ರಾಣೇಬೆನ್ನೂರು : ಲಿಂಗದಹಳ್ಳಿಯಲ್ಲಿ ಶ್ರೀ ಸ್ವಯಂಭು ಸೋಮೇಶ್ವರ ಮಾಂಗಲ್ಯ ಮಂದಿರದ ಉದ್ಘಾಟನೆ
ರಾಣೇಬೆನ್ನೂರು, ಏ.3- ವೀರಶೈವ ಧರ್ಮದಲ್ಲಿ ಕಾಯಕ ಧರ್ಮಕ್ಕೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಕ್ರಿಯಾಶೀಲ ಬದುಕು ಶ್ರೇಯಸ್ಸಿಗೆ ಮೂಲ. ಸಮುದಾ ಯದ ಅಭಿವೃದ್ಧಿಗೆ ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳ ಬೇಕೆಂದು ರಂಭಾಪುರಿ ಪೀಠದ ಡಾ. ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಲಿಂಗದಹಳ್ಳಿ ಹಿರೇಮಠದಲ್ಲಿ ನಿರ್ಮಿಸಿದ ಶ್ರೀ ಸ್ವಯಂಭು ಸೋಮೇಶ್ವರ ಮಾಂಗಲ್ಯ ಮಂದಿರ ಉದ್ಘಾಟಿಸಿ, ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಭಗವಂತನಿತ್ತ ಕೊಡುಗೆಗೆ ಸರಿ ಸಾಟಿಯಾದುದು ಇನ್ನೊಂದಿಲ್ಲ. ಆ ಭಗವಂತ ಕೊಟ್ಟಿರುವುದನ್ನು ಸದುಪಯೋಗ ಪಡಿಸಿಕೊಳ್ಳಬೇಕಾದುದು ಮನುಷ್ಯನ ಧರ್ಮವಾಗಿದೆ ಎಂದರು.
ದುಡಿಮೆಯಿಲ್ಲದ ಮತ್ತು ಶ್ರಮ ಪಡದೇ ಸಂಪತ್ತು ಬಯಸುವವರು ಬಹಳ ಜನರಿದ್ದಾರೆ. ಶ್ರಮದಿಂದ ಸಂಪಾ ದಿಸಿದ ಸಂಪತ್ತು ಸುಖ, ಶಾಂತಿ ತಂದು ಕೊಡಬಲ್ಲದು. ಶ್ರಮ ಪಡದ ಸಂಪತ್ತು ಶಾಶ್ವತವಲ್ಲ ಎಂದು ಹೇಳಿದರು.
ಜೀವನೋತ್ಸಾಹಕ್ಕೆ ಯೋಗ್ಯ ಮಾರ್ಗದರ್ಶನ ಮತ್ತು ಸಂಸ್ಕಾರ ಕೊಟ್ಟರೆ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗು ತ್ತದೆ. ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಕಾಯಕ ಧರ್ಮ ಅನುಸರಿಸಿ ಭೌತಿಕ ಮಾರ್ಗ ದಲ್ಲಿ ನಡೆಯುವ ಜನ ಸಮುದಾಯಕ್ಕೆ ದಿಕ್ಸೂಚಿಯಾಗಿ ದ್ದಾರೆ. ಅವರ ಸರಳತೆ ಮತ್ತು ಮುಗ್ಧ ಮನೋಭಾವದಿಂದಾಗಿ ಭಕ್ತ ಸಂಕುಲದ ಸಂತೋಷಕ್ಕೆ ಕಾರಣರಾಗಿದ್ದಾರೆ ಎಂದು ಹೇಳಿ, ಶ್ರೀಗಳವರಿಗೆ ಶ್ರೀ ಪೀಠದಿಂದ ರೇಷ್ಮೆ ಮಡಿ ಫಲ- ಪುಷ್ಪ ಸ್ಮರಣಿಕೆ ನೀಡಿ ಶುಭ ಹಾರೈಸಿದರು.
ನೇತೃತ್ವ ವಹಿಸಿದ್ದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿರೇಮಠದ ಇತಿಹಾಸದಲ್ಲಿ ಇವತ್ತಿನ ದಿನ ಅವಿಸ್ಮರಣೀಯವಾದ ಪವಿತ್ರ ದಿನವಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳವರ ಮಾರ್ಗದರ್ಶನದಲ್ಲಿ ಲಿಂಗದಹಳ್ಳಿ ಹಿರೇಮಠದ ಅಭಿವೃದ್ಧಿ ಮಾಡಿರುವೆ. ಈ ಭಾಗದ ಭಕ್ತರಿಗೆ ಸಂಸ್ಕಾರ, ಸದ್ವಿಚಾರಗಳನ್ನು ಮನೆ ಮನಕ್ಕೆ ಮುಟ್ಟಿಸಿದ ಸಂತೃಪ್ತ ಮನೋಭಾವ ನಮ್ಮದಾಗಿದೆ ಎಂದು ತಿಳಿಸಿದರು.
ಕಣ್ವಕುಪ್ಪಿ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು, ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ರಟ್ಟಿಹಳ್ಳಿ ಕಬ್ಬಿಣ ಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯರು, ಹಾರನಹಳ್ಳಿ ಶ್ರೀ ಶಿವಯೋಗಿ ಶಿವಾಚಾರ್ಯರು, ನೆಗಳೂರು ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯರು, ಕಡೇನಂದಿಹಳ್ಳಿ ರೇವಣಸಿದ್ಧ ಶಿವಾಚಾರ್ಯರು, ನಾಗವಂದ ಹೊರಗಿನಮಠದ ಶ್ರೀ ಶಿವಾನಂದ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ರಂಭಾಪುರಿ ಜಗದ್ಗುರುಗಳ 33ನೇ ವರ್ಷದ ಪೀಠಾರೋಹಣದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ, ಸ್ವಯಂಭು ಸೋಮೇಶ್ವರ ಮಾಂಗಲ್ಯ ಮಂದಿರ ಲೋಕಾರ್ಪಣೆ ಮತ್ತು ಶ್ರೀ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ ನೆರವೇರಿದವು. ಸಹಸ್ರಾರು ಭಕ್ತರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳವರ ಆಶೀರ್ವಾದ ಪಡೆದರು. ಹುಬ್ಬಳ್ಳಿಯ ಮಹಿಳಾ ಮಂಡಳದ ಸದಸ್ಯರಿಂದ ಭಕ್ತಿ ಗೀತೆ ಜರುಗಿತು. ಮಾಸೂರಿನ ಗುರುಪ್ರಸಾದ್ ಹಿರೇಮಠ ನಿರೂಪಿಸಿದರು.