ಮಾನ್ಯರೇ,
ದಾವಣಗೆರೆ ನಗರದಲ್ಲಿ ಯಾರನ್ನೇ ಕೇಳಿದರೂ ತನಗೆ ಅಥವಾ ತನ್ನ ಮನೆಯಲ್ಲಿ ಇರುವ ಸದಸ್ಯರಿಗೆ ಆರೋಗ್ಯ ಸರಿ ಇಲ್ಲ ಎಂದು ಹೇಳುತ್ತಾರೆ. ಅಷ್ಟರ ಮಟ್ಟಿಗೆ ಟೈಫಾಯ್ಡ್, ಡೆಂಗ್ಯೂ ಜ್ವರದ ಸಮಸ್ಯೆಗಳು ಕಾಣುತ್ತಿವೆ. ಇದಕ್ಕೆ ಕಾರಣ ಏನು? ನಗರದಲ್ಲಿ ಸ್ವಚ್ಛತೆಗೆ ಕಡಿವಾಣ ಬಿದ್ದಿದೆಯೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಇದರ ನಡುವೆ ಜನಸಾಮಾನ್ಯರು ರಸ್ತೆಯ ಮೇಲೆ ಮನಸ್ಸಿಗೆ ಬಂದ ಹಾಗೇ ಗುಟುಕ ತಿಂದು ಉಗುಳುವುದು, ಕಫವನ್ನು ಉಗಿಯುವುದು ಮಾಡಬಾರದು. ಇದರಿಂದ ಕಾಯಿಲೆಗಳು ಹರಡಲು ಒಂದು ಕಾರಣವಾಗಬಹುದು. ಸಣ್ಣ ಸಣ್ಣ ಗಾಡಿ ಹೋಟೆಲ್ ಪರಿಸರದಲ್ಲಿ ಕುಡಿಯುವ ನೀರಿನ ಲೋಟಗಳನ್ನು ಬಾಯಿಗೆ ಕಚ್ಚಿ ಕುಡಿಯುವುದನ್ನು ಮಾಡದ ಹಾಗೇ ಕ್ರಮ ವಹಿಸಬೇಕು. ಅಂತಹ ಪರಿಸರದಲ್ಲಿ ತುಸು ಗಮನಿಸಿದರೆ, ಗ್ರಾಹಕರು ಒಂದೇ ಲೋಟವನ್ನು ಬಳಸಿದ ಮೇಲೆ ಮತ್ತೆ ಮತ್ತೆ ಚೆನ್ನಾಗಿ ತೊಳೆಯದೇ ಬಳಸಲಾಗುತ್ತಿರುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ಒಂದಿಷ್ಟು ಆಹಾರ ಇಲಾಖೆ ಅಧಿಕಾರಿಗಳು ಎಲ್ಲಾ ಹೋಟೆಲ್ ಮಾಲೀಕರಿಗೆ ಇದರ ಬಗ್ಗೆ ತಿಳಿಸಿ, ಸ್ವಚ್ಛತೆ ಕಡೆ ಗಮನ ಹರಿಸಲು ಮನವರಿಕೆ ಮಾಡಬೇಕು.
ದಿನಪತ್ರಿಕೆಗಳ ಮೇಲೆ ಎಣ್ಣೆ ತಿಂಡಿ ಖಾದ್ಯಗಳನ್ನು ಇರಿಸುವುದು, ಅದರ ಮೇಲೆಯೇ ಪದಾರ್ಥಗಳನ್ನು ಇರಿಸಿ ಕೊಡುವುದನ್ನು ನಿಷೇಧಿಸಬೇಕು. ಹಾಗಾಗಿ ಸಾರ್ವಜನಿಕರು ಸಾರ್ವಜನಿಕ ಎಲ್ಲೆಂದರಲ್ಲಿ ಉಗುಳುವುದನ್ನು ಬಿಡಬೇಕು, ಆಹಾರ ಇಲಾಖೆ ಅಧಿಕಾರಿಗಳು ಒಂದಿಷ್ಟು ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶಿಸ್ತಿನ ಕ್ರಮವಹಿಸಬೇಕು.
– ವೈ.ವಿ.ಭಟ್, ವಕೀಲರು, ದಾವಣಗೆರೆ.