ದುಡ್ಡು ಕೊಟ್ಟು ಓಟು ಪಡೆಯುವ ಪದ್ಧತಿ ನಿರ್ಮೂಲನೆ ಆಗಬೇಕು

ದುಡ್ಡು ಕೊಟ್ಟು ಓಟು ಪಡೆಯುವ ಪದ್ಧತಿ ನಿರ್ಮೂಲನೆ ಆಗಬೇಕು

ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ್

ದಾವಣಗೆರೆ,ಏ.23- ನಾನು ಗೆದ್ದರೆ, ಪ್ರಜಾಪ್ರಭುತ್ವ ಉಳಿಸಲು ಹೋರಾಟ ಮಾಡಿದವರಿಗೆ  ನ್ಯಾಯ ಒದಗಿಸಿದಂತಾಗುತ್ತದೆ. ಸ್ವಾಭಿಮಾನದ ಚುನಾವಣೆ ಮಾಡೋಣ.  ರಾಜಕಾರಣದಲ್ಲಿ ದುಡ್ಡು ಕೊಟ್ಟು ಓಟು ಪಡೆಯುವ ಪದ್ಧತಿ ನಿರ್ಮೂಲನೆ ಆಗಬೇಕು ಆಗ ಅಭಿವೃದ್ಧಿ ಸಾಧ್ಯವಾಗುತ್ತದೆ  ಎಂದು  ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಹೇಳಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಚುನಾವಣಾ ಸಿದ್ಧತೆ ಕುರಿತಂತೆ ಇಂದು ನಡೆದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸಿಲಿಂಡರ್ ಗುರುತು ಸಿಕ್ಕ ಹಿನ್ನೆಲೆಯಲ್ಲಿ ಮತದಾರರ ಮನವೊಲಿಸಲು ಯಾವೆಲ್ಲಾ ಯೋಜನೆ ಹಾಕಿಕೊಳ್ಳಬೇಕು, ಪ್ರಚಾರದ ವೈಖರಿ ಹೇಗಿರಬೇಕು, ಚಿಹ್ನೆ ಕುರಿತಂತೆ ಹೇಗೆ ಜಾಗೃತಿ ಮೂಡಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಲು ಯಾವ ರೀತಿ  ಶ್ರಮಿಸಬೇಕು, ಮನಮುಟ್ಟುವ ರೀತಿಯಲ್ಲಿ ತಿಳಿಸಿಕೊಡುವ ಕುರಿತಂತೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.

ರಾಜಕಾರಣದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ದೊಡ್ಡ ಮುಖಂಡರು ಯಾರ ಮನೆಗೆ ಹೋಗಿ ಸೇರುತ್ತಾರೆ ಎಂಬುದು ಮುಖ್ಯವಲ್ಲ, ಯಾರ ಪರ ಒಲವಿದೆ ಎನ್ನುವುದು ಮುಖ್ಯ ಎಂದು ತಿಳಿಸಿದರು.

ನೀವೆಲ್ಲಾ ಬಹಿರಂಗವಾಗಿಯೇ ಬಂದಿದ್ದೀರಾ. ಇಲ್ಲಿಗೆ ಬರದೇ ಕೆಲಸ ಮಾಡುವ ಮುಖಂಡರು ನನ್ನ ಪರವಾಗಿ ಕೆಲಸ ಮಾಡುತ್ತಾರೆ. ಶಾಲು ಹಾಕಿಸಿಕೊಂಡು ಹೋದವರು ನನ್ನ ಪರ ಇದ್ದಾರೆ. ಟಿಕೆಟ್ ತಂದಿರುವ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಬಗ್ಗೆ ಶೇ. 99 ರಷ್ಟು ಜನರಿಗೆ ಇಷ್ಟವಿಲ್ಲ. ತತ್ವ, ಸಿದ್ಧಾಂತಕ್ಕೆ ಒಪ್ಪಿದವರು ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದಾರೆ. ಅವರೂ ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು ಲೋಕಸಭೆ ವರೆಗೆ ನಾನು ನಿಮ್ಮ ಪರವಾಗಿದ್ದೇನೆ. ಯಾರೂ ವಿಚಲಿತ ರಾಗಬೇಡಿ. ಏನೇ ತೊಂದರೆ ಬಂದರೂ ಎದುರಿಸೋಣ. ಈ ಚುನಾವಣೆಯಲ್ಲಿ ಸೋಲಲಿ, ಗೆಲ್ಲಲಿ ನಿಮ್ಮ ಜೊತೆ ಇರುತ್ತೇನೆ ಎಂದು ವಿನಯ್ ಕುಮಾರ್ ತಿಳಿಸಿದರು.

error: Content is protected !!