ಪ್ರೊ. ಎಸ್.ಬಿ. ರಂಗನಾಥ್‌ ಅವರಿಗೆ ಕೇಂದ್ರ ಕಸಾಪ ದತ್ತಿ ಪ್ರಶಸ್ತಿ ಪ್ರದಾನ

ಪ್ರೊ. ಎಸ್.ಬಿ. ರಂಗನಾಥ್‌ ಅವರಿಗೆ  ಕೇಂದ್ರ ಕಸಾಪ ದತ್ತಿ ಪ್ರಶಸ್ತಿ ಪ್ರದಾನ

ದಾವಣಗೆರ, ಜೂ. 13 – ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ಹಿರಿಯ ಸಾಹಿತಿಗಳೂ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರೂ ಆದ ಪ್ರೊ . ಎಸ್.ಬಿ. ರಂಗನಾಥ್‌ ಅವರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್, ದತ್ತಿ ನಿಧಿ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ನಗರದ ತರಳಬಾಳು ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ದಾವಣಗೆರೆ ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಅವರು ಇಂದು ಪ್ರದಾನ ಮಾಡಿದರು. 

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು  ಅನುವಾದ ಸಾಹಿತ್ಯಕ್ಕಾಗಿ ನೀಡುವ 2023ರ ‘ಶ್ರೀಮತಿ ಭಾರತಿ ಮೋಹನ ಕೋಟಿ ದತ್ತಿ ಪಶಸ್ತಿ’ಗೆ  ಪ್ರೊ. ಎಸ್.ಬಿ.ರಂಗನಾಥ್  ಅವರು ಭಾಜನರಾಗಿದ್ದಾರೆ. ಹೆಸರಾಂತ ಲೇಖಕ ಶಶಿ ತರೂರು ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ‘ಕಗ್ಗತ್ತಲ ಕಾಲ’ ಕೃತಿಯನ್ನು  ಪ್ರೊ. ಎಸ್.ಬಿ. ರಂಗನಾಥ್ ಅವರು ಕೊರೊನಾ ಕಾಲದ ಲಾಕ್ ಡೌನ್‌ ಸಂದರ್ಭದಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. 2022 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ಕೃತಿಯನ್ನು ಪ್ರಕಟಿಸಿತ್ತು. 

ಪ್ರೊ. ರಂಗನಾಥ್ ಇದುವರೆಗೂ ‘ಪ್ರಜಾವಾಣಿ ‘ಯ ಅಂಕಣ ಬರಹಗಳ ಸಂಗ್ರಹ ‘ಎಲೆಲೆ ಮಧುಬಾಲೆ’, ‘ಕಚಗುಳಿ (ಗೆ) ಕಾಲ’ ಸೇರಿದಂತೆ ಹತ್ತು ಕೃತಿಗಳ ಲೇಖಕರು. ಬಂಗಾಳಿಯ ಪ್ರಸಿದ್ಧ ಕಾದಂಬರಿಗಳಾದ ‘ಭುವನ್ ಸೋಮ್’ , ‘ಪ್ರತಿದ್ವಂದಿ’ ಮುಂತಾದ ಏಳು ಕೃತಿಗಳನ್ನು ಅನುವಾದಿಸಿದ್ದಾರೆ.  ಇವರ ‘ ಟಿಪ್ಪು ಸುಲ್ತಾನನ ಖಡ್ಗ’ ಕೃತಿಯು ಮೂರು ಮುದ್ರಣಗಳನ್ನು ಕಂಡಿದೆ. ಇತ್ತೀಚೆಗೆ ಅನುವಾದಿಸಿದ ನಿವೃತ್ತ ಐಎಎಸ್ ಅಧಿಕಾರಿ ಎಂ. ಮದನಗೋಪಾಲ್ ಅವರ ‘ಕಾಮನ ಬಿಲ್ಲನು ಬಂಬತ್ತಿ’ ಕೃತಿಯು ರಾಯಚೂರಿನಲ್ಲಿ ಲೋಕಾರ್ಪಣೆಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. 

ಪ್ರೊ. ಎಸ್.ಬಿ.ರಂಗನಾಥ್ ಅವರು ಅನಾರೋಗ್ಯದಿಂದಿರುವ ಕಾರಣ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬೆಂಗಳೂರಿನಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದತ್ತಿ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. 

ಈ ಹಿನ್ನೆಲೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರ ನಿರ್ದೇಶನದ ಮೇರೆಗೆ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಅವರ ನೇತೃತ್ವದಲ್ಲಿ ದಾವಣಗೆರೆ ಜಿಲ್ಲಾ ಕಸಾಪ ಬಳಗವು ಪ್ರೊ. ಎಸ್.ಬಿ.ರಂಗನಾಥ್ ಅವರ ನಿವಾಸಕ್ಕೆ ಭೇಟಿ ನೀಡಿ, ಅವರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿಯು ಫಲಕ ಮತ್ತು ಹತ್ತು ಸಾವಿರ ನಗದನ್ನೊಳಗೊಂಡಿದೆ.  

ಈ ಸಂದರ್ಭದಲ್ಲಿ ಪರಿಷತ್ತಿನ ಜಿಲ್ಲಾ ಕೋಶಧ್ಯಕ್ಷ ಕೆ. ರಾಘವೇಂದ್ರ ನಾಯರಿ, ಜಿಲ್ಲಾ ನಿರ್ದೇಶಕರುಗಳಾದ ಎಸ್.ಎಂ. ಮಲ್ಲಮ್ಮ, ರುದ್ರಾಕ್ಷಿ ಬಾಯಿ, ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ತಾಲ್ಲೂಕು ಕಸಾಪದ ಕಾರ್ಯದರ್ಶಿಗಳಾದ ನಾಗರಾಜ ಸಿರಿಗೆರೆ, ದಾಗಿನಕಟ್ಟೆ ಪರಮೇಶ್ವರಪ್ಪ, ನಿರ್ದೇಶಕ  ಎಂ. ಷಡಾಕ್ಷರಪ್ಪ ಬೇತೂರು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು

error: Content is protected !!