ಹರಿಹರದ ಹಿರಿಯ ಸಾಹಿತಿ ಕಲೀಂಬಾಷ ನಿಧನ

ಹರಿಹರದ ಹಿರಿಯ ಸಾಹಿತಿ ಕಲೀಂಬಾಷ ನಿಧನ

ಹರಿಹರ, ಫೆ. 3 – ಇಲ್ಲಿನ ವಿದ್ಯಾನಗರದ ನಿವಾಸಿ, ಹಿರಿಯ ಸಾಹಿತಿ ಜೆ. ಕಲೀಂಬಾಷ (74) ಅವರು ಸೋಮ ವಾರ ಮಧ್ಯಾಹ್ನ 1.30ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಪುತ್ರಿಯರನ್ನು ಅಗಲಿದ್ದಾರೆ. ಇಂದು ರಾತ್ರಿ 9.30ಕ್ಕೆ ಮೃತರ ಅಂತ್ಯ ಸಂಸ್ಕಾರವನ್ನು ನಗರದ ಖಬರಸ್ತಾನ್‍ನಲ್ಲಿ ನೆರವೇರಿಸಲಾಯಿತು.

ಶಿಕ್ಷಣ ಇಲಾಖೆಯಲ್ಲಿ ಕನ್ನಡ ವಿಷಯ ಪರಿವೀಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಂಡಾಯ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್, ಮುಸ್ಲಿಂ ಚಿಂತಕರ ಚಾವಡಿ ಸೇರಿದಂತೆ ವಿವಿಧ ಸಾಹಿತ್ಯ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದರು.

ಕೃತಿಗಳು: ಶಾಹೀನಾ ಮತ್ತು ಇತರೆ ಕವಿತೆಗಳು, ಗುಜರಾತಿನಲ್ಲಿ ಗಾಂಧಿ ಆತ್ಮ, ಮನೆಯಲ್ಲಿ ಬೆಳದಿಂಗಳು, ಕಾಡ್ತಾವ ಮನದಾಗ, ಖುರಾನಿನ ಆಯ್ದ ಸೂಕ್ತಿಗಳು ಕೃತಿಗಳನ್ನು ರಚಿಸಿದ್ದ ಅವರು ಭಾರತ ಸ್ವಾತಂತ್ರ್ಯ ಹುತಾತ್ಮ ಕವಿ ಅಶ್ಫಾಖ್ ಉಲ್ಲಾ ಖಾನ್ ಮತ್ತು ಕ್ರಾಂತಿಕಾರಿ ಸ್ವಾತಂತ್ರ್ಯ ಹುತಾತ್ಮ ಕವಿ ರಾಮ್ ಪ್ರಸಾದ್ ಬಿಸ್ಮಿಲ್ ಎಂಬ ಕೃತಿಗಳನ್ನು ಹಿಂದಿ ಭಾಷೆಯಿಂದ ಕನ್ನಡಕ್ಕೆ ಭಾಷಾಂತರಿಸಿದ್ದರು.

ಪ್ರಶಸ್ತಿಗಳು: ಸಂಕ್ರಮಣ ಸಾಹಿತ್ಯ ಬಹುಮಾನ, ಗೊರೂರು, ರನ್ನ ಸಾಹಿತ್ಯ, ತಾಲ್ಲೂಕು ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು. ರಾಯಚೂರಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಈಚೆಗೆ ಆಯೋಜಿಸಿದ್ದ ಗೋಕಾಕ್ ಚಳವಳಿ ಹಿನ್ನೋಟ-ಮುನ್ನೋಟ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸನ್ಮಾನಿಸಿದ್ದರು.

ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಜಿಲ್ಲಾ ಗೌರವ ಕಾರ್ಯದರ್ಶಿ ಜಯಪ್ಪ, ಸಂಘಟನಾ ಕಾರ್ಯದರ್ಶಿ ಜಗದೀಶ್ ಕೂಲಂಬಿ, ತಾಲ್ಲೂಕು ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ತಾಲ್ಲೂಕು ಗೌರವ ಕಾರ್ಯದರ್ಶಿ ಬಿ.ಬಿ. ರೇವಣ್ಣ ನಾಯ್ಕ್, ಚಿದಾನಂದ ಕಂಚಿಕೇರಿ, ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ, ಜಿಗಳಿ ಪ್ರಕಾಶ್, ಸುಮತಿ ಜಯಪ್ಪ, ಪ್ರೊ. ಎ.ಬಿ. ರಾಮಚಂದ್ರಪ್ಪ, ಎಚ್. ನಿಜಗುಣ, ಎ. ರಿಯಾಜ್ ಅಹ್ಮದ್, ಎನ್.ಇ. ಸುರೇಶ್ ಸ್ವಾಮಿ, ಎಚ್.ಕೆ. ಕೊಟ್ರಪ್ಪ, ಮಾಜಿ ಶಾಸಕ ಎಸ್. ರಾಮಪ್ಪ, ನಂದಿಗಾವಿ ಶ್ರೀನಿವಾಸ್, ಬಿ. ರೇವಣಸಿದ್ದಪ್ಪ ಸೇರಿದಂತೆ ಇತರೆ ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.

error: Content is protected !!