ರಾಜಗೊಂಡನಹಳ್ಳಿಯಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಡಾ. ಟಿ.ಎನ್. ದೇವರಾಜ್
ಚನ್ನಗಿರಿ,ಜು.18- ಭವಿಷ್ಯದಲ್ಲಿ ಸುಸ್ಥಿರ ಕೃಷಿಗೆ ಕೃಷಿ ಅರಣ್ಯ ಪದ್ಧತಿಯು ಮಹತ್ವದ ಪಾತ್ರವಹಿಸುತ್ತದೆ ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್ ಹೇಳಿದರು.
ಚನ್ನಗಿರಿ ತಾಲ್ಲೂಕು ರಾಜಗೊಂಡನಹಳ್ಳಿ ತಾಂಡಾದಲ್ಲಿ ಆಯೋಜಿಸಿದ್ದ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ 96ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತೀ ವರ್ಷವೂ ಒಂದಿಲ್ಲೊಂದು ಹವಾಮಾನ ವೈಪರೀತ್ಯಕ್ಕೆ ಕೃಷಿ ಕ್ಷೇತ್ರ ತೊಂದರೆಗೀಡಾಗುತ್ತಿದ್ದು, ಕೃಷಿ ಅರಣ್ಯ ಪದ್ಧತಿಯು ಈ ವೈಪರೀತ್ಯಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಹೊಂದಿದೆ ಹಾಗೂ ರೈತರಿಗೆ ಸುಸ್ಥಿರ ಆದಾಯ ತರುವ ಸಾಮರ್ಥ್ಯ ಹೊಂದಿದೆ ಎಂದರು.
ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರದ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ತಾಂತ್ರಿಕತೆಗಳು ಮಹತ್ತರ ಪಾತ್ರ ವಹಿಸಿದ್ದು, ಕಳೆದ 96 ವರ್ಷಗಳ ಇದರ ಕೊಡುಗೆ ಅವಿಸ್ಮರಣೀಯ ಎಂದು ತಿಳಿಸಿದರು.
ಚನ್ನಗಿರಿ ತಾಲೂಕು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಅರುಣ್ ಕುಮಾರ್ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡು ವೈವಿಧ್ಯಮಯ ಕೃಷಿ ಪದ್ಧತಿಗಳನ್ನು ಹಾಗೂ ಸಮಗ್ರ ಕೃಷಿ ವಿಧಾನವನ್ನು ಅಳವಡಿಸಿಕೊಳ್ಳಬೇಕೆಂದು ರೈತರಿಗೆ ಕರೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್ ನಾಯಕ್, ಸರ್ಕಾರದ ಯೋಜನೆಗಳನ್ನು ತಮ್ಮ ತಾಂಡಾಕ್ಕೆ ತಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿ ಯಿಂದ ಪರಿಶಿಷ್ಟ ಜಾತಿಯ ವಿಶೇಷ ಕಾರ್ಯಕ್ರಮದಡಿ 700 ತೆಂಗಿನ ಸಸಿಗಳನ್ನು ರೈತರಿಗೆ ಉಚಿತವಾಗಿ ವಿತರಿಸ ಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿಗಳಾದ ರಘುರಾಜ ಜೆ, ಸಣ್ಣಗೌಡ್ರ, ಕೃಷಿ ಅಧಿಕಾರಿ ಮೆಹತಾಬ್ ಅಲಿ, ರೈತ ಮುಖಂಡರಾದ ಆನಂದ ನಾಯಕ್, ವೀರಭದ್ರ ನಾಯಕ್, ರುದ್ರ ನಾಯಕ್, ನಾಗರಾಜ್, ಕೃಷಿ ಸಖಿ ರಂಜಿತಾಬಾಯಿ, ಪಶುಸಖಿ ಮಧುಬಾಯಿ ಮುಂತಾದವರು ಭಾಗವಹಿಸಿದ್ದರು.