ನೇಹಾ ಹತ್ಯೆ ಖಂಡಿಸಿ ಜಂಗಮ ಸಮಾಜದ ಪ್ರತಿಭಟನೆ

ನೇಹಾ ಹತ್ಯೆ ಖಂಡಿಸಿ ಜಂಗಮ ಸಮಾಜದ ಪ್ರತಿಭಟನೆ

ದಾವಣಗೆರೆ, ಏ. 23- ಹುಬ್ಬಳ್ಳಿಯ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಖಂಡಿಸಿ ಜಿಲ್ಲಾ ಜಂಗಮ ಸಮಾಜದಿಂದ  ನಗರದ ಜಯದೇವ ಸರ್ಕಲ್‌ನಲ್ಲಿ ಮೊನ್ನೆ ಮೇಣದ ಬತ್ತಿ ಹೊತ್ತಿಸಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನೇಹಾ ಹಿರೇಮಠ್ ಅವರ ಘಟನೆ ಅಮಾನವೀಯವಾಗಿದೆ. ಇಂತಹ ಘಟನೆ ಮರುಕಳಿಸದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ನೇಹಾ ಅವರ ಕುಟುಂಬಕ್ಕೆ  ಈ ದುಃಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಪ್ರಾರ್ಥಿಸಿದರು.

ಜಿಲ್ಲಾ ಜಂಗಮ ಸಮಾಜದ ಮುಖಂಡ ಹಾಗೂ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಎನ್.ಎ. ಮುರುಗೇಶ್ ಮಾತನಾಡಿ, ನೇಹಾ ಹತ್ಯೆ ಪ್ರಕರಣವನ್ನು ಖಂಡಿಸಿ, ಮಗಳನ್ನು ಕಳೆದುಕೊಂಡ ಆ ತಂದೆ-ತಾಯಿಯ ಆಕ್ರಂದನ ನೋಡಲಾಗದು. ನಮ್ಮ ಸರ್ಕಾರ, ನ್ಯಾಯಾಂಗ ವ್ಯವಸ್ಥೆ ಹಾಗೂ ಪೊಲೀಸ್ ಆದಷ್ಟು ಬೇಗ ನೇಹಾ ಹಿರೇಮಠ್ ಸಾವಿಗೆ ನ್ಯಾಯ ದೊರಕುವಂತೆ ಮಾಡಲಿ ಎಂದರು.

ಸಾಹಿತಿ ಬಾ.ಮ. ಬಸವರಾಜಯ್ಯ ಮಾತನಾಡಿ, ರಾಜ್ಯದಲ್ಲಿ ದಿನೇ ದಿನೇ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಅಮಾಯಕ ಹೆಣ್ಣುಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಈ ಘಟನೆಯನ್ನು ಸಾಮಾನ್ಯವಾಗಿ ತೆಗೆದುಕೊಳ್ಳಬಾರದು. ಆರೋಪಿಗೆ ತಕ್ಷಣ ಶಿಕ್ಷೆಯಾಗಬೇಕು. ಸರ್ಕಾರವೇ ಮಹಿಳೆಯರ ರಕ್ಷಣೆಗೆ ಪರವಾನಿಗೆಯ ಆಯುಧ ನೀಡುವಂತಹ ವ್ಯವಸ್ಥೆ ಜಾರಿಗೆ ಬರಬೇಕು ಎಂದರು. 

ಆರೋಪಿ ಮತ್ತು ಅವನಿಗೆ ಸಹಕಾರ ನೀಡಿದ ಎಲ್ಲರಿಗೂ ಕಠಿಣ ಶಿಕ್ಷೆ ವಿಧಿಸಬೇಕು ಎಂದು ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ನಿರ್ದೇಶಕ ಹೆಚ್.ಎಂ. ರುದ್ರಮುನಿಸ್ವಾಮಿ ಒತ್ತಾಯಿಸಿದರು.

error: Content is protected !!