ಶಿವಮೊಗ್ಗದಲ್ಲಿ ದೌರ್ಜನ್ಯಕ್ಕೆ ಒಳಗಾದವರ ಮೇಲೆ ಪ್ರಕರಣ

ಶಿವಮೊಗ್ಗದಲ್ಲಿ ದೌರ್ಜನ್ಯಕ್ಕೆ ಒಳಗಾದವರ ಮೇಲೆ ಪ್ರಕರಣ

ದಾವಣಗೆರೆ, ಅ. 6 – ಶಿವಮೊಗ್ಗದ ರಾಗಿಗುಡ್ಡ ಘಟನೆಗೆ ಸಂಬಂಧಿಸಿದಂತೆ ಮತಾಂಧರಂತೆ ವರ್ತನೆ ಮಾಡುವವರ ಮೇಲೆ ಕ್ರಮ‌ ಕೈಗೊಳ್ಳಬೇಕಿತ್ತು. ಆದರೆ, ರಾಜ್ಯ ಸರ್ಕಾರ ದೌರ್ಜನ್ಯಕ್ಕೊಳಗಾದವರ ಮೇಲೆ ಪ್ರಕರಣ ದಾಖಲಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಗಿಗುಡ್ಡ ಘಟನೆಯಲ್ಲಿ ಸರ್ಕಾರ ಮಾರ್ಜಾಲ ನ್ಯಾಯ ರೀತಿ ವರ್ತನೆ ಮಾಡುತ್ತಿದೆ. ಬೆಕ್ಕಿಗೆ ಪಂಚಾಯತಿ ಒಪ್ಪಿಸಿದರೆ ಏನು ಮಾಡಿತ್ತೊ ಅದೇ ರೀತಿ ಮಾಡುತ್ತಿದೆ ಎಂದು ಹೇಳಿದರು. ಇಬ್ಬರ ಮೇಲು‌ ಕೇಸ್ ಹಾಕಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಇದರಿಂದ ಮತಾಂಧತೆಗೆ ಕಾಂಗ್ರೆಸ್ ಕುಮ್ಮಕ್ಕು ನೀಡಿದಂತಾಗಿದೆ. ಔರಂಗಜೇಬ್‌ ಮತ್ತು ಟಿಪ್ಪು  ಸುಲ್ತಾನ್ ಪೋಟೋ ಹಾಕಿ ವೈಭವೀಕರಣ ಮಾಡಿರುವುದೇ ಗಲಭೆಗೆ ಕಾರಣ ಎಂದರು.

ಬಿಜೆಪಿ ನಕಲಿ‌ ಹಿಂದೂಗಳು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದ ಅವರು, ಹೌದು, ನಾವು ನಕಲಿ ಹಿಂದೂಗಳು ಅದಕ್ಕೆ ತಿಲಕ ಇಟ್ಟುಕೊಳ್ಳುತ್ತೇವೆ. ಕೇಸರಿ ಪೇಟ ತೊಟ್ಟುಕೊಳ್ಳುತ್ತೇವೆ ಎಂದರು.

ಅಸಲಿ ಹಿಂದೂಗಳು ತಿಲಕ‌ ಮತ್ತು ಪೇಟ ಧರಿಸಲು ಹಿಂಜರಿಯುತ್ತಾರೆ. ಟೋಪಿಯಾದರೆ ಇಷ್ಟಪಟ್ಟು ಹಾಕಿಕೊಳ್ಳುತ್ತಾರೆ. ಕೇಸರಿ ಅಂದರೆ ಇವರಿಗೆ ಆಗಲ್ಲ ಎಂದು ತರಾಟೆಗೆ ತೆಗೆದುಕೊಂಡರು. 

ಸಚಿವರ ಹೇಳಿಕೆಗಳಿಗೆ ಆಕ್ಷೇಪ : ಶಿವಮೊಗ್ಗ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರು ನೀಡಿರುವ ಹೇಳಿಕೆಗಳಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಆಕ್ಷೇಪಿಸಿದ್ದಾರೆ.

ಸಚಿವರಾದ ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್ ಹಾಗೂ ರಾಮಲಿಂಗಾ ರೆಡ್ಡಿ ಅವರು ಸತ್ಯಾಸತ್ಯತೆ ತಿಳಿದು ಮಾತನಾಡ ಬೇಕು. ಭಾರತ ದೇಶದ ಬಾವುಟವನ್ನೇ ತಿರುಚಿ ಹಸಿರುಮಯ ಮಾಡಿದ್ದಾರೆ. ಖಡ್ಗವನ್ನು ಪ್ರದ ರ್ಶನ ಮಾಡಿದ್ದಾರೆ. ಇದನ್ನು ಸಚಿವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಈ ಬಗ್ಗೆ ಸರಿಯಾದ ನ್ಯಾಯಾಂಗ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಸಿದ್ದೇಶ್ವರ ಒತ್ತಾಯಿಸಿದರು.

error: Content is protected !!