ವಿದ್ಯಾರ್ಥಿಗಳ ಪರದಾಟ : ಬಸ್ ನಿಲುಗಡೆಗೆ ಆಗ್ರಹ

ವಿದ್ಯಾರ್ಥಿಗಳ ಪರದಾಟ : ಬಸ್ ನಿಲುಗಡೆಗೆ ಆಗ್ರಹ

ಹರಪನಹಳ್ಳಿ. ಸೆ. 4 – ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳನ್ನು ನಿಲುಗಡೆ ಮಾಡಲು ಒತ್ತಾಯಿಸಿ ಜಿಟ್ಟಿನಕಟ್ಟೆ, ತಲವಾಗಲು, ಗುಂಡಗತ್ತಿ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹರಪನಹಳ್ಳಿ ಬೆಂಡಿಗೇರಿ ಕಂಚಿಕೇರಿ ದಾವಣಗೆರೆ ಮುಖ್ಯರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.

ಏಕಾಏಕಿ ಪ್ರತಿಭಟನೆಯ ವಿಷಯ ಅರಿತು ಸ್ಥಳಕ್ಕಾಗಮಿಸಿದ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಲು ಮುಂದಾ ದರು. ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಪ್ರತಿಭಟನೆಯಿಂದ ಜಿಲ್ಲಾ ಮುಖ್ಯರಸ್ತೆ ಯಲ್ಲಿ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತ ಗೊಂಡಿತ್ತು. ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡಿದರು.

ಈ ವೇಳೆ ಉಪನ್ಯಾಸಕ ಹೆಚ್. ಕೊಟ್ರೇಶ ಮಾತನಾಡಿ, ಜಿಟ್ಟಿನಕಟ್ಟೆ, ತಲವಾಗಲು, ಗುಂಡಗತ್ತಿಯಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಹರಪನಹಳ್ಳಿ ಹಾಗೂ ದಾವಣಗೆರೆಗೆ ವಿದ್ಯಾಭ್ಯಾಸಕ್ಕಾಗಿ ಓಡಾಡುತ್ತಿದ್ದಾರೆ ಹಾಗೂ ಸಾರ್ವಜನಿಕರು ತಾಲ್ಲೂಕು ಮುಖ್ಯ ಕೇಂದ್ರವಾದ ಹರಪನಹಳ್ಳಿಗೆ ತೆರಳಲು ಬಸ್ ನಿಲುಗಡೆ ಇಲ್ಲದೇ ತೊಂದರೆಯಾಗುತ್ತಿದ್ದು, ಈ ಕೂಡಲೇ ಬಸ್ ನಿಲುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಗಿರಜ್ಜಿ ನಾಗರಾಜ್, ಯುವ ಮುಖಂಡ ಬಾಲೇನಹಳ್ಳಿ ಕೆಂಚನ ಗೌಡ ಮಾತನಾಡಿ, ತಾಲ್ಲೂಕಿನ ಬೆಂಡಿಗೇರಿ, ಕಂಚಿಕೇರಿ, ಹರಪನಹಳ್ಳಿ, ದಾವಣಗೆರೆಗೆ ತೆರಳುವ ಎಲ್ಲಾ ಬಸ್‌ಗಳನ್ನು ನಿಲುಗಡೆ ಮಾಡಬೇಕು. ವಿದ್ಯಾರ್ಥಿಗಳ ಅನುಕೂಲ ಕ್ಕಾಗಿ ಸಾರಿಗೆ ಸಂಸ್ಥೆ ಹಣ ಪಡೆದು ಬಸ್‌ ಪಾಸ್ ನೀಡಿರುತ್ತದೆ. ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರು ಬಸ್‌ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ನಿರ್ಲಕ್ಷ್ಯ ಮಾಡಬಾ ರದು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಉಚಿತವಾಗಿ ಬಸ್‌ಗಳಲ್ಲಿ ತಿರುಗಾಡುವುದಿಲ್ಲ. ಸಾರಿಗೆ ಸಂಸ್ಥೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಮನೋಭಾವ ಬದಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ಸ್ಥಳಕ್ಕಾಗಮಿಸಿದ ಸಾರಿಗೆ ಇಲಾಖೆ ವ್ಯವಸ್ಥಾಪಕರಾದ ಮಂಜುಳಾ ಹಾಗೂ ಸಂಚಾರಿ ವ್ಯವಸ್ಥಾಪಕರಾದ ಎಂ. ಶಂಕರ್ ಮತ್ತು ಸಂಚಾರಿ ನಿಯಂತ್ರಕರಾದ ಎಂ. ಮಂಜುನಾಥ್ ಮಾತನಾಡಿ, ಹರಪನಹಳ್ಳಿ ಘಟಕದಿಂದ ವೇಗದೂತ ಸೇರಿದಂತೆ ಸಾಮಾನ್ಯ ಬಸ್‌ಗಳನ್ನು ನಾಳೆಯಿಂದಲೇ ನಿಲುಗಡೆ ಮಾಡುತ್ತೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಗ್ರಾ.ಪಂ. ಸದಸ್ಯ ರಾದ ಹೆಚ್. ಹನುಮಂತಪ್ಪ, ಓಬಪ್ಪ, ಮುಖಂಡರಾದ ಮಲ್ಲಿಕಾರ್ಜುನ, ನಂದಿಕೇಶವ ತಲುವಾಗಲು, ಪ್ರಕಾಶ್‌ಗೌಡ, ಹೆಚ್. ರೇವಣಸಿದ್ದಪ್ಪ,  ಸಂಗಮ್, ಜಗದೀಶ್, ಲೋಹಿತಪ್ಪ, ರೇಣುಕರಾಜ್, ಅವಿನಾಶ್, ಅಂಬರೀಶ್, ಪ್ರತಾಪ್, ಚಂದ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!