21ನೇ ಶತಮಾನಕ್ಕೆ ವಚನ ಸಾಹಿತ್ಯ ಸಂಜೀವಿನಿ

21ನೇ ಶತಮಾನಕ್ಕೆ ವಚನ ಸಾಹಿತ್ಯ ಸಂಜೀವಿನಿ

ದಾವಣಗೆರೆ, ಮೇ 22- 21 ಶತಮಾನದಲ್ಲೂ ವಚನ ಸಾಹಿತ್ಯ ಸಂಜೀವಿನಿಯಾಗಿದೆ. ಪ್ರಸ್ತುತ ವಚನ ಸಾಹಿತ್ಯವನ್ನು ಎಲ್ಲೆಡೆ ಪಸರಿಸುವ ತುರ್ತು ಅಗತ್ಯವಿದೆ  ಎಂದು ನಿವೃತ್ತ ಶಿಕ್ಷಣಾಧಿಕಾರಿ, ಶರಣ ಸಾಹಿತ್ಯ  ಪರಿಷತ್‌ ಜಿಲ್ಲಾ ಕಾರ್ಯದರ್ಶಿ ಭರಮಪ್ಪ ಮೈಸೂರು ಅಭಿಪ್ರಾಯಪಟ್ಟರು.

 ನಗರದ ಎಸ್.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು, ಅಥಣಿ ಸ್ನಾತಕೋತ್ತರ ಕೇಂದ್ರ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾಯಕ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ `ವಚನಗಳಲ್ಲಿ ವೈಚಾರಿಕತೆ’ ಕುರಿತು ಮಾತನಾಡಿದರು.

ಹನ್ನೆರಡನೇ ಶತಮಾನದಲ್ಲಿದ್ದ ವರ್ಗ, ಜಾತಿ, ಕೋಮುವಾದ, ಮೂಲಭೂತವಾದ, ಜನಾಂಗೀಯ ದ್ವೇಷ ಮುಂತಾದವುಗಳು 21 ನೇ ಶತಮಾನದಲ್ಲೂ ಇನ್ನೂ ಜೀವಂತವಾಗಿದ್ದು, ಇವುಗಳ ನಿರ್ಮೂಲನೆಗೆ ಶರಣರ ಆಶಯಗಳೊಂದಿಗೆ ಜನ ಮಾನಸದಲ್ಲಿ ವಚನ ಸಾಹಿತ್ಯವನ್ನು ಪಸರಿಸಬೇಕಾದ ತುರ್ತು ಅಗತ್ಯವಿದೆ ಎಂದು ಹೇಳಿದರು.

ಹನ್ನೆರಡನೆ ಶತಮಾನದಲ್ಲಿ ಸರ್ವ ಸಮಾನತೆ ಹಾಗೂ ವೈಚಾರಿಕ ಪ್ರಜ್ಞೆ ಒಳಗೊಂಡ ಅನೇಕ ವಚನಗಳನ್ನು ರಚಿಸುವ ಮೂಲಕ ಅರಿವು ಮೂಡಿಸುವ ಕೆಲಸವನ್ನು ವಚನಕಾರರು ಮತ್ತು ವಚನಕಾರ್ತಿಯರು ಮಾಡಿದ್ದಾರೆಂದು ತಿಳಿಸಿದರು.

ವೈಜ್ಞಾನಿಕ ಮತ್ತು ವೈಚಾರಿಕತೆಯ ತಳಹದಿಯ ಮೇಲೆ ವಚನಗಳು ರಚನೆಗೊಂಡಿವೆ ಎಂದರು.

ಎಸ್‌.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಪ್ರಾಚಾರ್ಯ ಡಾ. ಕೆ. ಷಣ್ಮುಖ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲುಷಿತ ಸಮಾಜವನ್ನು ಶುಚಿಗೊಳಿಸಲು ಬಸವಾದಿ ಶಿವ ಶರಣರ ವಚನಗಳು ಅಗತ್ಯ ಎಂದರು.

ಸಾಮಾಜಿಕ ಸಮಾನತೆ ಸಾರುವಲ್ಲಿ, ಸಾಮರಸ್ಯ, ಸಹಬಾಳ್ವೆಯನ್ನು ಬೆಳೆಸುವುದಕ್ಕಾಗಿ ವಚನ ಸಾಹಿತ್ಯ ಅನುಸರಣೆ ಇಂದಿಗೂ ಪ್ರಸ್ತುತ ಎಂದು ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದತ್ತಿ ದಾನಿಗಳಾದ ಎಂ.ಟಿ. ಜಯದೇವಪ್ಪ ಅವರು ಶರಣ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಯಶಸ್ವಿಯಾಗಿ ಜರುಗಲಿ ಎಂದು ಶುಭ ಹಾರೈಸಿದರು.

ಕಾಯಕ ದಿನಾಚರಣೆ ಪ್ರಯುಕ್ತ ಕಾಯಕ ಜೀವಿಗಳಾದ ಡಿಟಿಪಿ ಆಪರೇಟರ್ ಸೈಯದ್ ಕುಮಾರ್, ಮಾಗಾನಹಳ್ಳಿ ಅಡುಗೆ ತಯಾರಕ ಎಂ. ಮಂಜಪ್ಪ ಅವರನ್ನು ಶರಣ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.

ಪರಿಷತ್ ಉಪಾಧ್ಯಕ್ಷ ಎನ್.ಎಸ್. ರಾಜು, ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ಗಾಯತ್ರಿ ವಸ್ತ್ರದ್, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಆವರಗೆರೆ ರುದ್ರಮುನಿ, ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷ ಎಂ. ಪರಮೇಶ್ವರಪ್ಪ, ಉಪಾಧ್ಯಕ್ಷ ಬುಳ್ಳಾಪುರದ ಮಲ್ಲಿಕಾರ್ಜುನಪ್ಪ ಮತ್ತಿತರರು ಉಪಸ್ಥಿತರಿದ್ದರು.

ಜಿ.ಎಂ. ಕುಮಾರಪ್ಪ ಸ್ವಾಗತಿಸಿದರು. ಆರ್. ಸಿದ್ದೇಶ್ವರಪ್ಪ ನಿರೂಪಿಸಿದರು. ಬಿ.ಟಿ. ಪ್ರಕಾಶ್ ಶರಣು ಸಮರ್ಪಿಸಿದರು.

error: Content is protected !!