ನವದೆಹಲಿ, ಫೆ. 3 – ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅದ್ವಾನಿ ಅವರಿಗೆ ಭಾರತ ರತ್ನ ನೀಡುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಭಾರತ ರತ್ನವು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಪ್ರಧಾನಿ ಮೋದಿ, ನಮ್ಮ ಕಾಲದ ಅತ್ಯಂತ ಗೌರವಾನ್ವಿತ ಮುತ್ಸದ್ಧಿ ಅದ್ವಾನಿ ಅವರಿಗೆ ಭಾರತ ರತ್ನ ನೀಡಲಾಗುವುದು. ಅವರು ದೇಶದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಗಾಧವಾಗಿದೆ ಎಂದಿದ್ದಾರೆ.
ಅವರು ಬೇರು ಮಟ್ಟದಿಂದ ಜೀವನ ಆರಂಭಿಸಿದ್ದರು ಹಾಗೂ ಉಪ ಪ್ರಧಾನ ಮಂತ್ರಿಯಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದರು. ದಶಕಗಳ ಕಾಲ ಅವರು ಸಾರ್ವ ಜನಿಕ ಜೀವನದಲ್ಲಿ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದರು. ಅವರು ರಾಜಕೀಯ ನೈತಿಕತೆಗೆ ಅತ್ಯುತ್ತಮ ಉದಾಹ ರಣೆ ಎಂದು ಪ್ರಧಾನಿ ಹೇಳಿದ್ದಾರೆ.
ಅದ್ವಾನಿ ಅವರಿಗೆ ಭಾರತ ರತ್ನ ನೀಡುತ್ತಿರುವುದು ನನಗೆ ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ. ಅವರ ಜೊತೆ ಸಂವಾದ ನಡೆಸಲು ಹಾಗೂ ಕಲಿಯಲು ನನಗೆ ಅನಂತ ಅವಕಾಶಗಳು ದೊರೆತಿರು ವುದು ಸೌಭಾಗ್ಯ ಎಂದೂ ಮೋದಿ ತಿಳಿಸಿದ್ದಾರೆ.
90ರ ದಶಕದಲ್ಲಿ ಬಿಜೆಪಿ ಬೃಹದಾಕಾರ ವಾಗಿ ಬೆಳೆಯಲು ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರು ಬಿಜೆಪಿಯಿಂದ ಮೊದಲ ಪ್ರಧಾನಿಯಾಗಲು ಅದ್ವಾನಿ ನೀಡಿರುವ ಕೊಡುಗೆ ಅಪಾರವಾಗಿದೆ.
ಭಾರತ ರತ್ನ ಘೋಷಣೆಯ ನಂತರ 96 ವರ್ಷದ ಅದ್ವಾನಿ ಅವರು ತಮ್ಮ ನಿವಾಸದಲ್ಲಿ ಪುತ್ರಿ ಪ್ರತಿಭಾ ಅದ್ವಾನಿ ಜೊತೆಗೆ ಮಾಧ್ಯಮದವರಿಂದ ಶುಭ ಹಾರೈಕೆ ಸ್ವೀಕರಿಸಿದರು.
ಪ್ರತಿಭಾ ಮಾತನಾಡಿ, ಅತ್ಯುನ್ನತ ಸರ್ಕಾರಿ ಗೌರವ ದೊರೆತಿರುವುದಕ್ಕೆ ತಮ್ಮ ತಂದೆಗೆ ಹರ್ಷವಾಗಿದೆ. ಇದಕ್ಕಾಗಿ ಪ್ರಧಾನಿ ಮೋದಿ ಹಾಗೂ ದೇಶದ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ ಎಂದು ಹೇಳಿದರು.
ಕಳೆದ ತಿಂಗಳು ಕೇಂದ್ರ ಸರ್ಕಾರ ಸಮಾಜವಾದಿ ನಾಯಕ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಕಟಿಸಿತ್ತು.
ಅಯೋಧ್ಯೆ ರಾಮ ದೇವಾಲಯದಲ್ಲಿ ಪ್ರಾಣ ಪ್ರತಿಷ್ಠಾಪನೆಯಾದ ವರ್ಷವೇ ಅದ್ವಾನಿ ಅವರಿಗೆ ಅತ್ಯುನ್ನತ ಗೌರವ ಪ್ರಕಟಿಸಲಾಗಿದೆ. 1990ರಲ್ಲಿ ಅದ್ವಾನಿ ಕೈಗೊಂಡ ರಾಮ ರಥ ಯಾತ್ರೆಯು ಬಿಜೆಪಿಗೆ ಅಪಾರ ಜನ ಬೆಂಬಲ ಗಳಿಸಿ ಕೊಟ್ಟಿತ್ತು.
ಯಾತ್ರೆಯ ಮೂಲಕ ಅದ್ವಾನಿ ಜನಸಂಪರ್ಕ ಬೆಳೆಸಿದ್ದು, ಪಕ್ಷದ ಮತ ಬ್ಯಾಂಕ್ ಗಟ್ಟಿಗೊಳಿಸಿತ್ತು. ಅದ್ವಾನಿ ರಥಯಾತ್ರೆಯು ಆಗಿನ ಪ್ರಬಲ ಪಕ್ಷವಾದ ಕಾಂಗ್ರೆಸ್ಗೆ ದೊಡ್ಡ ಸವಾಲಾಗಿತ್ತು.