ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ‌

ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ‌

ಸಾವಿರಾರು ಕಾರ್ಯಕರ್ತೆಯರು ಬೆಂಗಳೂರಿಗೆ ಲಗ್ಗೆ, ಚಳಿಯನ್ನೂ ಲೆಕ್ಕಿಸದೇ ಹೋರಾಟದಲ್ಲಿ ಭಾಗಿ

ದಾವಣಗೆರೆ, ಫೆ. 3- ಗೌರವ ಧನ ಹೆಚ್ಚಳ ಮತ್ತು ಆರನೇ ಗ್ಯಾರಂಟಿ ಜಾರಿಗೆ ಒತ್ತಾಯಿಸಿ, ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ ಸಂಘಟನೆಯಿಂದ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭವಾಗಿದೆ.

ಸತ್ಯಾಗ್ರಹ ಚಳವಳಿಯಲ್ಲಿ ದಾವಣಗೆರೆ ಜಿಲ್ಲೆಯಿಂದಲೂ ಸುಮಾರು 2000 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ರಾಜ್ಯ ಕಾರ್ಯದರ್ಶಿ ಆವರಗೆರೆ ಚಂದ್ರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಮಲ್ಲಮ್ಮ ನೇತೃತ್ವದಲ್ಲಿ ಭಾಗವಹಿಸಿ ಹೋರಾಟಕ್ಕೆ ಬಲ ತುಂಬಿದರು.

ಗೌರವ ಧನ ಹೆಚ್ಚಿಸುವುದು ಸೇರಿದಂತೆ, ತಮ್ಮ ಇತರೆ ಬೇಡಿಕೆಗಳಾದ ಸುಪ್ರೀಂಕೋರ್ಟ್ ತೀರ್ಪಿನಂತೆ ನಿವೃತ್ತರಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಬೇಕು, ಗುಜರಾತ್ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀಡಿರುವ ನಿರ್ದೇಶನದಂತೆ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸೇವೆಯನ್ನು ‘ನಾಗರಿಕ ಸೇವೆ’ ಎಂಬುದಾಗಿ ಪರಿಗಣಿಸಿ, ಕನಿಷ್ಠ ವೇತನ ನಿಗದಿಪಡಿಸಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ, ಈ ಹೋರಾಟ ನಡೆಯುತ್ತಿದೆ. 

ಮುಂಬರುವ ರಾಜ್ಯ ಬಜೆಟ್‌ನಲ್ಲಿ ಕನಿಷ್ಠ ವೇತನ ನಿಗದಿಪಡಿಸಬೇಕು, ರಾಜ್ಯ ಸರ್ಕಾರದ ಆರನೇ ಗ್ಯಾರಂಟಿಯಾಗಿ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಕಾರ್ಯಕರ್ತೆಯರಿಗೆ ಮಾಸಿಕ 15000 ರೂ. ಮತ್ತು ಸಹಾಯಕಿಯರಿಗೆ ಮಾಸಿಕ 10000 ರೂ. ಗೌರವ ಧನ ನೀಡಬೇಕು, ಗ್ರಾಚ್ಯುಟಿ ಸೌಲಭ್ಯ ಜಾರಿಗೊಳಿಸಬೇಕು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕ್ರಮವಾಗಿ ‘ಸಿ’ ಮತ್ತು ‘ಡಿ’ ದರ್ಜೆ ನೌಕರರ ಸ್ಥಾನಮಾನ ನೀಡಬೇಕು ಎಂದು ಹೋರಾಟಗಾರರು ಸರಕಾರವನ್ನು ಆಗ್ರಹಿಸಿದರು. 

ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್, ಅಂಗನವಾಡಿ ಫೆಡರೇಶನ್‌ನ ರಾಜ್ಯಾಧ್ಯಕ್ಷ ಬಿ.ಅಮ್ಜದ್, ಪ್ರಧಾನ ಕಾರ್ಯದರ್ಶಿ ಜಯಮ್ಮ ಮತ್ತಿತರರು ಹೋರಾಟದ ಮುಂದಾಳತ್ವ ವಹಿಸಿದ್ದರು.

error: Content is protected !!