ನಗರದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ನೇರ ಬಸ್ ವ್ಯವಸ್ಥೆ ಬೇಕು

ನಗರದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ನೇರ ಬಸ್ ವ್ಯವಸ್ಥೆ ಬೇಕು

ಜಿಲ್ಲಾ ಉಸ್ತುವಾರಿ ಸಚಿವ ಎಸ್ಸೆಸ್ಸೆಂಗೆ ಡಾ. ಸ್ನೇಹ ರೂಪಾ ಪೂಜಾರ್ ಮನವಿ  

ದಾವಣಗೆರೆ, ಜೂ.7- ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನ ನಿಲ್ದಾಣಕ್ಕೆ ದಾವಣಗೆರೆಯಿಂದ ಹೋಗಿ ಬರಲು ನೇರ  ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರ ಪರವಾಗಿ ಮಕ್ಕಳ ತಜ್ಞ ವೈದ್ಯೆ  ಡಾ. ಸ್ನೇಹ ರೂಪಾ ಪೂಜಾರ್ ಮನವಿ ಮಾಡಿದ್ದಾರೆ.

ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್    ಅವರಿಗೆ ಸುದೀರ್ಘ  ಮನವಿ ಪತ್ರ ಸಲ್ಲಿಸಿರುವ  ಅವರು,   ದಾವಣಗೆರೆ ವಿದ್ಯೆ, ಕ್ರೀಡೆ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದೆ.   ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯು ಸಂಪರ್ಕ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ ಎಂದು 10 ಅಂಶಗಳನ್ನು ಅವರು ಸಚಿವರ ಗಮನಕ್ಕೆ ತಂದಿರುತ್ತಾರೆ.

* ಬಹಳಷ್ಟು ಪ್ರಯಾಣಿಕರು ಬೆಂಗಳೂರಿಗೆ ಹೋಗಿ ಅಲ್ಲಿಂದ ವಿಮಾನ ನಿಲ್ದಾಣಕ್ಕೆ ತಲುಪಲು ಕನಿಷ್ಠ 7-8 ಗಂಟೆಗಳ ಸಮಯ ಬೇಕು. ಅಲ್ಲದೆ ವಿಮಾನದ ನಿರ್ಧರಿತ ಸಮಯ ಮಧ್ಯರಾತ್ರಿ ಅಥವಾ ನಸುಕಿನ ವೇಳೆಯಲ್ಲಿ ಇದ್ದಾಗ ಒಬ್ಬಂಟಿಗಳು, ಮಹಿಳೆಯರು ಮತ್ತು ಚಿಕ್ಕ ಮಕ್ಕಳ ಕುಟುಂಬಸ್ಥರಿಗೆ ಅನಾನುಕೂಲವಾಗುವುದು.

* ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನದ ನಿರ್ಧರಿತ ಸಮಯಕ್ಕೆ ಎರಡು, ಮೂರು ಗಂಟೆ ಮೊದಲೇ ತಲುಪುವ ಅನಿವಾರ್ಯತೆ ಇರುವುದರಿಂದ ಸ್ವಂತ ವಾಹನಗಳಲ್ಲಿ ರಾತ್ರಿ ಪ್ರಯಾಣ ಸುರಕ್ಷಿತವಲ್ಲದ ಕಾರಣ ಇಲ್ಲಿಂದ ಒಂದು ದಿನ ಮೊದಲೇ ಹೋಗಿ ಹೋಟೆಲ್‌ಗಳಲ್ಲಿ ತಂಗಿ ಹೋಗುವಷ್ಟರಲ್ಲಿ ಸಾಕಷ್ಟು ಸಮಯ ಮತ್ತು ಹಣ ವ್ಯತ್ಯಯವಾಗುವುದು.

* ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮಾ ವೇಶಗಳನ್ನು ನಮ್ಮ ನಗರದಲ್ಲಿ ನಡೆಸಬಹುದಾದ ವ್ಯವಸ್ಥೆ, ನಿಪುಣತೆ ಹಾಗೂ ಪ್ರತಿಭೆಗಳು ಇದ್ದರೂ ಸಹ ಸರಿಯಾದ ಸಂಪರ್ಕ ವ್ಯವಸ್ಥೆಯ ಕೊರತೆಯಿಂದ ನಗರ ಈ ತರಹದ ಸಮಾವೇಶಗಳಿಂದ ವಂಚಿತವಾಗುತ್ತಿದೆ.

* ಹುಬ್ಬಳ್ಳಿ ಮತ್ತು ಶಿವಮೊಗ್ಗದಲ್ಲಿರುವ ದೇಶಿಯ ವಿಮಾನ ನಿಲ್ದಾಣಗಳಲ್ಲಿ ಎಲ್ಲ ಸ್ಥಳಗಳಿಗೂ ನೇರ ವಿಮಾನ ಸಂಪರ್ಕ ಇಲ್ಲ ಮತ್ತು ಕಡಿಮೆ ವಿಮಾನಗಳಿವೆ. ಅಲ್ಲದೆ ಹಲವಾರು ಬಾರಿ ಕೊನೆಯ ಕ್ಷಣದಲ್ಲಿ ವಿಮಾನಗಳು ರದ್ದಾಗುವುದು ಪ್ರಯಾಣಿಕರಿಗೆ ಸಾಕಷ್ಟು ಅನಾನುಕೂಲತೆಯನ್ನು ಉಂಟುಮಾಡುತ್ತದೆ.

* ಒಂದು ನಗರದ ಅಭಿವೃದ್ಧಿ ಅದಕ್ಕಿರುವ ಸಂಪರ್ಕ ವ್ಯವಸ್ಥೆಯ ಮೇಲೆ ಅವಲಂಬಿತವಾಗಿರುತ್ತದೆ. ಪ್ರವಾ ಸೋದ್ಯಮವನ್ನು ಸಹ ಅಭಿವೃದ್ಧಿಪಡಿಸಲು ಅನುಕೂಲ ವಾಗುವ ಹಾಗೆ ಜಾಹೀರಾತುಗಳ ಮೂಲಕ ಈ ವ್ಯವಸ್ಥೆ ಕಲ್ಪಿಸಿದರೆ ಜಿಲ್ಲೆಯ ಪ್ರವಾಸಿ ತಾಣಗಳು ದೇಶದ ನಕ್ಷೆಯಲ್ಲಿ ಕಾಣಿಸಿಕೊಳ್ಳಲು ಅನುಕೂಲವಾಗುತ್ತದೆ.

* ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ, ಐರಾವತ ಮತ್ತು ವಿದ್ಯುತ್ ಚಾಲಿತ ಬಸ್ ಗಳು ಸುರಕ್ಷಿತವೂ ಅಲ್ಲದೆ ಸೇವೆಯಲ್ಲಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿವೆ. ಕರಾರಸಾಸಂ, ರಾಜ್ಯ ಸರ್ಕಾರದ ಆಡಳಿತ ಸುಪರ್ದಿಗೆ ಬರುವುದರಿಂದ ವಿಮಾನ ನಿಲ್ದಾಣದ ಪ್ರವೇಶಕ್ಕೆ ಅನುಮತಿ ಪಡೆಯಬಹುದು

* ದಾವಣಗೆರೆ ಮಾತ್ರವಲ್ಲದೆ ಹಾವೇರಿ, ಹರಿಹರ ಹೊಸಪೇಟೆ ಕಡೆಯಿಂದ ವಿಮಾನ ನಿಲ್ದಾಣಕ್ಕೆ ಹೊರಡುವ ಬಸ್‌ಗಳು ದಾವಣಗೆರೆ – ಚಿತ್ರದುರ್ಗದ ಮೂಲಕ ಹೋದರೂ ಸಹ ಎಲ್ಲ ಕ್ಷೇತ್ರಗಳ ನಾಗರಿಕರಿಗೂ ಅನುಕೂಲವಾಗುತ್ತದೆ.

* ದಾಬಾಸ್ ಪೇಟೆ-ದೊಡ್ಡಬಳ್ಳಾಪುರ ದ್ವಿಪಥ ರಸ್ತೆ ಆಗಿರುವುದರಿಂದ ಬೆಂಗಳೂರು ಶಹರದ ಕ್ಲಿಷ್ಟಕರ ಟ್ರಾಫಿಕ್ ಅನ್ನು ತಪ್ಪಿಸಿ ನೇರವಾಗಿ ವಿಮಾನ ನಿಲ್ದಾಣ ತಲುಪುವ ಬಸ್ ವ್ಯವಸ್ಥೆ ಕಲ್ಪಿಸಿದರೆ ಬಹಳ ಅನುಕೂಲವಾಗುವುದು.

* ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ವಾಗುವವರೆಗೂ ಮತ್ತು ನಂತರವೂ ಈ ಸಂಪರ್ಕ ವ್ಯವಸ್ಥೆಯ ಅವಶ್ಯಕತೆ ಇದೆ.  

* ಪ್ರಾಯೋಗಿಕವಾಗಿ ಮೊದಲು ಎರಡು ಮೂರು ಬಸ್‌ಗಳ ವ್ಯವಸ್ಥೆ ಮಾಡಿ ಅದರ ಸಫಲತೆಯ ನಂತರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸಬಹುದು.

ವಿಭಿನ್ನ ವೃತ್ತಿ, ವ್ಯಾಪಾರಗಳಲ್ಲಿರುವ ನಾಗರಿಕರು ಈ ವ್ಯವಸ್ಥೆಯ ಅವಶ್ಯಕತೆಯನ್ನು ಮನಗಂಡಿರುವುದರಿಂದ ಹಲವಾರು ಪ್ರತಿನಿಧಿಗಳಿಂದ ಈ ಮನವಿಯ ಅಂಗೀಕಾರ ಪಡೆಯುವ ಪ್ರಯತ್ನ ಮಾಡಿದ್ದೇವೆ.

ಬರಿಯ ಮಾತು, ಆಶ್ವಾಸನೆಗಳಲ್ಲಿ ಜನರನ್ನು ನಂಬಿಸದೆ, ಕೆಲಸ ಮಾಡಿ ತೋರಿಸುವ ತಮ್ಮ ಕಾರ್ಯನಿಷ್ಠೆಯನ್ನು ಕ್ರೀಡಾ ಸಚಿವರಾಗಿ ಮತ್ತು ಕಾಂಗ್ರೆಸ್ ಮುಖಂಡರಾಗಿ ಜನ ಮನಗಂಡಿದ್ದಾರೆ. ಈ ಮನವಿಯನ್ನು ತಮ್ಮ ಆದ್ಯತೆಯ ಪಟ್ಟಿಯಲ್ಲಿ ಸೇರಿಸಿ ನೇರ ಬಸ್ ವ್ಯವಸ್ಥೆಯನ್ನು ಕಲ್ಪಿಸಿದರೆ ಬಹಳ ಅನುಕೂಲವಾಗುವುದು ಎಂದು ಡಾ. ಸ್ನೇಹರೂಪಾ ವಿವರಿಸಿದ್ದಾರೆ. 

error: Content is protected !!