ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ, ಧರ್ಮ ಸಭೆಯಲ್ಲಿ ಹಿರೇಕಲ್ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ
ನ್ಯಾಮತಿ, ಜ.3- ಪರಮಾತ್ಮ ಸರ್ವವ್ಯಾಪಿಯಾ ಗಿದ್ದಾನೆ. ಹಾಗಾಗಿ ಮನುಷ್ಯ ಸದಾ ಒಳಿತನ್ನೇ ಯೋಚಿಸುತ್ತಾ ಒಳ್ಳೆಯ ಜೀವನ ರೂಪಿಸಿಕೊಳ್ಳ ಬೇಕು ಎಂದು ಹಿರೇಕಲ್ಮಠದ ಡಾ. ಚನ್ನಮಲ್ಲಿ ಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಕುರುವ ಗ್ರಾಮದ ಆಂಜನೇಯ ಸ್ವಾಮಿ ಹಾಗೂ ಬಸವೇಶ್ವರ ಸ್ವಾಮಿಗಳ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಧರ್ಮ ಸಭೆಯಲ್ಲಿ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ದೇವರ ಸಮಕ್ಷಮದಲ್ಲಿ ಬದುಕು ಕಟ್ಟಿಕೊ ಳ್ಳುವ ಸದುದ್ದೇಶದಿಂದ ದೇವಸ್ಥಾನಗಳು ನಿರ್ಮಾಣ ಆಗುತ್ತಿವೆ. ಪ್ರಸ್ತುತ ಮಹಿಳೆಯರ ಸಬಲೀಕರಣ ಕ್ಕಾಗಿ ಸರ್ಕಾರ ಹೆಚ್ಚಿನ ಸವಲತ್ತನ್ನು ನಾರಿಯರಿಗೆ ನೀಡುತ್ತಿರುವುದು ಶ್ಲ್ಯಾಘನೀಯ ಎಂದರು.
ಪಾಲಕರು, ಹೆಣ್ಣು ಮಕ್ಕಳ ಬಗ್ಗೆ ಅಷ್ಟೇ ಹೆಚ್ಚಿನ ಕಾಳಜಿ ವಹಿಸದೇ, ಗಂಡು ಮಕ್ಕಳ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕು. ಅವರ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಗೋವಿನಕೋವಿ ಹಿರೇಮಠದ ಶಿವಯೋಗಿ ಮಹಾಲಿಂಗ ಸ್ವಾಮೀಜಿ ಮಾತನಾಡಿ, ಪಟ್ಟಾಧಿಕಾರವಾಗಿ ಒಂದು ವರ್ಷವಾಗಿದ್ದು, ಪಟ್ಟಾಧಿಕಾರದ ನಂತರ ಕಳಸಾರೋಹಣ ನೋಡಬೇಕೆಂಬ ಪ್ರತೀತಿಯಿದೆ. ಮೊದಲು ರಾಂಪುರ ಬೃಹನ್ಮಠದ ರಥೋತ್ಸವದ ಕಳಸ ದರ್ಶನದ ಭಾಗ್ಯ ಒದಗಿತ್ತು. ಇದೀಗ ಈ ಗ್ರಾಮದ ಕಳಸಾರೋಹಣ ಕಣ್ತುಂಬಿ ಕೊಳ್ಳುವಂತಾಯಿತು ಎಂದು ಧನ್ಯತಾಭಾವ ವ್ಯಕ್ತಪಡಿಸಿದರು.
ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ತುಂಗಭದ್ರಾ ನದಿಯ ಕೃಪೆಯಿಂದಾಗಿ ಎಂತಹ ಬರಗಾಲ ಬಂದರೂ ರಾಜ್ಯದ ಎಲ್ಲಾ ತಾಲ್ಲೂಕುಗಳಿಗಿಂತ ಹೊನ್ನಾಳಿ-ನ್ಯಾಮತಿ ತಾಲ್ಲೂಕಿನಲ್ಲಿ ನೆಮ್ಮದಿ ಜೀವನ ನಡೆಸುವ ನಾವುಗಳೇ ಪುಣ್ಯವಂತರು ಎಂದರು.
ಈ ವರೆಗೂ 150 ಕೆರೆಗಳಿಗೆ ನೀರು ತುಂಬಿಸುವ ವ್ಯವಸ್ಥೆಯಾಗಿದ್ದಲ್ಲದೇ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಬಹುತೇಕ ಹಳ್ಳಿಗಳಿಗೆ ಕುಡಿಯುವ ನೀರನ್ನು ಪೂರೈಸಲಾಗಿದೆ ಎಂದು ತಿಳಿಸಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲೂ ಧರ್ಮ ಬಹಳ ಮುಖ್ಯ. ಧರ್ಮದ ತಳಹದಿಯ ಮೇಲೆ ಜೀವನ ರೂಪಿಸಿಕೊಂಡಾಗ ಏನನ್ನಾದರೂ ಸಾಧಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಕುರುವ ಪರಮೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ,ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಶಾಸಕ ಡಿ.ಜಿ. ಶಾಂತನಗೌಡ ಮತ್ತು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಸರ್ಕಾರದಿಂದ ಅನುದಾನ ಕೊಡಿಸಿದ್ದನ್ನು ಸ್ಮರಿಸಿದರು.
ಈ ವೇಳೆ ರಾಂಪುರ ಬೃಹನ್ಮಠದ ಶಿವಕುಮಾರ ಶಿವಾಚಾರ್ಯ ಶ್ರೀಗಳು, ದಿಡಗೂರಿನ ಅಣ್ಣಪ್ಪಸ್ವಾಮಿ, ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಹೆಚ್.ವಿ. ಸತೀಶ್, ಮಹೇಶ್ವರಪ್ಪ, ಪಾಲಾಕ್ಷಪ್ಪ, ಸುರೇಶಪ್ಪ, ಲಿಂಗಮೂರ್ತಪ್ಪ, ಗ್ರಾ.ಪಂ. ಸದಸ್ಯ ದಾನೇಶ್ ಮತ್ತು ಇತರರು ಉಪಸ್ಥಿತರಿದ್ದರು.