ಪುರಾಣ ಪ್ರವಚನ ಸಪ್ತಾಹದಲ್ಲಿ ಹಿರಿಯ ಪ್ರವಚನಕಾರ ಗೋಪಾಲಚಾರ್ ಮಣ್ಣೂರ್
ದಾವಣಗೆರೆ, ಜ.1- ಶ್ರೀಮದ್ ಭಾಗವತ ಮಹಾ ಪುರಾಣಗಳಲ್ಲಿ ಜ್ಞಾನ ಮತ್ತು ಭಕ್ತಿಯ ಎರಡೂ ವಿಚಾರಗಳು ಸಮರ್ಥವಾಗಿ ಮೂಡಿ ಬಂದಿವೆ ಎಂದು ಹಿರಿಯ ಪ್ರವಚನಕಾರ ಗೋಪಾಚಾರ್ ಮಣ್ಣೂರ್ ಹೇಳಿದರು.
ನಗರದ ಆದರ್ಶ ಯೋಗ ಪ್ರತಿಷ್ಠಾನದ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಶ್ರೀ ಕುದ್ದುಂಜಿ ಮಹಾಬಲರಾವ್ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಶ್ರೀಮದ್ ಭಾಗವತ ಪುರಾಣ ಪ್ರವಚನ ಸಪ್ತಾಹದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಅಲ್ಲದೇ ಇದರಲ್ಲಿ ವೇದ ವೇದಾಂತ ಗಳ ಸರ್ವಸ್ವವೂ ಅಡಗಿ, ವೇದವ್ಯಾಸರು ರಚಿಸಿದ 18 ಪುರಾಣಗಳಲ್ಲೇ ಭಾಗವತವು ಅತ್ಯಂತ ಶ್ರೇಷ್ಠವಾದುದು ಎಂದು ಅಭಿ ಪ್ರಾಯಪಟ್ಟರು.
ಸಜ್ಜನರ ಹಾಗೂ ಭಗವತ್ ಭಕ್ತರ ಅನುಗ್ರಹಕ್ಕಾಗಿ ರಚಿತವಾದ ಅತ್ಯಂತ ಶ್ರೇಷ್ಠವಾದ ಪುರಾಣವೆನಿಸಿದೆ. ಇದರ ಶ್ರವಣ ಮಾತ್ರದಿಂದ ಮನುಷ್ಯರು ಎಲ್ಲಾ ವಿಧವಾದ ಪಾಪಗಳಿಂದ ಮುಕ್ತರಾಗುತ್ತಾರೆ. ಅಷ್ಟೇ ಅಲ್ಲದೇ ಜೀವನದಲ್ಲಿ ತಮಗೆ ಅಪೇಕ್ಷಿತವಾದ ಎಲ್ಲಾ ಆಸೆಗಳನ್ನು ಪೂರೈಸಿಕೊಂಡು ಮುಂದೆ ಉತ್ತಮ ಜೀವನ ಸಾಗಿಸಬಹುದಾಗಿವೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕುಟುಂಬ ಪ್ರಬೋಧನಾ ವರ್ಗದ ಸಂಚಾಲಕಿ ಗೀತಕ್ಕ ಮತ್ತು ಸಂಗಡಿಗರು ದೇವರ ನಾಮ ಹಾಡಿದರು. ಸಂವೇದಿತಾ ಪ್ರಾರ್ಥನಾ ಶ್ಲೋಕ ಹಾಡಿದರು. ಯೋಗ ತಜ್ಞ ರಾಘವೇಂದ್ರ ಗುರೂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಪ್ರದೀಪ್, ಮಂಜುನಾಥ್, ಪ್ರದೀಪ್, ರೇಖಾ ಕಲ್ಲೇಶ್, ಸಾವಿತ್ರಮ್ಮ, ಶಾಂತಮ್ಮ, ಯೋಗ ವಿದ್ಯಾರ್ಥಿಗಳಾದ ಕಾವ್ಯ, ರಾಹುಲ್ ವಿ.ಕೆ. ಇತರರು ಇದ್ದರು.