಾರದ ಯುಐಡಿಎಸ್‌ಎಸ್‌ಎಂಟಿ ಯೋಜನೆಯ 88 ಕೋಟಿ ರೂ. ಅನುದಾನ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ 1,070 ಕೋಟಿ ರೂ. ಅನುದಾನದಿಂದ ದಾವಣಗೆರೆ ಯನ್ನು ಸುಂದರಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಿದ್ದೇಶ್ವರ ಅವರು ಕಳೆದ 20 ವರ್ಷಗಳಲ್ಲಿ ಜಿಲ್ಲೆಯ 1300 ಹಳ್ಳಿಗಳಿಗೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ. ಎಷ್ಟು ಅನುದಾನ ನೀಡಿದ್ದಾರೆಂಬುದರ ಬಗ್ಗೆ ನಾವು ಮಾಹಿತಿ ಕೊಡಲು ಸಿದ್ಧರಿದ್ದೇವೆ. ವಿಮಾನ ನಿಲ್ದಾಣ ಸ್ಥಾಪನೆಗೆ ಈಗಾಗಲೇ ಸಮೀಕ್ಷೆ ಮಾಡಿಸಿ, ಸೂಕ್ತ ಜಾಗ ಗುರುತಿಸಲಾಗಿದೆ. ಭೂ ಸ್ವಾಧೀನಕ್ಕಾಗಿ 142 ಕೋಟಿ ರೂ. ಬೇಕಾಗಿದ್ದು, ಅದನ್ನು ರಾಜ್ಯ ಸರ್ಕಾರದಿಂದ ಕೊಡಿಸಿ ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಿಟ್ಟ 11.500 ಕೋಟಿ ರೂ. ಹಣವನ್ನು ಐದು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಆ ಯೋಜನೆಗಳು ಶೇ. 15 ರಷ್ಟು ಜನರಿಗೆ ಕೂಡ ತಲುಪಿಲ್ಲ. ಅಭಿವೃದ್ಧಿ ಕೈಗೊಳ್ಳಲು ರಾಜ್ಯ ಸರ್ಕಾರದಿಂದ ಅನುದಾನ ಕೂಡ ಬರುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಸ್ಪಷ್ಟನೆ ನೀಡಲಿ ಎಂದರು.

ಜಿಲ್ಲಾ ಬಿಜೆಪಿಯಲ್ಲೀಗ ಬಂಡಾಯ ಶಮನಗೊಂಡಿದ್ದು, ಎಸ್.ಎ. ರವೀಂದ್ರನಾಥ್ ಅವರನ್ನೊಳಗೊಂಡಂತೆ ಗುಂಪಿನ ಎಲ್ಲರೂ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ನಾಳಿನ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿ ಪರ ಸ್ಟಾರ್ ಪ್ರಚಾರಕರಾಗಿ ಯಾರು ಯಾರು ಬರುತ್ತಾರೆಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ. ಸತೀಶ ಕೊಳೇನಹಳ್ಳಿ ಮಾತನಾಡಿ, ತಮ್ಮ ಸ್ವಾರ್ಥಕ್ಕಾಗಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗದಂತೆ ನೋಡಿಕೊಂಡಿದ್ದಾರೆಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎ.ವೈ. ಪ್ರಕಾಶ್, ಧನಂಜಯ ಕಡ್ಲೇಬಾಳ್, ಮಂಜಾ ನಾಯ್ಕ, ಕಿಶೋರ್ ಕುಮಾರ್, ಹೆಚ್.ಪಿ. ವಿಶ್ವಾಸ್, ಲಿಂಗರಾಜ್, ಬೇತೂರು ಬಸವರಾಜ್ ಉಪಸ್ಥಿತರಿದ್ದರು. 

error: Content is protected !!