ಹೊನ್ನಾಳಿ, ನ. 1- ಅಂತರರಾಷ್ಟ್ರೀಯ ಅಧ್ಯಾತ್ಮಿಕ ಸೇವಾ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹೊನ್ನಾಳಿ ಶಾಖೆ ವತಿಯಿಂದ 30 ದಿನಗಳ `ಶರಣರು ಕಂಡ ಶಿವ’ ಪ್ರವಚನ ಮಾಲೆ ಕಾರ್ಯಕ್ರಮವು ನಾಳೆ ದಿನಾಂಕ 2ರ ಗುರುವಾರದಿಂದ ಆರಂಭವಾಗಲಿದೆ.
ಹೊನ್ನಾಳಿಯ ದುರ್ಗಮ್ಮ ದೇವಸ್ಥಾನ ಹಿಂಭಾಗದ ಮಾರಿಕೊಪ್ಪ ರಸ್ತೆಯಲ್ಲಿರುವ ಮೈದಾನದಲ್ಲಿ ಈ ಕಾರ್ಯಕ್ರಮ ಏರ್ಪಾಡಾಗಿದ್ದು, ನಾಡಿದ್ದು ಗುರುವಾರ ಸಂಜೆ 5.30ಕ್ಕೆ ಹಿರೇಕಲ್ಮಠದ ಶ್ರೀ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ಈಶ್ವರೀಯ ವಿಶ್ವವಿದ್ಯಾಲಯ ಹುಬ್ಬಳ್ಳಿ ವಲಯದ ನಿರ್ದೇಶಕರೂ, ಅಧ್ಯಾತ್ಮಿಕ ಮಾಸ ಪತ್ರಿಕೆ `ವಿಶ್ವ ನವ ನಿರ್ಮಾಣ’ದ ಸಂಪಾದಕರೂ, ಬಾಲ ಬ್ರಹ್ಮಚಾರಿಗಳೂ, 84 ವರ್ಷದ ಮಹಾನ್ ತಪಸ್ವಿಗಳೂ ಆದ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋುಷಿ ಈ ಪ್ರವಚನವನ್ನು ನಡೆಸಿಕೊಡಲಿದ್ದಾರೆ.
ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಪುರಸಭೆ ಮಾಜಿ ಅಧ್ಯಕ್ಷರಾದ ಶ್ರೀಮತಿ ಸುಮಾ ಮಂಜುನಾಥ್, ಪಿಎಸ್ಐ ಸುನೀಲ್ಕುಮಾರ್, ಮಾರುತಿ ರೈಸ್ಮಿಲ್ ಮಾಲೀಕ ಉಮಾಪತಿ, ವೈದ್ಯಾಧಿಕಾರಿ ಡಾ. ಕೆಂಚಪ್ಪ, ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಮಹೇಶ್ವರಪ್ಪ, ಇನ್ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯ್ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿಗಳಾದ ಹೆಚ್. ಬಾಬು (ಹೊನ್ನಾಳಿ), ನವೀನ್ಕುಮಾರ್ (ಬಸವಾಪಟ್ಟಣ), ಓಂ ಗಣೇಶ್ ಟ್ರ್ಯಾಕ್ಟರ್ಸ್ ಮಾಲೀಕ ಹರ್ಷ ಕಾಮತ್, ಹೊಳಲೂರು ಮಾಜಿ ಪ್ರಧಾನರಾದ ಕೆ.ಜಿ. ನಿಂಗಪ್ಪ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ನಾಡಿದ್ದು ದಿನಾಂಕ 2 ರಿಂದ ಇದೇ ದಿನಾಂಕ 30ರವರೆಗೆ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ ಒಂದು ಗಂಟೆ ಕಾಲ ಬಸವರಾಜ ರಾಜಋುಷಿಯವರು ಪ್ರವಚನ ನಡೆಸಿಕೊಡಲಿದ್ದಾರೆ.
ಈ ಕಾರ್ಯಕ್ರಮದ ಪ್ರಯುಕ್ತ ನಾಳೆ ದಿನಾಂಕ 2ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಸದ್ಭಾವನಾ ಶಾಂತಿ ಯಾತ್ರೆ ಏರ್ಪಡಿಸಲಾಗಿದೆ. 108 ಕುಂಭಗಳು, ವೀರಗಾಸೆ, ಆನೆ ಅಂಬಾರಿಯಲ್ಲಿ ಶಿವಲಿಂಗದ ಮೆರವಣಿಗೆ ನಡೆಯಲಿದೆ.
ಶಾಂತಿ ಯಾತ್ರೆಯು ಹೊನ್ನಾಳಿ ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದಿಂದ ಆರಂಭಗೊಂಡು, ಸಭಾ ಕಾರ್ಯಕ್ರಮದ ವೇದಿಕೆ ತಲುಪಲಿದೆ.
ಇಲ್ಲಿನ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಇಂದು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಜ್ಯೋತಿ ಅವರು ವಿವರ ನೀಡಿ, ಸಾರ್ವಜನಿಕರು ಪ್ರವಚನದಲ್ಲಿ ಭಾಗವಹಿಸುವುದರ ಮೂಲಕ ಪರಮಾತ್ಮನ ಸಂದೇಶವನ್ನು ಅರಿತುಕೊಂಡು ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಕೇಳಿಕೊಂಡರು.
ಪ್ರವಚನದ ಮುಖ್ಯ ಉದ್ದೇಶ : ಅರಿತರೆ ಶರಣರು, ಮರೆತರೆ ಮಾನವರು ಎಂದರೇನು?, ಶರಣರಿಗೂ, ಶಿವನಿಗೂ ಇರುವ ಸಂಬಂಧವೇನು?, ಶಂಕರನಿಗೂ-ಪರಮಾತ್ಮ ಶಿವನಿಗೂ ಇರುವ ಸಂಬಂಧವೇನು?, ಜ್ಯೋತಿರ್ಲಿಂಗಗಳಿಗೂ-ಶಿವನಿಗೂ ಇರುವ ಸಂಬಂಧವೇನು?, ಸ್ಥಾವರ ಲಿಂಗಗಳಿಗೂ, ಅಂಗೈ ಮೇಲಿನ ಲಿಂಗಗಳಿಗೂ ಸಂಬಂಧವಿದೆಯೇ?, ಶರಣರು ಕಂಡ ಶಿವನಿಗೂ, ಪುರಾಣದ ಶಿವನಿಗೂ ಇರುವ ವ್ಯತ್ಯಾಸವೇನು? ಶರಣರು ಕಂಡ ಶಿವನಿಗೂ-ಬ್ರಹ್ಮ, ವಿಷ್ಣು, ಶಂಕರಾದಿ ಗೃಹಸ್ಥ ದೇವತೆಗಳಿಗಿರುವ ವ್ಯತ್ಯಾಸವೇನು? ಸೇರಿದಂತೆ ಇತರೆ ವಿಚಾರಗಳು ಪ್ರವಚನದ ಮುಖ್ಯಾಂಶಗಳಾಗಿವೆ.
ಜೀವ ಎಂದರೇನು? ಜೀವ, ನಿರ್ಜೀವಗಳ ವ್ಯತ್ಯಾಸವೇನು?, ನಾನು ಯಾರು? ನೀನು ಯಾರು? ಎಲ್ಲರೂ ಯಾರು?, ಪುರುಷ ಎಂದರೇನು? ಗಂಡು ಎಂದರೇನು? ಹೆಣ್ಣು ಎಂದರೇನು?, ಜನನ ಯಾರಿಗೆ? ಮರಣ ಯಾರಿಗೆ?, ನೀನು ಹುಟ್ಟಿ ಬರಲು ಕಾರಣವೇನು?, ನೀನು ಸತ್ತ ಮೇಲೆ ಎಲ್ಲಿಗೆ ಹೋಗುವೆ?, ಮಾನಸಿಕ ಶಾಂತಿ, ಮಾನಸಿಕ ಆರೋಗ್ಯ ಪಡೆಯುವ ವಿಧಾನವೇನು?, ಭಾರತದ ಭವಿಷ್ಯವೇನು? ವಿಶ್ವದ ಭವಿಷ್ಯವೇನು?, ಪಾಪ-ಪುಣ್ಯ, ಧರ್ಮ-ಕರ್ಮಗಳ ರಹಸ್ಯವೇನು?, ಪರಮಾತ್ಮ ಎಂದರೆ ಯಾರು? ಆತ ಎಲ್ಲಿದ್ದಾನೆ? ಆತನನ್ನು ನೋಡಲು ಸಾಧ್ಯವೇ? ಇತ್ಯಾದಿ ಪ್ರಶ್ನೆಗಳಿಗೆ ಪ್ರವಚನದಲ್ಲಿ ಉತ್ತರ ನೀಡಲಾಗುತ್ತದೆ.