ಮಲೇಬೆನ್ನೂರಿನಲ್ಲಿ ನಂದಿಗುಡಿ ರಸ್ತೆ ಡಾಂಬರೀಕರಣ : ನಾಗರಿಕರ ಹರ್ಷ

ಮಲೇಬೆನ್ನೂರಿನಲ್ಲಿ ನಂದಿಗುಡಿ ರಸ್ತೆ ಡಾಂಬರೀಕರಣ : ನಾಗರಿಕರ ಹರ್ಷ

ಮಲೇಬೆನ್ನೂರು, ಏ. 7 – ಪಟ್ಟಣದಲ್ಲಿ ಕಳೆದ 3 ತಿಂಗಳಿಂದ ನೆನೆಗುದಿಗೆ ಬಿದ್ದಿದ್ದ ಮಲೇಬೆನ್ನೂರು-ನಂದಿಗುಡಿ ರಸ್ತೆ ಡಾಂಬರೀಕರಣ ಕಾಮಗಾರಿ ಶುಕ್ರ ವಾರ ಆರಂಭವಾಗಿರುವುದಕ್ಕೆ ರಸ್ತೆ ಅಕ್ಕ-ಪಕ್ಕದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ. 

ಈಗಾಗಲೇ ಪುರಸಭೆಯ ನಗರೋತ್ಥಾನ ಯೋಜನೆ ಅಡಿ ರಸ್ತೆಯ ಎರಡೂ ಬದಿ ಕಾಂಕ್ರೀಟ್‌ ಚರಂಡಿ ನಿರ್ಮಿಸಲಾಗಿತ್ತು. ಆದರೆ ಡಾಂಬರೀಕರಣ ಮಾಡಲು ರಸ್ತೆ ಅಗೆದು ವೆಟ್‌ ಮಿಕ್ಸ್‌ ಹಾಕಿ ಸ್ವಲ್ಪ ದಿನ ಹಾಗೆ ಬಿಟ್ಟಿದ್ದರಿಂದ ರಸ್ತೆಯ ದೂಳಿನಿಂದ ಇಲ್ಲಿನ ನಿವಾಸಿಗಳಿಗೆ ಹಾಗೂ ಪ್ರಯಾಣಿಕರಿಗೆ ಬಹಳ ತೊಂದರೆ ಆಗಿತ್ತು. ರಸ್ತೆ ಕಲ್ಲು ಕಿತ್ತು ಬಂದು ಗುಂಡಿ ಬಿದ್ದಿದ್ದವು. ವಾಹನ ನಿಲುಗಡೆಗೂ ಕಷ್ಟವಾಗಿತ್ತು. ಇದರಿಂದ ಬೇಸತ್ತ ವ್ಯಾಪಾರಿಗಳು ಕಾಮಗಾರಿ ಮಾಡುವಂತೆ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದರು.

ಇದೀಗ ರಸ್ತೆ ಡಾಂಬರೀಕರಣ ಆಗುತ್ತಿರುವುದಕ್ಕೆ ಸಂತಸಗೊಂಡಿರುವ ವ್ಯಾಪಾರಿಗಳು ಮತ್ತು ನಾಗರಿಕರು ಕಾಮಗಾರಿಯ ಗುಣಮಟ್ಟ ಕಾಪಾಡುವಂತೆ ಮತ್ತು ತುರ್ತಾಗಿ ಕಾಮಗಾರಿ ಮುಗಿಸುವಂತೆ ಆಗ್ರಹಿಸಿದ್ದಾರೆ.

ರಸಗೊಬ್ಬರ ವ್ಯಾಪಾರಿ ಎಂ. ಕರಿಬಸಯ್ಯ ಅವರು ಕಾಮಗಾರಿ ಗುಣಮಟ್ಟ ಹೆಚ್ಚಿಸುವಂತೆ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ತಿಳಿಸಿದ್ದಾರೆ.

 4 ಕೋಟಿ ರೂ. ವೆಚ್ಚದಲ್ಲಿ ಮಲೇಬೆನ್ನೂರಿನಿಂದ ಕೊಕ್ಕನೂರು ವರೆಗೆ 7 ಮೀ ಅಗಲದ ರಸ್ತೆ ಮರುಡಾಂಬರೀಕರಣ ಮತ್ತು ಅಲ್ಲಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಿಸಲಾಗುತ್ತಿದೆ ಎಂದು ಇಂಜಿನಿಯರ್ ಶಿವಮೂರ್ತಿ ತಿಳಿಸಿದರು. ಗುತ್ತಿಗೆದಾರ ಬಿ.ಎಂ. ಜಗದೀಶ್ವರ ಸ್ವಾಮಿ ಮಾತನಾಡಿ, ಗುಣಮಟ್ಟದ ರಸ್ತೆ ನಿರ್ಮಿಸುವುದಾಗಿ ತಿಳಿಸಿದರು.

error: Content is protected !!