94ರ ಸಂಭ್ರಮದಲ್ಲಿ ಎಸ್ಸೆಸ್ : ನಾಳೆ ವಿವಿಧ ಸೇವಾ ಕಾರ್ಯಕ್ರಮ

94ರ ಸಂಭ್ರಮದಲ್ಲಿ ಎಸ್ಸೆಸ್ : ನಾಳೆ ವಿವಿಧ ಸೇವಾ ಕಾರ್ಯಕ್ರಮ

ದಾವಣಗೆರೆ, ಜೂ.13- ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ 94ನೇ ಜನುಮದಿನದ ಪ್ರಯುಕ್ತ ನಾಡಿದ್ದು ದಿನಾಂಕ 15 ಮತ್ತು 16 ರಂದು ರಕ್ತದಾನ ಶಿಬಿರ, ಬಾಸ್ಕೆಟ್ ಬಾಲ್ ಪಂದ್ಯಾವಳಿ, ಚಿತ್ರಕಲಾ ಸ್ಪರ್ಧೆ, 94 ಸಸಿಗಳನ್ನು ನೆಡುವುದೂ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್,
ಡಾ. ಪ್ರಭಾ ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗ, ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಸ್ನೇಹ ಬಳಗದ ಆಶ್ರಯದಲ್ಲಿ ಈ ಕಾರ್ಯಕ್ರಮಗಳು ಜರುಗಲಿವೆ.

ದಿನಾಂಕ 15 ರಂದು ಜಿಲ್ಲಾ ಮಟ್ಟದ ಆಹ್ವಾನಿತ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಚಾಲನೆಯಾಗಲಿದೆ. ಉತ್ತರ ವಿಧಾನಸಭಾ ಕ್ಷೇತ್ರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದ 15 ಸರ್ಕಾರಿ ಹಾಗೂ ಅನುದಾನಿತ ಸರ್ಕಾರಿ ಶಾಲೆಗಳಲ್ಲಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.

ಉತ್ತರ ವಿಧಾನಸಭಾ ಕ್ಷೇತ್ರದ 4 ವಾರ್ಡ್ ಗಳಲ್ಲಿ ಎಸ್ಸೆಸ್ ಅವರ 94 ನೇ ಜನ್ಮದಿನದ ಪ್ರಯುಕ್ತ 94 ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಶಾಲೆಗಳಲ್ಲಿ ಶಾಮನೂರು ಶಿವಶಂಕರಪ್ಪ ಅವರ ಜೀವನ ಕುರಿತಾದ ಚಿತ್ರಗಳನ್ನು ವಿದ್ಯಾರ್ಥಿಗಳು ರಚಿಸಲಿದ್ದು, ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮವೂ ಜರುಗಲಿದೆ.

ದಿನಾಂಕ 16 ರಂದು ಎಂಸಿಸಿ `ಬಿ’ ಬ್ಲಾಕ್‌ನ ಐಎಂಎ ಹಾಲ್‌ನಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಆರ್ಟ್ಸ್ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಾಮನೂರು ಶಿವಶಂಕರಪ್ಪರ ಜೀವನ ಕುರಿತಾದ ಚಿತ್ರಗಳನ್ನು ಸ್ಥಳದಲ್ಲಿಯೇ ರಚಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ನಡೆಯುವ ಬಹುಮಾನ ವಿತರಣೆ ಸಮಾರಂಭದಲ್ಲಿ ಚಿತ್ರಕಲಾ ಸ್ಪರ್ಧೆ, ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಬಹುಮಾನ ಪ್ರದಾನ ಮಾಡುವರು. 

ಹಿರಿಯ ಶಾಸಕ ಶಾಮನೂರು ಶಿವಶಂಕರ ಪ್ಪನವರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು ಎಂದು ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ತಿಳಿಸಿದ್ದಾರೆ.

error: Content is protected !!