ಜಗಳೂರು, ಏ. 8 – ಭದ್ರಾ ಮೇಲ್ದಂಡೆ ಯೋಜನೆ ಶೀಘ್ರವಾಗಿ ಅನುಷ್ಠಾನಕ್ಕೆ ಆಗ್ರಹಿಸಿ ಇದೇ ದಿನಾಂಕ 13 ರಂದು ಕರೆ ನೀಡಿರುವ ಸ್ವಯಂ ಪ್ರೇರಿತ, ಶಾಂತಿಯುತ ಜಗಳೂರು ಬಂದ್ಗೆ ವಿವಿಧ ಸಂಘಟನೆಗಳು, ಮಹಿಳೆಯರು, ಕಾರ್ಮಿಕರು, ರೈತರು, ವಿದ್ಯಾರ್ಥಿ ಯುವ ಜನತೆ ಸಂಪೂರ್ಣ ಬೆಂಬಲಿಸಬೇಕು ಎಂದು ಹೋರಾಟ ಸಮಿತಿ ಮನವಿ ಮಾಡಿದೆ.
ಪಟ್ಟಣದ ಹಳೇ ಕ್ಲಬ್ನಲ್ಲಿ ಇಂದು ಭದ್ರಾ ಮೇಲ್ದಂಡೆ ಯೋಜನೆ ಹೋರಾಟ ಸಮಿತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಿತ್ತಿಚಿತ್ರ ಬಿಡುಗಡೆಗೊಳಿಸಲಾಯಿತು.
ಹೋರಾಟಗಾರ ಹಾಗೂ ನಿವೃತ್ತ ಪ್ರಾಂಶುಪಾಲ ಯಾದವ ರೆಡ್ಡಿ ಮಾತನಾಡಿ, 1967 ರಿಂದ ಭದ್ರಾ ಮೇಲ್ದಂಡೆ ಯೋಜನೆ ಕನಸಾಗಿದ್ದು. ದಶಕಗಳಿಂದ ಹೋರಾಟ ಆರಂಭವಾಗಿದೆ. ಆದರೆ ಎಲ್ಲಾ ಆಡಳಿತ ಪಕ್ಷಗಳ ಇಚ್ಛಾಶಕ್ತಿಯ ಕೊರತೆಯಿಂದ ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಕೇಂದ್ರದ ಬಿಜೆಪಿ
ಸರ್ಕಾರ ಕೇಂದ್ರ ಜಲ ನಿಗಮದಿಂದ ರಾಷ್ಟ್ರೀಯ ಯೋಜನೆಯನ್ನಾಗಿಸಿ ಕಾಲ್ಪನಿಕ ಕಥೆಯನ್ನು ಸೃಷ್ಠಿಸಿ ನಂತರ ಅನುದಾನ ಬಿಡುಗಡೆಗೊಳಿಸದೇ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಇತ್ತೀಚೆಗೆ ಮುಖ್ಯಮಂತ್ರಿ ಘೋಷಿಸಿದ ಬಜೆಟ್ನಲ್ಲಿ ರೂ. 19000 ಕೋಟಿ ನೀರಾವರಿ ಯೋಜನೆಗೆ ಮೀಸಲಿ ಟ್ಟಿದೆ. ಅದರಲ್ಲಿ ಒಂದು ನಯ ಪೈಸೆಯನ್ನೂ ಭದ್ರಾ ಮೇಲ್ದಂಡೆ ಯೋಜನೆಗೆ ಬಿಡುಗಡೆಯ ಮಾಡದೆ ನಿರ್ಲಕ್ಷ್ಯವಹಿಸಿದೆ. ಮಧ್ಯ ಕರ್ನಾಟಕ, ಉತ್ತರ ಕರ್ನಾ ಟಕ, ಮೈಸೂರು ಕರ್ನಾಟಕಗಳಿಗಿಂತ ನೀರಾವರಿ ಸೌಲಭ್ಯದಲ್ಲಿ ವಂಚಿತವಾಗಿದೆ ಎಂದು ದೂರಿದರು.
ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಕಾಮಗಾರಿಯನ್ನು ಸರ್ಕಾರ ಶೀಘ್ರ ಪೂರ್ಣಗೊಳಿಸಬೇಕು, ವಿಳಂಬಗೊಳಿಸಿದಲ್ಲಿ ಹಂತ ಹಂತವಾಗಿ ಹೋರಾಟದ ರೂಪುರೇಷೆಗಳನ್ನು ಸಮಿತಿಯಿಂದ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಹಿರಿಯ ಪತ್ರಕರ್ತ ಹಾಗೂ ಹೋರಾಟಗಾರ ದೊಣೆಹಳ್ಳಿ ಗುರುಮೂರ್ತಿ ತಿಳಿಸಿದರು.
ಸಾಹಿತಿ ಡಾ. ಅಶೋಕ ಕುಮಾರ್ ಸಂಗೇನಹಳ್ಳಿ ಮಾತನಾಡಿ, ಬಂದ್ ಕುರಿತು ಜಾಗೃತಿ ಮೂಡಿಸಲು ಇದೇ ದಿನಾಂಕ 11 ಮತ್ತು 12ರಂದು ಪ್ರಮುಖ 4 ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಗುವುದು. ಯುವಕರ ತಂಡಗಳು ಹಾಗೂ ಪತ್ರಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಮುಖಂಡ ಆರ್. ಓಬಳೇಶ್, ವಾಲಿಬಾಲ್ ತಿಮ್ಮಾರೆಡ್ಡಿ, ಎ.ಡಿ. ನಾಗಲಿಂಗಪ್ಪ, ಅನ್ವರ್ ಸಾಹೇಬ್, ಸತ್ಯಮೂರ್ತಿ, ನಾಗೇಂದ್ರರೆಡ್ಡಿ, ವಕೀಲ ಸಣ್ಣ ಓಬಯ್ಯ, ಸೂರಲಿಂಗಪ್ಪ, ಸತೀಶ್, ಇಂದಿರಾ, ಎನ್.ಎಸ್. ರಾಜು, ಅನಂತರಾಜ್, ಮಹಾಲಿಂಗಪ್ಪ, ರೇಖಾ, ನೂರುದ್ದೀನ್ ಇದ್ದರು.