ಕುಂಬಳೂರು : ಮಕ್ಕಳಿಗೆ ಆತ್ಮವಿಶ್ವಾಸ ತುಂಬಿದ ಶಾರದೇಶಾನಂದ ಸ್ವಾಮೀಜಿ
ಮಲೇಬೆನ್ನೂರು, ಜು. 24 – ನಿಮ್ಮ ಬಗ್ಗೆ ನಿಮಗೇ ಹೆಮ್ಮೆ ಅನಿಸುವಂತೆ ನಡೆದುಕೊಳ್ಳಿ ಓದಿ, ಸಾಧಿಸಿ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಶರಣು ಶರಣಾರ್ಥಿ ಆತ್ಮವಿಶ್ವಾಸ ತುಂಬಿದರು.
ಅವರು ಸೋಮವಾರ ಕುಂಬಳೂರು ಗ್ರಾಮದ ಹೊರವಲಯದಲ್ಲಿರುವ ಚಿಟ್ರಕ್ಕಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಹಮ್ಮಿಕೊಂಡಿದ್ದ ಗುರು ಪೂರ್ಣಿಮಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಕ್ಕಳು ನಿತ್ಯ ಸೂರ್ಯ ಉದಯಿಸುವ ಮೊದಲೇ ಎದ್ದು ಸೂರ್ಯನಿಗೆ ನಮಸ್ಕಾರ ಮಾಡಿ, ನಂತರ ದೇವರಿಗೆ, ತಂದೆ- ತಾಯಿಗಳಿಗೆ ನಮಸ್ಕಾರ ಮಾಡಿ, 10 ನಿಮಿಷ ಧ್ಯಾನ ಮಾಡಬೇಕು. ತದನಂತರ ಓದು, ಬರೆಯುವ ಕೆಲಸ ಮಾಡಬೇಕು. ನಿಮ್ಮ ಬಗ್ಗೆ ನಿಮಗೇ ಹೆಮ್ಮೆ ಬರುವಂತೆ ಎಲ್ಲರನ್ನೂ ಪ್ರೀತಿಸಿ, ಗೌರವಿಸಿ, ನಡೆ- ನುಡಿಯನ್ನು ಸುಂದರವಾಗಿಸಿಕೊಂಡು, ಚೆನ್ನಾಗಿ ಓದಿದರೆ ಬದುಕಿನಲ್ಲಿ ಅದ್ಭುತ ಸಾಧನೆ ಮಾಡುತ್ತೀರಿ ಎಂದು ಸ್ವಾಮೀಜಿ ಮಕ್ಕಳನ್ನು ಹುರಿದುಂಬಿಸಿದರು.
ಸಣ್ಣ- ಸಣ್ಣ ಸಾಧನೆಗಳನ್ನು ಮೊದಲು ಮಾಡಿ, ನಂತರ ಸಣ್ಣ ಸಾಧನೆಗಳೇ ದೊಡ್ಡ ಸಾಧನೆಗೆ ಸ್ಪೂರ್ತಿ ಆಗುತ್ತವೆ.
ಮಾಡುವ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ, ಮನಸ್ಸನ್ನು ಸ್ವಚ್ಛ ಹಾಗೂ ಸುಂದರವಾಗಿಟ್ಟು ಕೊಳ್ಳಿ ಎಂದ ಸ್ವಾಮೀಜಿಯವರು, ನೀವು ಟಿವಿ ಯಲ್ಲಿ ಬರುವವರೆಗೂ ಟಿವಿ ನೋಡಬೇಡಿ.
ಟಿವಿಯಲ್ಲಿ ಬರುವವರು ಟಿವಿಯನ್ನು ನೋಡುವುದಿಲ್ಲ ಎಂದು ಮಕ್ಕಳನ್ನು ಎಚ್ಚರಿಸಿದರು.
ಸಾಧನೆಗೆ ಧೈರ್ಯ, ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಸಂಗ್ರಹಿಸುವ ಸಾಮರ್ಥ್ಯ ಬಹಳ ಮುಖ್ಯ ಎಂದು ಮಕ್ಕಳಿಗೆ ಕಥೆಗಳ ಮೂಲಕ ಅರ್ಥವಾಗುವ ರೀತಿಯಲ್ಲಿ ಸ್ವಾಮೀಜಿ ಹೇಳಿ ಮಕ್ಕಳ ಮನಸ್ಸು ಗೆದ್ದರು.
ಶಾಲೆ ಪ್ರಾಚಾರ್ಯ ಚೇತನ್ ಕುಮಾರ್, ಉಪಪ್ರಾಚಾರ್ಯರಾದ ಅಖಿಲೇಶ್ವರಿ , ಪತ್ರಕರ್ತ ಜಿಗಳಿ ಪ್ರಕಾಶ್ ವೇದಿಕೆಯಲ್ಲಿದ್ದರು.
ಚಿಟ್ಟಕ್ಕಿ ಶಾಲೆಯ ಆಡಳಿತಾಧಿಕಾರಿ ಎಸ್ .ಕೆ. ಕುಮಾರ್ ಸ್ವಾಗತಿಸಿದರು.
ಶಿಕ್ಷಕ ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರೆ, ಶಿಕ್ಷಕ ಬಿ. ಎಲ್. ಗಂಗಾಧರ್ ನಿಟ್ಟೂರು ವಂದಿಸಿದರು